ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಂಡವಾಳಶಾಹಿ ಪರ ನಿಲುವು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ

Rashmi Kasaragodu
Updated On : 12 Mar 2014, 1:00 am

ಕ.ಪ್ರ. ವಾರ್ತೆ    ರಾಯಚೂರು    ಮಾ.11
ದೇಶದ ವಿವಿಧ ರಾಜಕೀಯ ಪಕ್ಷಗಳ ಬಂಡಾವಳಶಾಹಿಗಳ ಪರ ನಿಲುವು, ದೇಶದ ಹಿತ ಕಡೆಗಣನೆ. ಜನವಿರೋಧಿ ಆರ್ಥಿಕ ನೀತಿಗಳಿಂದಾಗಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಧೋಗತಿಗಿಳಿದಿದೆ. ಅದರ ಉಳಿವಿಗಾಗಿ ಹಾಗೂ ಚುನಾವಣೆಯ ವ್ಯವಸ್ಥೆ ಶುದ್ಧೀಕರಣಕ್ಕೆ ಜಾಗೃತಿ ಮೂಡಿಸುವ ರೀತಿಯ ಚಳವಳಿಯ ಅವಶ್ಯಕತೆಯಿದೆ ಎಂದು ಜನಸಂಗ್ರಾಮ ಪರಿಷತ್ ಮುಖಂಡ ರಾಘವೇಂದ್ರ ಕುಷ್ಟಗಿ ಹೇಳಿದರು.
ನಗರದಲ್ಲಿ ಮಂಗಳವಾರ ಲೋಕಸತ್ತಾ ಮತ್ತು ಆಮ್ ಆದ್ಮಿ ಪಾರ್ಟಿ ವತಿಯಿಂದ ಚುನಾವಣೆ ವ್ಯವಸ್ಥೆ ಸುಧಾರಣೆ ಮತ್ತು ಪ್ರಜಾಪ್ರಭುತ್ವ ಸಂರಕ್ಷಣೆಗೆ ಸಂಬಂಧಿಸಿ ಆಯೋಜಿಸಿದ್ದ ಪ್ರಜಾಪ್ರಭುತ್ವದ ಉಳಿವಿಗಾಗಿ ಸಮಾವೇಶದಲ್ಲಿ ಮಾತನಾಡಿ, ದೇಶದಲ್ಲಿ ಇದುವರೆಗೆ ಆಡಳಿತ ನಡೆಸಿದ ಎಲ್ಲ ಪಕ್ಷಗಳ ಪ್ರಧಾನಿಗಳ ತಪ್ಪು ಹೆಜ್ಜೆ ಮತ್ತು ಭ್ರಷ್ಟಾಚಾರ ಪೋಷಿಸಿದ್ದರಿಂದಾಗಿ ದೇಶದ ಬಡವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಟೀಕಿಸಿದರು.
ಕಾರ್ಪೋರೇಟ್ ವಲಯಕ್ಕೇ ಲಾಭ: ಜಾಗತೀಕರಣ ಮತ್ತು ಉದಾರೀಕರಣ ನೀತಿಗಳಿಂದಾಗಿ ದೇಶದ ನಿವಾಸಿಗಳಿಗೆ ನಯಾಪೈಸೆಯ ಲಾಭವಾಗಿಲ್ಲ. ಬದಲಿಗೆ ಕಾರ್ಪೋರೇಟ್ ವಲಯಕ್ಕೆ ಭಾರೀ ಲಾಭವಾಗಿದೆ. ಬಂಡವಾಳ ಶಾಹಿಗಳ ಪರ ನಿಲುವು ಎಲ್ಲ ರಾಜಕೀಯ ಪಕ್ಷಗಳಿಗೆ ಹಣದ ಹೊಳೆಯನ್ನೇ ಹರಿಸುತ್ತಿದೆ. ಅದೇ ಹಣ ಚುನಾವಣೆಯಲ್ಲಿ ವೆಚ್ಚ ಮಾಡುವ ಮೂಲಕ ಚುನಾವಣೆಯ ವ್ಯವಸ್ಥೆಯನ್ನೇ ಪಕ್ಷಗಳು ಕಲುಷಿತಗೊಳಿಸಿವೆ ಎಂದು ಆರೋಪಿಸಿದರು.
ವಿವಿಧ ರಾಜಕೀಯ ಪಕ್ಷಗಳು ಪಕ್ಷದ ನಿಧಿಗೆ ದೇಶದ ನಿವಾಸಿಗಳಿಂದ ತಲಾ 20 ಹಣ ಸಂಗ್ರಹಿಸಿದ್ದಾಗಿ ಸುಳ್ಳು ಹೇಳುತ್ತಿವೆ. ವಾಸ್ತವದಲ್ಲಿ ಎಲ್ಲ ಪಕ್ಷಗಳೂ ಉದ್ಯಮಿಗಳು ನೀಡುವ ಕೋಟ್ಯಂತರ ರು.ಗೆ ಹಪಹಪಿಸುತ್ತಿವೆಯೇ ವಿನಃ ದೇಶದ ಅಭಿವೃದ್ಧಿ ಮತ್ತು ಜನರ ಹಿತಕ್ಕಾಗಿ ಅಲ್ಲ ಎಂದು ಹೇಳಿದರು.
ಚುನಾವಣೆಗೆ ಉದ್ಯಮಿಗಳಿಂದ ಹಣ: ದೇಶದ ಅಭಿವೃದ್ಧಿಯ ಕನಸು ಬಿತ್ತುತ್ತಿರುವ ನರೇಂದ್ರ ಮೋದಿ ಸೇರಿದಂತೆ ಎಲ್ಲ ಪ್ರಮುಖ ನಾಯಕರಿಗೆ ಉದ್ಯಮಿಗಳಿಂದಲೇ ಚುನಾವಣೆಗಾಗಿ ಎಲ್ಲ ರೀತಿಯ ಸೌಲಭ್ಯಗಳು ದೊರಕುತ್ತಿವೆ. ಬಂಡವಾಳಶಾಹಿಗಳ ಸೇವೆ ಸಲ್ಲಿಸಲು ರಾಜಕೀಯ ನಾಯಕರು ನಾ ಮುಂದು, ತಾ ಮುಂದು ಎಂದು ಮುಗಿಬೀಳಲು ಉದ್ಯಮಿಗಳು ಚುನಾವಣೆ ವೇಳೆ ನೀಡುವ ಹಣವೇ ಕಾರಣ ಎಂದು ಟೀಕಿಸಿದರು.
ಉದ್ಯಮಿಗಳಿಂದ ರಾಜಕೀಯ ಪಕ್ಷಗಳಿಗೆ ದೊರೆಯುತ್ತಿರುವ ಭಾರೀ ಮೊತ್ತದ ಹಣದಿಂದಾಗಿಯೇ ಮತದಾರರನ್ನು ಹಣ ನೀಡಿ ಖರೀ ದಿಸಲು ದಾರಿ ಮಾಡುತ್ತಿದೆ. ಮತದಾರರು ಸ್ವತಂತ್ರವಾಗಿ ಮತ ಚಲಾಯಿಸದಂಥ ಪರಿಸ್ಥಿತಿ ನಿರ್ಮಾಣವಾಗಲು ರಾಜಕೀಯ ನಾಯಕರು ಮತ್ತು ಬಂಡವಾಳಶಾಹಿಗಳ ತಂತ್ರವೇ ಕಾರಣ ಎಂದು ಆತಂಕ ವ್ಯಕ್ತಪಡಿಸಿದರು.
ಅಂತರ ಹೆಚ್ಚಳ: ಸರ್ಕಾರಗಳ ಆರ್ಥಿಕ ತಪ್ಪು ನೀತಿಯಿಂದಾಗಿ ಶ್ರೀಮಂತರು ಮತ್ತು ಬಡವರ ಮಧ್ಯೆ ಅಂತರ ಹೆಚ್ಚುತ್ತಿದೆ. ಇದರಿಂದಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಆಡಳಿತದ ಬಗ್ಗೆ ತೀವ್ರ ಅಸಮಾಧಾನ ಭುಗಿಲೆದ್ದಿದ್ದು, ನಕ್ಸಲಿಸಂಗೆ ಪ್ರೇರಣೆಯಾಗಿದೆ. ಆದರೆ ನಕ್ಸಲಿಸಂನಿಂದ ಈ ಸಮಸ್ಯೆಗೆ ಪರಿಹಾರ ದೊರೆಯದು. ಬದಲಿಗೆ ದೇಶದ ಮತದಾರರೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ದೇಶದ ಮತದಾರರಲ್ಲಿ ಜಾಗೃತಿ ಮೂಡಿಸುವುದು ಮೊದಲಾದ್ಯತೆಯಾಗಬೇಕಿದೆ. ಪಕ್ಷಗಳ ಸಿದ್ಧಾಂತದ ಆಧಾರದಲ್ಲಿ ಚುನಾವಣೆ ಎದುರಿಸುವುದು ಆಗಬೇಕಿದೆ. ಹಾಗೆಯೇ ಚುನಾವಣೆ ವ್ಯವಸ್ಥೆಯ ಶುದ್ಧೀಕರಣ ನಿಟ್ಟಿನಲ್ಲಿ ಈಗಾಗಲೇ ಸುಪ್ರೀಂ ಕೋರ್ಟಿನ ಆದೇಶದಂತೆ ಪ್ರಸಕ್ತ ಚುನಾವಣೆಯಲ್ಲಿ ಅಯೋಗ್ಯರಿಗೆ ಮತದಾನ ಮಾಡದಿರಲು ಮತದಾರರಿಗೆ ಅವಕಾಶ ಕಲ್ಪಿಸುವ ಸೌಲಭ್ಯ ಮತಯಂತ್ರದಲ್ಲಿ ಸೇರ್ಪಡೆಗೊಳಿಸಿದ್ದು, ಮತದಾರರು ಅದರ ಬಳಕೆಗೆ ಮುಂದಾಗಬೇಕಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕಿದೆ: ಮಹಿಳಾ ಮೀಸಲಾತಿ ಜಾರಿ, ಪಕ್ಷದ ನಿಧಿಗೆ ಹರಿಯುವ ಹಣದ ಹೊಳೆಯ ಮೂಲದ ಬಗ್ಗೆ ಸಾರ್ವಜನಿಕರಿಗೆ ತಿಳಿಯಪಡಿಸುವುದು ಸೇರಿ ವಿವಿಧ ಅಂಶಗಳ ಮೂಲಕ ಜನಜಾಗೃತಿ ಕೈಗೊಂಡು ಚುನಾವಣೆ ವ್ಯವಸ್ಥೆಯ ಸುಧಾರಣೆ ಜತೆಜತೆಗೆ ಪ್ರಜಾಪ್ರಭುತ್ವ ಗಟ್ಟಿಗೊಳಿಸಬಹುದಾಗಿದೆ ಎಂದು ಹೇಳಿದರು.
ಸಮಾವೇಶದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಹಾಗೂ ಸಾಮಾಜಿಕ ಹೋರಾಟಗಾರ ರಘುನಾಥರಾವ್ ವಹಿಸಿದ್ದರು. ಲೋಕಸತ್ತಾ ಪಾರ್ಟಿ ಜಿಲ್ಲಾಧ್ಯಕ್ಷ ರಾಮಣ್ಣ ಆರ್.ಎಚ್.ಜೆ., ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯ ಜಿಲ್ಲಾಧ್ಯಕ್ಷ ದೇವಮಿತ್ರ ವಕೀಲರು, ಆಮ್ ಆದ್ಮಿ ಪಾರ್ಟಿಯ ಸ್ವಯಂ ಸೇವಕ ಆನಂದ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement