ಪಿಂಚಣಿ: ಮೊಬೈಲ್ ಸಂಖ್ಯೆಗೆ ಮನವಿ
ರಾಯಚೂರು: ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ನಿವೃತ್ತಿ ಹೊಂದುವಾಗ ಅವರ ಪಿಂಚಣಿ ಕುರಿತ ಪ್ರಸ್ತಾವನೆಯನ್ನು ಬೆಂಗಳೂರಿನ ಮಹಾಲೇಖಪಾಲಕರಿಗೆ ಸಲ್ಲಿಸುವ ವೇಳೆ ನಿವೃತ್ತರ ಮೊಬೈಲ್ ಸಂಖ್ಯೆ ನಮೂದಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಮಹಾಲೇಖಪಾಲರಿಗೆ ಪಿಂಚಣಿ ಸಂಬಂಧಿ ದಾಖಲೆಗಳನ್ನು ಸಲ್ಲಿಸುವ ಸಂದರ್ಭ ನಿವೃತ್ತಿಯಾಗುವವರ ಮೊಬೈಲ್ ಸಂಖ್ಯೆ ಪಡೆದು ಕಡ್ಡಾಯವಾಗಿ ಪಿಂಚಣಿ ಪ್ರಸ್ತಾವನೆಗಳಲ್ಲಿ ಭರ್ತಿ ಮಾಡಿ ಕಳಿಸಲು ಆದೇಶಿಸಿದ್ದಾರೆ. ಪಿಂಚಣಿದಾರರಿಗೆ ಪಿಂಚಣಿ ಕ್ಲೇಮುಗಳ ಬಗ್ಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಲು ಮೊಬೈಲ್ ಸಂಖ್ಯೆ ದಾಖಲಿಸುವುದು ನೆರವಾಗಲಿದೆ. ಕಡ್ಡಾಯವಾಗಿ ಸಂಖ್ಯೆ ದಾಖಲಿಸಲು ತಿಳಿಸಿದ್ದಾರೆ.
ಪತ್ರಿಕೆ ಬಿಡುಗಡೆ
ರಾಯಚೂರು: ನಗರದಲ್ಲಿ ಮಾ.13ರಂದು ಜನವಾದಿ ಕನ್ನಡ ದಿನಪತ್ರಿಕೆಯ ಉದ್ಘಾಟನೆ ಹಾಗೂ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 11ಕ್ಕೆ ನಗರದ ಐಎಂಎ ಸಭಾಂಗಣದಲ್ಲಿ ನಡೆಯುವ ಸಮಾರಂಭವನ್ನು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಡಾ. ಶಿವರಾಜ್ ಪಾಟೀಲ್ ವಹಿಸುವರು. ಪತ್ರಿಕೆಯನ್ನು ಉದಯವಾಣಿ ಪತ್ರಿಕೆಯ ಸಂಪಾದಕ ರವಿ ಹೆಗಡೆ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ವೆಂಕಟೇಶ ನಾಯಕ, ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ಮಾನಪ್ಪ ವಜ್ಜಲ್, ತಿಪ್ಪರಾಜು ಹವಾಲ್ದಾರ್ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆಂ
ಇಂದು ಕ್ಷೇತ್ರೋತ್ಸವ
ರಾಯಚೂರು: ರಾಯಚೂರು ಕೃಷಿ ವಿವಿ ವತಿಯಿಂದ ಮಾ.13ರಂದು ದೇವದುರ್ಗ ತಾಲೂಕಿನ ಸಾಸ್ವಿಗೇರಾ ಗ್ರಾಮದಲ್ಲಿ ಶೇಂಗಾ ಹೊಸ ತಳಿ ಕೆ-9ರ ಕ್ಷೇತ್ರೋತ್ಸವ ಆಯೋಜಿಸಲಾಗಿದೆ ಎಂದು ಬೀಜ ಘಟಕದ ಅಧಿಕಾರಿ ಡಾ.ಬಸವೇಗೌಡ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳಗ್ಗೆ 11ಕ್ಕೆ ಸಾಸ್ವಿಗೇರಾ ಗ್ರಾಮದ ರೈತ ರುಕಪ್ಪನವರ ಹೊಲದಲ್ಲಿ ಕ್ಷೇತ್ರೋತ್ಸವ ಕಾರ್ಯಕ್ರಮ ಆಯೋಜಿಸಿದೆ.