ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಕ್ರಮ ಮರಳು ದಂಧೆಗೆ ನೀತಿ ಸಂಹಿತೆ ವರ!

Rashmi Kasaragodu
Updated On : 14 Mar 2014, 11:56 am

 ಪಂಪಯ್ಯ ಮಠ
ಕನ್ನಡಪ್ರಭ ವಾರ್ತೆ  ಮುದಗಲ್  ಮಾ.13
ಹಳ್ಳ- ಕೊಳ್ಳಗಳು, ನದಿಗಳಲ್ಲಿನ ಮರಳು ಸಾಗಾಟಕ್ಕೆ ಕಡಿವಾಣ ಹಾಕಬೇಕಿದ್ದ ಅಧಿಕಾರಿಗಳು ಲೋಕಸಭೆ ಚುನಾವಣೆಯ ಕೆಲಸದಲ್ಲಿ ತೊಡಗಿದ್ದು, ಅಕ್ರಮ ಮರಳು ದಂಧೆಕೋರರಿಗೆ ವರವಾಗಿ ಪರಿಣಮಿಸಿದೆ.
ತಾಲೂಕಿನ ಕಂಬಳಿಹಾಳ, ನಾಗಲಾಪುರ, ಮೆದಕಿನಾಳ, ಹಂಪನಾಳ ಸೇರಿದಂತೆ ವಿವಿಧಡೆಯಲ್ಲಿ ಸಿಗುವ ಮರಳ(ಉಸುಕು)ನ್ನು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ, ನಾಲತವಾಡ, ನಿಡಗುಂದಿ ಪಟ್ಟಣಗಳಿಗೆ ಟಿಪ್ಪರ್ ವಾಹನದಲ್ಲಿ, ಜೋಡು ಟ್ರ್ಯಾಕ್ಟರ್‌ಗಳಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದೆ.
ಅಕ್ರಮ ಮರಳು ದಂಧೆಯನ್ನು ಮಟ್ಟ ಹಾಕಲು ಲಿಂಗಸ್ಗೂರು ತಾಲೂಡಾಳಿತ ವಿವಿಧ ಇಲಾಖೆಗಳ ಜೊತೆಗೂಡಿ ವಾಹನಗಳ ಜಪ್ತಿ, ಅಕ್ರಮಕೋರರ ಮೇಲೆ ಪ್ರಕರಣಗಳನ್ನು ದಾಖಲಿಸಿ ಸಾವಿರಾರು ರು.ಗಳ ದಂಡವನ್ನು ಹಾಕಿ ನ್ಯಾಯಾಲಯಕ್ಕೆ ಕಳಿಸಿ ಕ್ರಮ ಕೈಗೊಂಡ ಪ್ರಕರಣಗಳು ನಡೆದಿವೆ. ಇದೇ ವೇಳೆ ಅಕ್ರಮ ಮರಳು ದಂಧೆಯನ್ನು ಮಟ್ಟ ಹಾಕಲು ಸರ್ಕಾರ ಹೊಸ ಮರಳು ನೀತಿಯನ್ನು ಜಾರಿಗೆ ತಂದಿದೆ. ಆದರೆ ಈ ನೂತನ ಮರಳು ನೀತಿ ಸಮರ್ಪಕ ಅನುಷ್ಠಾನಗೊಳ್ಳುವ ಮುನ್ನವೇ ಮತ್ತೆ ಅಕ್ರಮ ಮರಳು ದಂಧೆ ಆರಂಭವಾಗಿದ್ದು ಎಗ್ಗಿಲ್ಲದೆ ಸಾಗಿದೆ.
ಅಕ್ರಮ ಮರಳು ದಂಧೆ ನಿರಾಳ: ಲೋಕಸಭೆ ಚುನಾವಣೆ ಘೋಷಣೆಯಾಗಿದ್ದರಿಂದ ಸಹಾಯಕ ಆಯುಕ್ತರು, ತಹಸೀಲ್ದಾರರು, ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಚುನಾವಣೆ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಹೊಸ ಮರಳು ನೀತಿ ಪ್ರಕಾರ- ಅಧಿಕಾರಿಗಳು ಮರಳು ಜಾಗವನ್ನು ಗುರುತಿಸಿ, ಮರಳು ಸಾಗಿಸುವವರಿಗೆ ಪರವಾನಗಿ ನೀಡುವ ಕೇಂದ್ರಗಳನ್ನು ತೆರೆದು, ರಾಜ್ಯ ಧನ ನಿಗದಿ ಮಾಡುವ ತಯಾರಿಯಲ್ಲಿರುವಾಗಲೇ ಚುನಾವಣೆ ಘೋಷಣೆಯಾಯಿತು. ಹೀಗಾಗಿ ಹೊಸ ಮರಳು ನೀತಿ ನನೆಗುದಿಗೆ ಬಿದ್ದ ಕಾರಣ ಮತ್ತು ಅಧಿಕಾರಿಗಳು ಮರಳು ದಂಧೆಕೋರರತ್ತ ಸುಳಿಯದ ಕಾರಣ ಅಕ್ರಮ ಮರಳು ದಂಧೆ ನಿರಾಳವಾಗಿ ನಡೆದಿದೆ.
ದುಬಾರಿ: ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕುವ ಸಲುವಾಗಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ವಾಹನಗಳನ್ನು ಹಿಡಿದು ತಹಸೀಲ್ದಾರರು, ಪೊಲೀಸ್ ಅಧಿಕಾರಿಗಳು ಹತ್ತಾರು ಸಾವಿರ ದಂಡ ವಿಧಿಸುತ್ತಿದ್ದರಿಂದ ಟ್ರ್ಯಾಕ್ಟರ್ ವಾಹನಗಳ ಮಾಲೀಕರು ಮರಳು ಸಾಗಿಸುವುದನ್ನು ಬಂದ್ ಮಾಡಿದ್ದರು. ಇದು ಮರಳು ಅಭಾವಕ್ಕೆ ಕಾರಣವಾಗಿ ಟ್ರ್ಯಾಕ್ಟರ್ ಮರಳಿಗೆ 1,500ರಿಂದ 2000ವರೆಗೆ ದರ ನಿಗದಿ ಮಾಡಿದ್ದು, ಗ್ರಾಹಕರಿಗೆ ಹೊರೆಯಾಗಿತ್ತು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಅಕ್ರಮ ಮರಳು ತಡೆಗೆ ಮರಳು ನೀತಿಯಲ್ಲಿ ಶೀಘ್ರದಲ್ಲೇ ಜಾರಿಗೆ ತರುವುದಾಗಿ ಜಿಲ್ಲಾಧಿಕಾರಿ ನಾಗರಾಜ ಹೇಳಿದ್ದರು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಟೆಂಡರ್ ಪ್ರಕ್ರಿಯೆಗೆ ಹಿನ್ನಡೆಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಲಾಬಿ: ಮರಳು ಮಾರಾಟಕ್ಕೆ ತಾಲೂಕಾಡಳಿತ ಮೇಲಿಂದ ಮೇಲೆ ಶಿಸ್ತು ಕ್ರಮ ಜರುಗಿಸುತ್ತಿರುವ ಹಿನ್ನೆಲೆಯಲ್ಲಿ ಮರಳು ಅಭಾವ ಸೃಷ್ಟಿಯಾಗಿದ್ದು ಇದರ ಲಾಭವನ್ನು ಮಧ್ಯವರ್ತಿಗಳು ಪಡೆಯುತ್ತಿದ್ದಾರೆ. ಕೂಡಲೇ ಮರಳು ಅಕ್ರಮ ಮಾರಾಟ ಸಾಕಾರಗೊಳಿಸಲು ಸರ್ಕಾರ ಅಥವಾ ತಾಲೂಕಾಡಳಿತ ಶ್ರಮಿಸಬೇಕಿದೆ.



ತಾಲೂಕಿನಾದ್ಯಂತ ಮರಳು ಅಭಾವ ಇದ್ದು ತಲೇಖಾನ್ ಹಾಗೂ ಮೆದಿಕಿನಹಾಳ ಭಾಗಗಳಲ್ಲಿ ಮರಳು ಲಭ್ಯವಿದ್ದು ಮರಳು ಅಕ್ರಮ ಸಾಗಾಟವಾಗದಂತೆ ವಿವಿಧ ಇಲಾಖಾಧಿಕಾರಿಗಳ ಜೊತೆ ಸಭೆ ನಡೆಸಿ ಕ್ರಮಕ್ಕೆ ಸ್ರಚಿಸಲಾಗಿದ್ದು ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಮರಳು ಟೆಂಡರ್ ಪ್ರ್ರಕ್ರಿಯೆ ಕಾರ್ಯ ಆರಂಭಿಸಲಾಗುವುದು.
 ಟಿ.ಯೋಗೇಶ, ಸಹಾಯಕ ಆಯುಕ್ತ


ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಟದ ನೆಪದಲ್ಲಿ ಮರಳು ಸಾಗಿಸುವ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡುತ್ತಿರುವುದು ಸಮಂಜಸವಲ್ಲ. ಗುತ್ತಿಗೆದಾರರು ಕಾಮಗಾರಿಗಳಿಗೆ ಮರಳು ಹಾಕಿಸಿಕೊಳ್ಳುತ್ತಿದ್ದು ಬಿಲ್‌ನಲ್ಲಿ ಸರ್ಕಾರಕ್ಕೆ ಶೇ.4ರಷ್ಟು ರಾಯಲ್ಟಿ ನೀಡಲಾಗುತ್ತಿದೆ. ಗುತ್ತಿಗೆದಾರರು ಬಿಲ್ ನೀಡಿದರೆ ವಾಹನಗಳನ್ನು ಜಪ್ತಿ ಮಾಡಬಾರದು, ಸರ್ಕಾರ ಕೂಡಲೇ ಮರಳು ನೀತಿಯನ್ನು ಜಾರಿಗೊಳಿಸಿ, ಪರ್ಮಿಟ್ ನೀಡುವ ವ್ಯವಸ್ಥೆ ಮಾಡಬೇಕು.
 ಇಸ್ಮಾಯಿಲ್ ಮುದಗಲ್, ಗ್ರಾಹಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement