ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಲಬೆರಕೆ ಸೇಂದಿ, ಅಕ್ರಮ ಮದ್ಯ ಮಾರಾಟ

Rashmi Kasaragodu
Updated On : 14 Mar 2014, 11:59 am

ಚಿಂಚೋಳಿ: ರಾಜ್ಯ ಸರ್ಕಾರ ಸೇಂದಿ ಮಾರಾಟ ನಿಷೇಧಗೊಳಿಸಿದ್ದರೂ ಜಿಲ್ಲೆಯ ಅತಿ ಹಿಂದುಳಿದ ಚಿಂಚೋಳಿ ತಾಲೂಕಿನಲ್ಲಿ ಅಕ್ರಮವಾಗಿ ಕಲಬೆರಕೆ ಸೇಂದಿ ಹಾಗೂ ಮದ್ಯ ಮಾರಾಟ ರಾಜಾರೋಷವಾಗಿ ನಡೆದಿದ್ದು, ಬಡ ಅಮಾಯಕ ಕೂಲಿ ಕಾರ್ಮಿಕರು ವಿವಿಧ ರೋಗಗಳಿಗೆ ಬಲಿಯಾಗುತ್ತಿದ್ದಾರೆ.
ತಾಲೂಕು ಆಂಧ್ರ ಗಡಿಭಾಗಕ್ಕೆ ಹೊಂದಿಕೊಂಡಿರುವುದರಿಂದ ಇಲ್ಲಿನ ಕೆಲವು ಅಕ್ರಮ ಚಟುಟಿಕೆಗಳು ಮತ್ತು ಅಕ್ರಮ ಕಲಬೆರಕೆ ಸೇಂದಿ ಮಾರಾಟಗಾರರು ತಾಲೂಕಿನ ಗಡಿ ಪ್ರದೇಶದ ಜಹೀರಾಬಾದ್, ಕೋತಲಾಪುರ, ಗೌಸಾಬಾದ್, ಮಲಚೆಲಮಾ, ಬಶೀರಾಬಾದ್ ಮುಂತಾದ ಕಡೆಗಳಿಂದ ಕ್ಲೋರೋ ಹೈಡ್ರೇಟ್(ಸಿಎಚ್) ಪೌಡರ್ ತಂದು ಇಲ್ಲಿಯೇ ತಯಾರು ಮಾಡಿ ವ್ಯಾಪಕ ಮಾರಾಟ(ಕೇವಲ 10ಕ್ಕೆ) ಮಾಡಲಾಗುತ್ತಿದೆ. ಇದರಿಂದಾಗಿ ಅನೇಕ ಬಡ ಕೂಲಿ ಕಾರ್ಮಿಕರು ಕಲಬೆರಕೆ ಸೇಂದಿ ಸೇವನೆಯಿಂದ ಹಲವಾರು ರೋಗಗಳಿಂದ ನರಳುವಂತಾಗಿದೆ.
ಕಣ್ಮುಚ್ಚಿ ಕುಳಿತ ಸರ್ಕಾರ: ತಾಲೂಕಿನ ಮಿರಿಯಾಣ, ಕುಂಚಾವರಂ, ಕುಸರಂಪಳ್ಳಿ, ಚಿಕ್ಕಲಿಂಗದಳ್ಳಿ, ಶಿವರಾಮಪುರ, ಶಿವರೆಡ್ಡಪಳ್ಳಿ, ವೆಂಕಟಾಪುರ, ಚಿಮ್ಮಾಇದಲಾಯಿ, ಗಾರಂಪಳ್ಳಿ, ಅಣವಾರ, ಗಣಾಫೂರ, ಕರಚಖೇಡ, ಛತ್ರಸಾಲಾ ಹಾಗೂ ಪಟ್ಟಣದ ಅಂಬೇಡ್ಕರ್ ಚೌಕ್, ಹರಿಜನವಾಡ, ಚಂದಾಪುರ ಹನುಮಾನ ಬಡಾವಣೆ, ಚಂದಾಪುರ ತಾಂಡಾ, ಪೋಲಕಪಳ್ಳಿ ಮುಂತಾದ ಗ್ರಾಮಗಳಲ್ಲಿ ರಾಜಾರೋಷವಾಗಿ ಮಾರಾಟ ನಡೆದಿದೆ.
  ಆದರೂ ತಾಲೂಕು ಅಬಕಾರಿ ಇಲಾಖೆ, ಸರ್ಕಾರ ಕಣ್ಣು ಮುಚ್ಚಿ ಕುಳಿತಿವೆ ಎಂದು ಜನರು ಆರೋಪಿಸುತ್ತಿದ್ದಾರೆ. ತಾಲೂಕಿನ ಮದ್ಯ ಮಾರಾಟ(ವೈನ್ ಶಾಪ್) ಸರ್ಕಾರದಿಂದ ಅಧಿಕೃತವಾಗಿ ಹಾಗೂ ಅಬಕಾರಿ ಇಲಾಖೆ ಮಾಹಿತಿ ಪ್ರಕಾರ- ಕೇವಲ 15 ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡಲಾಗಿದೆ.
 ಆದರೆ ಕೆಲವು ಮದ್ಯ ಮಾರಾಟಗಾರರು ಬೈಕ್, ಆಟೋ, ಟಂಟಂ ಜೀಪು ಮುಂತಾದ ವಾಹನಗಳ ಮೂಲಕ ಸಾವಿರಾರು ಮದ್ಯದ ಪೆಟ್ಟಿಗೆಗಳನ್ನು ಗ್ರಾಮ/ತಾಂಡಾಗಳಿಗೆ ಸಾಗಿಸುತ್ತಿದ್ದಾರೆ. ಆದರೆ ಅಬಕಾರಿ ಇಲಾಖೆಯವರು ಇಂತಹ ಅಕ್ರಮ ಕಳ್ಳತನ ದಂಧೆಯಲ್ಲಿ ತೊಡಗಿದವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಕೊಂಡಿಲ್ಲವೆಂದೇ ಹೇಳಲಾಗುತ್ತಿದೆ.
ರೋಗ, ಜೀವಹಾನಿಗೆ ಆಹ್ವಾನ: ತಾಲೂಕು ಗಣಿ ಪ್ರದೇಶವಾಗಿರುವುದರಿಂದ ಅನೇಕ ಗಣಿ ಕಾರ್ಮಿಕರು ಕಲಬೆರೆಕೆ ಸೇಂದಿ ಸೇವನೆಯಿಂದ ನಿಶಃಕ್ತರಾಗುತ್ತಿದ್ದಾರೆ. ಅಲ್ಲದೆ ಕ್ಷಯರೋಗ, ಕೆಮ್ಮು ರೋಗಗಳಿಂದ ನರಳುವಂತಾಗಿದೆ. ಕುಂಚಾವರಂ ಪ್ರದೇಶದ ಅನೇಕ ತಾಂಡಾ, ಗ್ರಾಮಗಳಲ್ಲಿ ಅಬಕಾರಿ ಇಲಾಖೆಯವರು ಹಲವಾರಿ ಸಲ ದಾಳಿ ಮಾಡಿ ಬೆಲ್ಲದ ಕೊಳೆ, ಉಪಕರಣಗಳನ್ನು ವಶಪಡಿಸಿಕೊಂಡಿರುವದು ಗಮನಾರ್ಹ ಸಂಗತಿ. ಆದರೂ ಇಂತಹ ಅಕ್ರಮ ದಂಧೆ ಮಾತ್ರ ನಿರಂತರವಾಗಿ ನಡೆಯುತ್ತಿದೆ. ಕಲಬೆರಕೆ ಸೇಂದಿ ಸೇವನೆಯಿಂದ ಅನೇಕ ಬಡ ಕುಟುಂಬಗಳು ಬೀದಿಪಾಲಾಗುತ್ತಿವೆ. ಇದನ್ನು ತಡೆಗಟ್ಟುವಲ್ಲಿ ಜನಪ್ರತಿನಿಧಿಗಳು ಗಮನಿಸಬೇಕು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement