ಮಹಿಳೆ ಸಾಧನೆಗೆ ಪ್ರೋತ್ಸಾಹ ಅವಶ್ಯ: ಶಶಿಕಲಾ ಪಾಟೀಲ್
ರಾಯಚೂರು: ಸಮಾಜದಲ್ಲಿ ಪುರುಷರಿಗೆ ಸರಿಸಮಾನವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಪ್ರದರ್ಶಿಸುತ್ತಿರುವ ಮಹಿಳೆಯರಿಗೆ ಪ್ರೋತ್ಸಾಹದ ಅವಶ್ಯಕತೆಯಿದೆ ಎಂದು ಹರವಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶಶಿಕಲಾ ಪಾಟೀಲ್ ಹರವಿ ಹೇಳಿದರು.
ಮಾನವಿ ಪಟ್ಟಣದ ಜನೋದಯ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರಿಗೆ ಶಿಕ್ಷಣ ನೀಡಿಕೆಯ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಜಯಶ್ರೀ ವಕೀಲರು ಮಾತನಾಡಿ, ಕಾನೂನು ಎಲ್ಲರಿಗೂ ಸಮಾನತೆ ನೀಡಿದೆ. ಮಹಿಳೆಯರು ಸಂವಿಧಾನದ ಹಕ್ಕುಗಳನ್ನು ಚಲಾಯಿಸಿ ನ್ಯಾಯ ಪಡೆದಾಗ ಮಾತ್ರ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದರು.
ಉಪನ್ಯಾಸಕಿ ಶಿವಲಿಂಗಮ್ಮ, ವಿಜಯಕುಮಾರ ಮಾತನಾಡಿದರು. ಜನೋದಯ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಸಿಲ್ವಾ ಅಧ್ಯಕ್ಷತೆ ವಹಿಸಿದ್ದರು. ಚಂದ್ರಿಕಾ ವಕೀಲರು, ಸುಂದರ್ ಕಪಗಲ್, ಶಿವಮ್ಮ, ಬಸಮ್ಮ, ಸಂತೋಷಮ್ಮ ಸೇರಿ ಅನೇಕರಿದ್ದರು.