ಒಂದೇ ದಿನ ಮೂರು ಅಂಗಡಿಗಳಲ್ಲಿ ಕಳ್ಳತನ
ಮುದಗಲ್: ಪಟ್ಟಣದ ಬಾಗಲಕೋಟ ರಸ್ತೆಯ ಪಕ್ಕದಲ್ಲಿರುವ ಮೂರು ಅಂಗಡಿಗಳಿಗೆ ಕನ್ನ ಹಾಕಿದ ಕಳ್ಳರು ಮೊಬೈಲ್, ನಗದು, ಬ್ಯಾಟರಿಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬುಧವಾರ ರಾತ್ರಿ ಜರುಗಿದೆ.
ಎ ಟು ಝಡ್ ಸ್ಟೇಷನರಿ ಅಂಗಡಿಯ ಮೇಲ್ಭಾಗದ ತಗಡನ್ನು ಕತ್ತರಿಸಿರುವ ಕಳ್ಳರು ಅಂಗಡಿಯಲ್ಲಿದ್ದ ಹಣ ಮತ್ತು ಸ್ಟೇಷನರಿ ಸಾಮಗ್ರಿಗಳನ್ನು ದೋಚಿದ್ದಾರೆ. ಪಕ್ಕದ ಇಮ್ತಿಯಾಜ್ ಮೊಬೈಲ್ ಅಂಗಡಿಯಲ್ಲಿ 2 ಮೊಬೈಲ್, 20 ಬ್ಯಾಟರಿ, 1 ಐ ಪಾಡ್ ದೋಚಿದ್ದಾರೆ. ಜೈಭವಾನಿ ಮೊಬೈಲ್ ಅಂಗಡಿಯಲ್ಲಿ 2 ಸಾವಿರ ನಗದು, ಸುಮಾರು ಹತ್ತು ಸಾವಿರ ಬೆಲೆ ಬಾಳುವ ಮೊಬೈಲ್ಗಳನ್ನು ದೋಚಿದ್ದಾರೆ.
ಮೂರು ಅಂಗಡಿಗಳನ್ನು ಒಂದೇ ರಾತ್ರಿಯಲ್ಲಿ ತಗಡು ಕತ್ತರಿಸುವ ಕತ್ತರಿಯಿಂದ ಮನುಷ್ಯ ಒಳಗೆ ಹೋಗುವಷ್ಟು ಕತ್ತರಿಸಿ, ಅಲ್ಲಿಂದ ಕೆಳಗೆ ಇಳಿದು ಈ ಕಳ್ಳತನ ಮಾಡಿದ್ದಾರೆ. ಅಂಗಡಿ ಮಾಲೀಕರು ಪ್ರತಿ ದಿನದಂತೆ ಗುರುವಾರ ಬೆಳಗ್ಗೆ ಕೀಲಿ ತೆರೆದಾಗ ಅಂಗಡಿಗಳಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಸತತ ಎರಡನೇ ಬಾರಿಗೆ ಇದೇ ರೀತಿ ಕಳ್ಳತನಗಳು ನಡೆಯುತ್ತಿದ್ದು, ಅಂಗಡಿ ಮಾಲೀಕರಲ್ಲಿ ಆತಂಕವನ್ನುಂಟು ಮಾಡಿದೆ. ಮೂರು ತಿಂಗಳ ಹಿಂದೇ ಇದೇ ರೀತಿ ಮೂರು ಕಿರಾಣಿ ಅಂಗಡಿಗಳನ್ನು ಕಳ್ಳತನ ಮಾಡಲಾಗಿತ್ತು. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ರಸ್ತೆ ಪಕ್ಕದಲ್ಲೇ ಈ ರೀತಿ ಕಳ್ಳತನ ನಡೆಯುತ್ತಿದೆ. ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಂಚನಾಮೆ ಮಾಡಿಕೊಂಡಿದ್ದು, ಕಳ್ಳರ ಪತ್ತೆಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.