ಬೆಳೆ ಹಾನಿ ಪರಿಹಾರಕ್ಕೆ ಆಗ್ರಹ
ಕ.ಪ್ರ. ವಾರ್ತೆ ರಾಯಚೂರು ಮಾ.11
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ರೈತರು ಬೆಳೆದಿದ್ದ ತೋಟಗಾರಿಕೆ ಮತ್ತಿತರೆ ಬೆಳೆಗಳು ಈಚೆಗೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಹಾನಿಗೀಡಾಗಿದ್ದು, ಕೂಡಲೇ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನಾ ರ್ಯಾಲಿ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ರಾಯಚೂರು ತಾಲೂಕಿನ ಮಾಸದೊಡ್ಡಿ, ಯರಗೇರಾ, ಪಂಚಮುಖಿಗಾಣದಾಳ, ಚಂದ್ರಬಂಡಾ ಹೋಬಳಿ ಸೇರಿದಂತೆ ವಿವಿಧೆಡೆ ಆಲಿಕಲ್ಲು ಮಳೆ ಈಚೆಗೆ ಸುರಿದಿದ್ದರಿಂದ ರೈತರು ಬೆಳೆದಿದ್ದ ಈರುಳ್ಳಿ, ಬತ್ತ, ಹತ್ತಿ, ಶೇಂಗಾ, ತಂಬಾಕು ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ ಎಂದು ದೂರಿದರು.
ಬೆಳೆ ಹಾನಿ: ಅದೇ ರೀತಿ ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಗುರುಗುಂಟಾ ಹೋಬಳಿಯ ಸುಮಾರು 25 ಗ್ರಾಮಗಳಲ್ಲಿ ಈಚೆಗೆ ಸುರಿದ ಧಾರಾಕಾರ ಆಲಿಕಲ್ಲು ಮಳೆಗೆ ತೋಟಗಾರಿಕೆ ಬೆಳೆ ಪಪ್ಪಾಯ, ಮೆಕ್ಕೆಜೋಳ, ಬಿಳಿಜೋಳ ಸೇರಿದಂತೆ ಕೋಟ್ಯಂತರ ರು. ಬೆಳೆ ಹಾನಿಗೀಡಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಇದುವರೆಗೆ ಆಲಿಕಲ್ಲು ಈ ಪ್ರಮಾಣದಲ್ಲಿ ಬಿದ್ದು ಬೆಳೆ ಹಾನಿ ಸೃಷ್ಟಿಸಿರಲಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಆಲಿಕಲ್ಲು ಮಳೆ ಸುರಿದು ಐದು ದಿನಗಳೇ ಕಳೆದರೂ ಕಂದಾಯ ಮತ್ತು ಕೃಷಿ ಅಧಿಕಾರಿಗಳು ಹಾನಿಗೀಡಾದ ಪ್ರದೇಶಕ್ಕೆ ಭೇಟಿ ನೀಡಿಲ್ಲ ಎಂದು ದೂರಿದರು.
ಅಧಿಕಾರಿಗಳು ರೈತರ ಜಮೀನುಗಳಿಗೆ ಇದುವರೆಗೆ ಭೇಟಿ ನೀಡಿಲ್ಲ. ಕಚೇರಿಯಲ್ಲಿಯೇ ಕುಳಿತು ಕಾಟಾಚಾರದ ಹಾನಿ ಸಮೀಕ್ಷೆ ವರದಿ ತಯಾರಿಸುತ್ತಿದ್ದು, ಅಂಥ ಯಾವುದೇ ರೀತಿಯ ವರದಿಗೆ ರಾಜ್ಯ ರೈತ ಸಂಘದ ತೀವ್ರ ವಿರೋಧವಿದೆ ಎಂದ ಹೋರಾಟಗಾರರು, ಮಳೆಯಿಂದಾಗಿ ಅನೇಕ ಕಡೆ ಬಡವರು ವಾಸವಾಗಿರುವ ಮನೆಗಳು ಕುಸಿದಿವೆ. ಅಧಿಕಾರಿಗಳು ನೀತಿ ಸಂಹಿತೆ, ಚುನಾವಣೆಯ ನೆಪಮೊಡ್ಡಿ ಜಾರಿಕೊಳ್ಳದೇ ಜನತೆಗೆ ಆಗಿರುವ ಬೆಳೆ ಮತ್ತು ಆಸ್ತಿ ಹಾನಿಯ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.
ವೈಜ್ಞಾನಿಕ ಸಮೀಕ್ಷೆ: ತೋಟಗಾರಿಕೆ ಬೆಳೆಗಳಿಗೆ ಆಗಿರುವ ಹಾನಿಗೆ ಪ್ರತಿಯಾಗಿ ವೈಜ್ಞಾನಿಕ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು. ಅದೇ ರೀತಿ ಇನ್ನಿತರೆ ಬೆಳೆಗಳಿಗೆ ಆಗಿರುವ ಹಾನಿಗೆ ಪ್ರತಿಯಾಗಿ ಪ್ರತಿ ಎಕರೆಗೆ ರು. 30ರಿಂದ 35 ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಆಲಿಕಲ್ಲು ಮಳೆ ಸುರಿದಿರುವ ಎಲ್ಲ ಗ್ರಾಮಗಳಿಗೆ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಬೇಕು. ರೈತರ ಜಮೀನಿಗೆ ತೆರಳಿ ಹಾನಿಯನ್ನು ಅಂದಾಜು ಮಾಡಬೇಕು. ಮಳೆಯಿಂದಾಗಿ ಮನೆಗಳು ಬಿದ್ದಿದ್ದು, ಮನೆ ಪುನಾ ನಿರ್ಮಾಣಕ್ಕೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಧರಣಿ ಎಚ್ಚರಿಕೆ: ಆಲಿಕಲ್ಲು ಮಳೆಗೆ ಸಿಲುಕಿ ಕುರಿ, ಮೇಕೆ ಮತ್ತಿತರೆ ಜಾನುವಾರುಗಳು ಸಾವಿಗೀಡಾಗಿದ್ದು, ಅವುಗಳ ಮಾಲಿಕರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಹೋರಾಟಗಾರರು ಆಗ್ರಹಿಸಿದ್ದು, ಈ ನಿಟ್ಟಿನಲ್ಲಿ ಕೂಡಲೇ ಜಿಲ್ಲಾಡಳಿತದ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿದ್ದಲ್ಲಿ ಶೀಘ್ರವೇ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟ ಧರಣಿ ನಡೆಸುವುದಾಗಿ ಹೋರಾಟಗಾರರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ್, ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಜಿಲ್ಲಾ ಗೌರವಾಧ್ಯಕ್ಷ ದೊಡ್ಡ ಬಸನಗೌಡ ಬಲ್ಲಟಗಿ, ವೀರನಗೌಡ, ನರಸಿಂಗರಾವ್ ಕುಲಕರ್ಣಿ, ವೀರೇಶಗೌಡ, ಜಯಪ್ಪಸ್ವಾಮಿ, ಹುಲಿಗೆಪ್ಪ, ಚಾಂದ್ ಸಾಬ್, ಭೂಪಯ್ಯ ಜಂಬಲದಿನ್ನಿ, ತಿಕ್ಕಯ್ಯ ಕುರುಬದೊಡ್ಡಿ ಸೇರಿ ಅನೇಕರಿದ್ದರು.