31ರವರೆಗೆ ನೀರು ಹರಿಸದಿದ್ದರೆ ಕಚೇರಿಗೆ ಮುತ್ತಿಗೆ
ಲಿಂಗಸ್ಗೂರು: ನಾರಾಯಣಪುರ ಬಲದಂಡೆ, ಎಡದಂಡೆ ಹಾಗೂ ರಾಂಪೂರ ಏತನೀರಾವರಿ ಯೋಜನೆ ಕಾಲುವೆಗಳಿಗೆ ಮಾ. 31ರವರೆಗೆ ನೀರು ಹರಿಸದಿದ್ದರೆ ಕೃಷ್ಣಾ ಭಾಗ್ಯ ಜಲನಿಗಮ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನಾ ಧರಣಿ ನಡೆಸಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಎಚ್ಚರಿಕೆ ನೀಡಿದರು.
ಎನ್‌ಆರ್‌ಬಿಸಿ ಹಾಗೂ ರಾಂಪೂರ ಕಾಲುವೆಗಳಿಗೆ ನೀರು ಹರಿಸುವ ಸಂಬಂಧ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತರನ್ನು ಕಡೆಗಣಿಸಿ ಮಾ.10 ರವರೆಗೆ ನೀರು ಹರಿಸುವ ನಿರ್ಧಾರ ತೆಗೆದುಕೊಂಡಿರುವುದು ಅತ್ಯಂತ ಅವೈಜ್ಞಾನಿಕವಾಗಿದೆ. ತಾಲೂಕಿನಲ್ಲಿ ಹಿಂಗಾರು ಬಿತ್ತನೆಯಲ್ಲಿ ಬತ್ತ, ಶೇಂಗಾ, ಹತ್ತಿ ಹಾಗೂ ತೋಟಗಾರಿಕೆ ಬೆಳೆಗಳು ನಾಲ್ಕು ತಿಂಗಳ ಅವಧಿಯದ್ದಾಗಿದ್ದು, ಇವುಗಳಿಗೆ ಕನಿಷ್ಟ ನಾಲ್ಕು ತಿಂಗಳು ನೀರಿನ ಅಗತ್ಯವಿದೆ. ಸಲಹಾ ಸಮಿತಿ ತೀರ್ಮಾನದ ಪ್ರಕಾರ ಕೇವಲ ಎರಡೂವರೆ ತಿಂಗಳು ನೀರು ಹರಿಸಲು ನಿರ್ಧರಿಸಿದಂತಾಗಲಿದೆ. ಇದರಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಬರುವುದಿಲ್ಲ.
ಬಾಕಿ ನೀರು ಹರಿಸಿ: ನೀರಾವರಿ ಅಧಿಕಾರಿಗಳು ನೀರಿನ ನಿರ್ವಹಣೆಯಲ್ಲಿ ಜಾಣ ನೀತಿ ಅನುಸರಿಸಿದ್ದು, ವಾರಬಂದಿ ಮೂಲಕ ನೀರು ಹರಿಸಲಾಗುತ್ತಿದೆ. ಆದರೆ ಇದರಲ್ಲಿಯೂ 15 ದಿನ ಅಂತರ ಕಾಯ್ದುಕೊಂಡಿದ್ದಾರೆ. ಕೂಡಲೇ ಬಾಕಿ ಇರುವ 15 ದಿನದ ನೀರು ಹಾಗೂ ಹೆಚ್ಚುವರಿಯಾಗಿ ಒಂದು ವಾರಕಾಲ ಕಾಲುವೆಗಳಿಗೆ ನೀರು ಹರಿಸಬೇಕು. ಚುನಾವಣಾ ಆಯೋಗ ನೀತಿ ಸಂಹಿತೆ ನೀರು ಹರಿಸುವ ವಿಚಾರದಲ್ಲಿ ತರಕೂಡದು. ರೈತರ ಹಿತ ಕಾಪಾಡುವ ಹಿತದೃಷ್ಟಿಯಿಂದ ಈ ವಿಷಯವನ್ನು ನೀತಿ ಸಂಹಿತೆಯಿಂದ ದೂರವಿಟ್ಟು ಬೆಳೆಗಳ ರಕ್ಷಣೆಗೆ ಆದ್ಯತೆ ನೀಡಬೇಕು.
ತಾಲೂಕಿನಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿದ್ದು, ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮಗ್ರವಾಗಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕು. ಮಾ.31ರವರೆಗೆ ಕಾಲುವೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಜಿಲ್ಲಾ ಸಮಿತಿ ಸಭೆ ನಡೆಸಿ ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನದಿಂದ ದೂರವಿರುವ ತೀರ್ಮಾನ ತೆಗೆದುಕೊಂಡು ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.