ಅನ್ನದಾನ ಶ್ರೇಷ್ಠ ದಾನ: ಸೋಲಾಪುರಶ್ರೀ
ಜೇವರ್ಗಿ: ಎಲ್ಲ ದಾನಕ್ಕಿಂತ ಅನ್ನ ದಾನ ಶ್ರೇಷ್ಠ. ಈ ನಿಟ್ಟಿನಲ್ಲಿ ಜೇವರ್ಗಿ ಭಕ್ತಾದಿಗಳು ಪ್ರತಿ ವರ್ಷ ಶ್ರೀಶೈಲಕ್ಕೆ ಪಾದಯಾತ್ರೆ ತೆರಳುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸುತ್ತಿರುವುದು ಶ್ಲಾಘನೀಯವೆಂದು ಸೋಲಾಪುರದ ರಾಜಶೇಖರಯ್ಯಸ್ವಾಮಿ ಹೇಳಿದರು.
ಅವರು ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ತೆರಳುವ ಭಕ್ತಾದಿಗಳಿಗೆ ಪಟ್ಟಣದ ಮಾಳಿಂಗೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿ ವತಿಯಿಂದ ಆಯೋಜಿಸಿದ್ದ ಪ್ರಸಾದ ಕಾರ್ಯಕ್ರಮದ ನಂತರ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 1976ರಿಂದ ಪ್ರಾರಂಭವಾದ ಈ ಪಾದಯಾತ್ರೆಗೆ ಇಂದಿಗೆ 36 ವರ್ಷಗಳು ತುಂಬಿದೆ. ಪ್ರತಿ ವರ್ಷ ಸೋಲಾಪುರದಿಂದ-ಶ್ರೀಶೈಲಕ್ಕೆ ನೂರಾರು ಜನ ಭಕ್ತಾದಿಗಳು, ಮಹಿಳೆಯರು ಪಾದಯಾತ್ರೆ ಮೂಲಕ ತೆರಳುತ್ತಾರೆ. ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ಜ್ಯೋತಿರ್ಲಿಂಗ ಶ್ರೀಶೈಲವಾಗಿದೆ. ಜೇವರ್ಗಿ ಪಟ್ಟಣದಲ್ಲಿ ಸಾಹೇಬಗೌಡ ಕಲ್ಲಾ, ಕೃಷಿ ಇಲಾಖೆ ಸಿಬ್ಬಂದಿ ಹಾಗೂ ಮಾಳಿಂಗೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯವರು ಪ್ರತಿ ವರ್ಷ ಪ್ರಸಾದ ವ್ಯವಸ್ಥೆ ಕಲ್ಪಿಸುತ್ತಾರೆ. ದೇವರು ಅವರಿಗೆ ಆಯುಷ್ಯ, ಆರೋಗ್ಯಭಾಗ್ಯ ಕೊಟ್ಟು ಕರುಣಿಸಲಿ ಎಂದು ಸ್ವಾಮೀಜಿ ಹಾರೈಸಿದರು.
ಸಿದ್ಧರಾಮಯ್ಯ ಸ್ವಾಮೀಜಿ, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ನಿಂಗಣ್ಣ ಭಂಡಾರಿ, ವೀರೇಶ ಪಾಟೀಲ್ ನರಿಬೋಳ, ಸಾಹೇಬಗೌಡ ಕಲ್ಲಾ, ಮಲ್ಲಶಟ್ಟೆಪ್ಪಗೌಡ ಹಿರೇಗೌಡ ಅತಿಥಿಗಳಾಗಿ ಆಗಮಿಸಿದ್ದರು.
ರಾಮಣ್ಣ ಪೂಜಾರಿ, ಪಪಂ.ಸದಸ್ಯ ಶರಣಗೌಡ ಸರಡಗಿ, ಮಾಳಿಂಗೇಶ್ವರ ಟ್ರಸ್ಟ್ ಅಧ್ಯಕ್ಷ ಬೀರಲಿಂಗ ಪೂಜಾರಿ ಹನ್ನೂರ, ಗೊಲ್ಲಾಳಪ್ಪ ಪೂಜಾರಿ, ದತ್ತು ಪೂಜಾರಿ, ಟ್ರಸ್ಟ್ ಕಮಿಟಿ ಸದಸ್ಯರು, ಕುರುಬ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.