ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತಂಬಾಕಿನ ಸೇವನೆಯಿಂದ ದುಷ್ಪರಿಣಾಮ: ಎಚ್ಚರಿಕೆ

Rashmi Kasaragodu
Updated On : 13 Mar 2014, 12:03 pm

ಕ.ಪ್ರ. ವಾರ್ತೆ    ರಾಯಚೂರು    ಮಾ.12
ತಂಬಾಕಿನ ಬಳಕೆಯಿಂದ ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ತಂಬಾಕಿನ ಬಳಕೆ ಆರಂಭದಲ್ಲಿ ಮೋಜಿಗಾಗಿ ಆರಂಭಗೊಂಡರೂ ಆರೋಗ್ಯಕ್ಕೆ ಅದರ ಬಳಕೆ ತಂದೊಡ್ಡುವ ಅಪಾಯ ಅತೀ ಹೆಚ್ಚು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ನಾರಾಯಣ ಎಚ್ಚರಿಸಿದರು.
ನಗರದ ಐಎಂಎ ಹಾಲ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯಿದೆ ಪರಿಣಾಮಕಾರಿ ಅನುಷ್ಠಾನ, ಸಾಮಾರ್ಥ್ಯಾಭಿವೃದ್ಧಿ ಮತ್ತು ಮೇಲ್ವಿಚಾರಣೆ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ವ್ಯಕ್ತಿ ಸಿಗರೇಟ್ ಸೇವನೆ ಮತ್ತು ತಂಬಾಕು ಉತ್ಪನ್ನಗಳ ಬಳಕೆಯಿಂದ ಆತನ ಜೀವಿತಾವಧಿ ಕಡಿತಗೊಳ್ಳುತ್ತದೆ ಎಂದು ಹೇಳಿದರು.
ಅಡ್ಡ ಪರಿಣಾಮ: ಆಧುನಿಕ ಜಗತ್ತಿನಲ್ಲಿ 60ರಿಂದ 80 ವರ್ಷ ವಯಸ್ಸಿನವರು ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಬಳಕೆ ಮಾಡುತ್ತಿದ್ದು ಅದರಿಂದ ಅವರ ಆರೋಗ್ಯದ ಮೇಲೆ ಅಡ್‌ಡ ಪರಿಣಾಮ ಉಂಟಾಗಲಿದೆ. ಅಂಥ ವ್ಯಕ್ತಿಗಳು ಕಡಿಮೆ ಅವಧಿಯಲ್ಲಿಯೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.
ತಂಬಾಕು ಸೇವನೆಯಿಂದ ಮಾನವನ ಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರುವ ಜತೆ ಜತೆಗೆ ಅನಾರೋಗ್ಯಕರ ಸಮಾಜದಿಂದ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ತಂಬಾಕಿನ ಅತೀಯಾಗಿ ಬೆಳೆಯುವುದರಿಂದ ರೈತರ ಫಲವತ್ತಾದ ಜಮೀನು ಬರಡಾಗಲಿದೆ. ಅರಣ್ಯ ನಾಶ, ಪರಿಸರ ಮಾಲಿನ್ಯ ಹೀಗೆ ನಾನಾ ರೀತಿಯ ಅಡ್ಡ ಪರಿಣಾಮಗಳನ್ನು ತಂಬಾಕು ವಸ್ತುಗಳಿಂದಾಗುತ್ತದೆ ಎಂದು ಹೇಳಿದರು.
ಕಠಿಣ ಶಿಕ್ಷಗೆ ಗುರಿಪಡಿಸಿ: ವಿದ್ಯಾವಂತರು, ಅನಕ್ಷರಸ್ಥರು ಎನ್ನದೇ ಎಲ್ಲ ವಯೋವಾನದವರು ಸಿಗರೇಟ್, ಗುಟ್ಕಾ ಮತ್ತಿತರ ತಂಬಾಕು ಬಳಸುತ್ತಿದ್ದು, ಅದರಿಂದಾಗುವ ದುರಂತದ ಬಗ್ಗೆ ಮನ ಮುಟ್ಟುವಂತೆ ಜಾಗೃತಿ ಮೂಡಿಸುವ ಕಾರ್ಯ ಅವಶ್ಯಕತೆಯಿದೆ ಎಂದು ಹೇಳಿದರು.
ಜಿಲ್ಲಾ ಮೀಸಲು ಪೊಲೀಸ್ ಪಡೆಯ ಅಧಿಕಾರಿ ಪಿ. ಕರುಣೇಶಗೌಡ ಮಾತನಾಡಿ, ತಂಬಾಕು ನಿಷೇಧ ಕಾಯಿದೆ ಜಾರಿ ಜತೆ ಕಠಿಣ ಶಿಕ್ಷಗೆ ಗುರಿಪಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ಮಾಡುವವರ ವಿರುದ್ಧ ದಂಡ ವಸೂಲು ಮಾಡುತ್ತಿದ್ದರೂ ಸಾರ್ವಜನಿಕರೂ ಸಹ ಸ್ವಯಂ ನಿಯಂತ್ರಣ ಹೇರಿಕೊಂಡು ಆರೋಗ್ಯ ರಕ್ಷಣೆಗೆ ಗಮನಹರಿಸುವಂತೆ ಮನವಿ ಮಾಡಿದರು.
ಸಮಾರಂಭದಲ್ಲಿ ಮಾನಸಿಕ ರೋಗ ತಜ್ಞ ಡಾ. ವಿ.ಎ. ಮಾಲಿಪಾಟೀಲ್, ಐಎಂಎ ಅಧ್ಯಕ್ಷ ಡಾ.ಸಿ.ಎನ್. ಕುಲಕರ್ಣಿ, ಆರೋಗ್ಯ ಇಲಾಖೆ ತರಬೇತಿ ವಿಭಾಗದ ಪ್ರಾಚಾರ್ಯ ಡಾ. ವೆಂಕಟೇಶ ವೈ. ನಾಯಕ, ಡಿಎಸ್ಪಿ ವಿ.ಬಿ. ಮಡಿವಾಳರ್, ವಿ. ಸತೀಶ್ ವಕೀಲರು ಸೇರಿ ಅನೇಕರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ವೈದ್ಯರು, ಕಾಲೇಜು ವಿದ್ಯಾರ್ಥಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement