ಸಹಾಯಕ ನಿರ್ದೇಶಕರ ಕಚೇರಿಗೆ ಬಿಸಿಯೂಟ ನೌಕರರ ಮುತ್ತಿಗೆ
ಕ.ಪ್ರ. ವಾರ್ತೆ ಲಿಂಗಸ್ಗೂರು ಮಾ.11
ತಾಲೂಕಿನ ಹಟ್ಟಿ, ಮಸ್ಕಿ, ಸಂತೆಕೆಲ್ಲೂರು, ಭೂಪುರ ಸೇರಿದಂತೆ ಅನೇಕ ಗ್ರಾಮಗಳ ಬಿಸಿಯೂಟ ನೌಕರರಿಗೆ ವೇತನ, ಗ್ಯಾಸ್ ಹಾಗೂ ತರಕಾರಿ ಬಿಲ್ ಪಾವತಿಸುವಂತೆ ಆಗ್ರಹಿಸಿ ಬಿಸಿಯೂಟ ನೌಕರರು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಒತ್ತಾಯಿಸಿದರು.
ಬಿಸಿಯೂಟ ನೌಕರರಿಗೆ ಕಳೆದ ಮೂರು ತಿಂಗಳಿಂದ ವೇತನ ಮತ್ತು 9 ತಿಂಗಳಿಂದ ತರಕಾರಿ ಹಾಗೂ ಗ್ಯಾಸ್ ಬಿಲ್ ಪಾವತಿಸದ ಕಾರಣ ಬಿಸಿಯೂಟ ಕಾರ್ಯ ಸ್ಥಗಿತಗೊಳಿಸುವ ಪ್ರಸಂಗ ಎದುರಾಗಿದ್ದು, ಸಾಲ ಮಾಡಿ ಗ್ಯಾಸ್, ತರಕಾರಿ, ಕಟ್ಟಿಗೆ ತಂದು ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಸಿ ಬಡಿಸಲಾಗುತ್ತಿದೆ. ಇದರ ಬಿಲ್ ಪಾವತಿಸುವಂತೆ ಅಧಿಕಾರಿಗಳಿಗೆ ಕೇಳಿದರೆ ನಾಳೆ, ನಾಡಿದ್ದು ಬರುವಂತೆ ಸಬೂಬು ಹೇಳುತ್ತಾ ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿದರು.
ಬಿಸಿಯೂಟ ನೌಕಕರಿಗೆ ತೊಂದರೆ: ಅಕ್ಷರ ದಾಸೂಹದ ಸಹಾಯಕ ನಿರ್ದೇಶಕರು ಸಿಬ್ಬಂದಿಗೆ ಏಕವಚನದಲ್ಲಿ ಮಾತನಾಡುತ್ತಿದ್ದು, ಇದರಿಂದ ಅನೇಕ ಶಾಲಾ ಸಿಬ್ಬಂದಿ ಕಚೇರಿಗೆ ಬರಲು ಹೆದರುತ್ತಿದ್ದಾರೆ. ಬಿಸಿಯೂಟಕ್ಕೆ ಬರುವ ಆಹಾರ ಧಾನ್ಯಗಳ ಸಂಗ್ರಹಣೆ ಮಾಡುವ ಕೊಠಡಿ ಬೀಗವನ್ನು ಶಾಲಾ ಮುಖ್ಯ ಗುರುಗಳಿಗೆ ನೀಡಿರುತ್ತಾರೆ. ಇದರಿಂದ ಆಹಾರ ಪದಾರ್ಥ ಕಳ್ಳತನವಾಗುತ್ತಿದ್ದು, ಇದಕ್ಕೆ ಅಡುಗೆ ಸಿಬ್ಬಂದಿಗೆ ಹೊಣೆಯಾಗಿಸಲಾಗುತ್ತಿದೆ ಎಂದು ದೂರಿದರು.
3 ತಿಂಗಳಿಗೊಮ್ಮೆ ಸಭೆ ಕರೆಯಿರಿ: ಅಡುಗೆ ಸಿಬ್ಬಂದಿ ಜೊತೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಕರೆಯಬೇಕು. ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಬಗೆಹರಿಸಬೇಕು. ಆದರೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜ್ ಛಲವಾದಿ ಅವರು ಅಧಿಕಾರ ವಹಿಸಿಕೊಂಡ ನಂತರ ಇದುವರೆಗೆ ಈ ಕಾರ್ಯ ಕೈಗೊಂಡಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಬಿಸಿಯೂಟ ನೌಕರರಾದ ತುಳುಜಾಬಾಯಿ, ಮಲ್ಲಮ್ಮ, ಯಲ್ಲಮ್ಮ, ನಾಗರತ್ನ ಸಂತೆಕೆಲ್ಲೂರು, ಪದ್ದಮ್ಮ, ಶಂಕ್ರಮ್ಮ ಭೂಪುರ ಸೇರಿದಂತೆ ಇನ್ನಿತರರು ಇದ್ದರು.