ಡಿಸಿ ಕಚೇರಿ ಮುಂದೆ ವಿನೂತನ ಮಹಿಳಾ ದಿನಾಚರಣೆ
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.12
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಸಮಾಜದ ವಿವಿಧ ಸ್ತರಗಳಲ್ಲಿದ್ದುಕೊಂಡು, ತಮ್ಮದೇ ಆದ ಕ್ರಿಯಾಶೀಲತೆಯೊಂದಿಗೆ ಸಮಾಜ ಕಟ್ಟುವಲ್ಲಿ ಶ್ರಮಿಸುತ್ತಿರುವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಇಡೀದಿನ ಹೋರಾಟ ನಡೆಸಿದರು. ಅಲ್ಲದೆ ತಮ್ಮನ್ನು ಕಾಡುತ್ತಿರುವ ಹಲವು ಹಂತಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಜಿಲ್ಲಾಡಳಿತದ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.
ಜನವಾದಿ ಮಹಿಲಾ ಸಂಘಟನೆ, ಪ್ರಜ್ಞಾ ಕಾನೂನು ನೆರವು ಸಂಸ್ಥೆ, ವಿವಿಧ ಅಧ್ಯಾಪಕರ ಸಂಘಟನೆಗಳು, ಸರ್ಕಾರಿ ನೌಕರರ ಸಂಘ ಸೇರಿದಂತೆ 10ಕ್ಕೂ ಅಧಿಕ ಸಂಘಟನೆಗಳ ಪುರುಷ ಹಾಗೂ ಮಹಿಳಾ ಸದಸ್ಯರು ಹೋರಾಟದಲ್ಲಿ ಇಡೀದಿನ ಉತ್ಸಾಹದೊಂದಿಗೆ ಭಾಗವಹಿಸಿದ್ದರು. ಜನವಾದಿ ಸಂಘಟನೆಯ ಹೋರಾಟಗಾರ್ತಿ ಕೆ. ನೀಲಾ ಮಾತನಾಡುತ್ತ, ಸರ್ಕಾರ ಮಹಿಳೆಯರ ಪರ ತಳೆಯುತ್ತಿರುವ ಉಪೇಕ್ಷೆ ನೀತಿಗಳನ್ನು ಕಟು ಶಬ್ದಗಳಲ್ಲಿ ಖಂಡಿಸಿದರು.
ಮೀಸಲಾತಿ ಜಾರಿಯಾಗಲಿ: ಮಹಿಳೆಯರಿಗೆ ಶೇ. 33 ಮೀಸಲಾತಿ ಜಾರಿಯಾಗಬೇಕು. ಮಹಿಳೆಗೆ ಸುರಕ್ಷತೆ ನೀಡಬೇಕು, ದೌರ್ಜನ್ಯ ತಡೆಯಲು ಸೂಕ್ತ ಕಾನೂನುಗಳು ಜಾರಿಗೊಳ್ಳಬೇಕು. ಕರ್ನಾಟಕದಲ್ಲಿ ಮಹಿಳಾ ಆಯೋಗ ಪುನಾರಚನೆಯಾಗಬೇಕು. ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ತಡೆಯಬೇಕು. ಸಾರ್ವಜನಿಕ ಆರೋಗ್ಯ ರಂಗ ಬಲಗೊಳ್ಳಬೇಕು. ಸಮಾಜದ ಅಭದ್ರ ವಿಭಾಗಗಳಿಗೆ ಬಲ ನೀಡಬೇಕು, ಶಿಕ್ಷಣ, ಉದ್ಯೋಗ ರಂಗದಲ್ಲಿ ಮಹಿಳೆ.ರಿಗೂ ಸಮಾನ ಹಕ್ಕು ದೊರಕಬೇಕು. ಕೋಮು-ದ್ವೇಷಕ್ಕೆ ಕಾರಣವಾಗುವ ದುಷ್ಟಶಕ್ತಿಗಳ ವಿರುದ್ಧ ಬಿಗಿ ಕಾನೂನು ಕ್ರಮ ಜರುಗಿಸಬೇಕು. ಚುನಾವಣೆ ಕೆಲಸಕ್ಕೆ ಮಹಿಳೆಯರಿಗೆ ನೇಮಿಸಿಕೊಳ್ಳುವಾಗ ಮತಗಟ್ಟೆಗಳಲ್ಲಿ ಕನಿಷ್ಟ ಸವಲತ್ತುಗಳು ಇರುವಂತೆ ನೋಡಿಕೊಳ್ಳಬೇಕು. ಮತಗಟ್ಟೆ ಒಂದರಲ್ಲಿ ಕನಿಷ್ಟ ಇಬ್ಬರು ಮಹಿಳೆಯರನ್ನು ನೇಮಕ ಮಾಡಬೇಕು.
ಬೇಡಿಕೆ: ಅಂಗನವಾಡಿ ಖಾಸಗೀಕರಣ ಕೈ ಬಿಡಬೇಕು. ಹೆಚ್ಚಿನ ಕೆಲಸದ ಹೊರೆಯಿಂದ ಅವರಿಗೆ ಮುಕ್ತಿ ದೊರಕುಂತಾಗಬೇಕು. ಚುನಾವಣೆ, ಪಲ್ಸ್ ಪೊಲಿಯೋನಂತಹ ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಬಳಸಿಕೊಳ್ಳಬಾರದು ಎಂಬಿತ್ಯಾದಿ ಮಹತ್ವದ ಹಕ್ಕೊತ್ತಾಯಗಳ ಮನವಿಯನ್ನು ಹೋರಾಟ ನಿರತ ಮಹಿಳೆಯರು ಜಿಲ್ಲಾಧಿಕಾರಿಗಳಿಗೆ ನೀಡಿ ಗಮನ ಸೆಳೆದಿದ್ದಾರೆ. ನೀಲಾ ಕೋದಡರಾಮಯ್ಯ, ಮೀನಾಕ್ಷಿ ಬಾಳಿ, ಶೋಭಾ ಬಾಣಿ, ಸುಶೀಲ ಕಟಕೆ, ಭಾಗಯಲತಾ ಶಾಸ್ತ್ರೀ, ಡಾ. ಶಾಂತಾ ಮಠ, ಡಾ. ಪ್ರಭು ಖಾನಾಪುರ, ಘೂಳಿ ಶ್ರೀಶೈಲ ಸೇರಿದಂತೆ ಅನೇಕ ಪ್ರಮುಖರು ಹೋರಾಟದಲ್ಲಿದ್ದರು.