ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ
ಯಾದಗಿರಿ: ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಬೆಳೆ ನಷ್ಟವಾಗಿದ್ದು ಕೂಡಲೇ ರೈತರಿಗೆ ವೈಜ್ಞಾನಿಕವಾಗಿ ಬೆಳೆ ಪರಿಹಾರ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟ ಮಾತನಾಡಿ, ಕಬ್ಬು ಬೆಳಗಾರರಿಗೆ ಸರ್ಕಾರ ನಿಗದಿಗೊಳಿಸಿದ ರು. 2,650ಗಳನ್ನು ನಿಯಮಾನುಸಾರ ವಿತರಿಸಬೇಕು. ಜಿಲ್ಲೆಯ ಬಸವಸಾಗರ ಜಲಾಶಯದ ನೀರನ್ನು ಮಾ. 31ರವರೆಗೆ ರೈತರ ಜಮೀನಿಗೆ ನೀರು ಬಿಡಿಸಬೇಕೆಂದು ಮನವಿ ಮಾಡಿದರು.
ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿಯವರ ವೇಬ್ರೀಜ್ಗಳನ್ನು ಗಣಿಕೀಕರಿಸಿ ಅವುಗಳ ರಸೀದಿಗಳಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿದ ರೈತನ ಹಾಗೂ ಖರೀದಿಸಿದ ವ್ಯಾಪಾರಿಯ ಹೆಸರನ್ನು ನಮೂದಿಸಬೇಕು ಎಂದು ಆಗ್ರಹಿಸಿದರು.
ಕೃಷ್ಣ ಭಾಗ್ಯ ಜಲ ನಿಗಮದ ಮುಖ್ಯ ಎಂಜಿನಿಯರ್ಗಳು ಅಧಿಕಾರಕ್ಕಾಗಿ ಕಚ್ಚಾಡುತ್ತಿರುವುದರಿಂದ ರೈತರ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ. ಈ ಅಧಿಕಾರಿಗಳು ಸರ್ಕಾರ ಸೂಚಿಸಿದ ಸ್ಥಳಗಳಿಗೆ ತೆರಳಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಸಂಗಣ್ಣ ಗುಳಿಗಿ, ಶರಣಗೌಡ ಮುಮ್ಮಟಿಗಿ, ವಿಶ್ವನಾಥರೆಡ್ಡಿ ಗೊಂದಡಿಗಿ ಮುಂತಾದವರು ಇದ್ದರು.