ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶಿಕ್ಷಣಕ್ಕಿಂತ ಸಂಸ್ಕೃತಿ ಮುಖ್ಯ

Rashmi Kasaragodu
Updated On : 12 Mar 2014, 12:57 pm

ಕ.ಪ್ರ. ವಾರ್ತೆ    ಸಿಂಧನೂರು    ಮಾ.11
ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಿಂತ ಸಂಸ್ಕೃತಿ ಅತ್ಯಂತ ಮುಖ್ಯವಾಗಿದೆ ಎಂದು ರುದ್ರಗೌಡ ಸ್ಮಾರಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಜಿ. ಬಿರಾದಾರ ಹೇಳಿದರು.
ನಗರದ ಆರ್‌ಜಿಎಂ ಸಂಸ್ಥೆಯ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, 9ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಾಗತ, ಹಳೆ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್ಸೆಸ್ಸೆಲ್ಸಿ ನಂತರ ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಧಾರವಾಡ, ಹುಬ್ಬಳ್ಳಿ, ಮಂಗಳೂರು, ಮೂಡಬಿದರೆ ಮತ್ತಿತರ ಕಾಲೇಜುಗಳಿಗೆ ಪ್ರವೇಶ ಕೊಡಿಸುತ್ತಾರೆ. ದುರ್ದೈವದ ಸಂಗತಿ ಎಂದರೆ- ಇಲ್ಲಿನ ವಿದ್ಯಾರ್ಥಿಗಳೇ ಅಲ್ಲಿ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆಯಾಗುತ್ತಾರೆ. ಹೆಸರು ಮಾತ್ರ ಆಯಾ ಊರಿನ ಕಾಲೇಜುಗಳಿಗೆ ಬರುತ್ತದೆ. ಅದೇ ವಿದ್ಯಾರ್ಥಿಗಳು ಇಲ್ಲಿಯೇ ಅಭ್ಯಾಸ ಮಾಡಿದರೆ, ಸಿಂಧನೂರಿನ ಕೀರ್ತಿ ರಾಜ್ಯ ಮಟ್ಟಕ್ಕೆ ಬೆಳಗುತ್ತದೆ ಎಂದರು.
ಉಚಿತ ಪ್ರವೇಶ: ಯಾವುದೇ ಶಾಲೆಯಲ್ಲಿ ಶೇ.90 ಅಂಕಗಳನ್ನು ಪಡೆದು ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆಯಾಗಿದ್ದರೆ, ತಮ್ಮ ಕಾಲೇಜಿನಲ್ಲಿ ಉಚಿತ ಪ್ರವೇಶ ಕೊಡಲಾಗುವುದು. ಇದರ ಸದುಪಯೋಗವನ್ನು ತಾಲೂಕಿನ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಪ್ರೌಢಶಾಲೆಯ ಕನ್ನಡ ಶಿಕ್ಷಕ ಆರ್.ಬಿ. ಬಡಿಗೇರ್ ಮಾತನಾಡಿ, ಸ್ವಾಭಿಮಾನವಿಲ್ಲದ ಬದುಕಿಗೆ ಅರ್ಥವಿಲ್ಲ. ವಿದ್ಯಾರ್ಥಿಗಳು ಸ್ವಾಭಿಮಾನದಿಂದ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಪಡೆಯಬೇಕು. ಇದಕ್ಕೆ ಮುಖ್ಯವಾಗಿ ನಿರಂತರ ಪ್ರಯತ್ನವಿರಬೇಕು. ಅಂದಾಗ ಜಯಶಾಲಿಗಳಾಗಲು ಸಾಧ್ಯ ಎಂದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಹ್ಲಾದ ಗುಡಿ, ನ್ಯಾಯವಾದಿ ಬಸವರಾಜ ಶಿಗರಗಡ್ಡಿ ಮಾತನಾಡಿದರು.
ಸನ್ಮಾನ: ಇದೇ ವೇಳೆ ಆರ್‌ಜಿಎಂ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದ ಚನ್ನಪ್ಪ ಬಂಗಾರಶೆಟ್ಟಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಕ್ಕೆ, ಗುಲ್ಬರ್ಗ ವಿವಿಯಲ್ಲಿ ಎಂಎಸ್‌ಸಿ ಗಣಿತ ವಿಭಾಗದಲ್ಲಿ 7 ಚಿನ್ನದ ಪದಕ ಪಡೆದ ಶಾಲೆಯ ಹಳೇ ವಿದ್ಯಾರ್ಥಿ ಹುಸೇನ್ ಬಾಷಾ, ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.96 ಅಂಕ ಪಡೆದಿದ್ದ ವಿದ್ಯಾರ್ಥಿನಿ ಮೋನಿಕಾ, ರಾಜ್ಯ ಮಟ್ಟದ 16 ವರ್ಷದೊಳಗಿನ ರಾಜ್ಯ ಕ್ರಿಕೆಟ್‌ಗೆ ಆಯ್ಕೆಯಾದ ಮನೋಜ್ ಬಾಂಡಗೆ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಾದ ಯಾಸೀನ್, ಭಾರ್ಗವಿ, ನರ್ಮದಾ, ಸುಷ್ಮಾ, ಶಾಂಭವಿ, ಶ್ರೀಲೇಖ, ಮಧು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಕೀಲ ವಿಜಯಕುಮಾರ ಹಟ್ಟಿ, ಆರ್‌ಜಿಎಂನ ಪ್ರಾಥಮಿಕ ಶಾಲಾ ಮುಖ್ಯಗುರು ರಾಜಶೇಖರ ಖಾನಾಪುರ, ಶಿಕ್ಷಕರಾದ ಪಾಂಡುರಂಗ ದೇಸಾಯಿ, ಧರ್ಮಾಯತ, ಪಂಪನಗೌಡ, ಮಹೇಶ, ವೆಂಕಟೇಶ ಕುಲಕರ್ಣಿ ಪಾಲ್ಗೊಂಡಿದ್ದರು. ಶಿಕ್ಷಕ ಶಿವನಗೌಡ ಅತಿಥಿಗಳನ್ನು ಪರಿಚಯಿಸಿದರು. ಐಶ್ವರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement