'ಕೈ' ದೊಂಬರಾಟಕ್ಕೆ ಕೊನೆ ಎಂದು?
ಸಿಂಧನೂರು: ಆರು ದಶಕಗಳ ಕಾಲ ದೇಶದ ಆಡಳಿತವನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಂಡು ಈಗ ಕಾಂಗ್ರೆಸ್ ಪಕ್ಷ ಭಾರತ ನಿರ್ಮಾಣ ಯಾತ್ರೆ ಎನ್ನುವ ಕಾರ್ಯಕ್ರಮ ಹಾಕಿಕೊಂಡು ಪಾದಯಾತ್ರೆ ನಡೆಸಲು ಹೊರಟಿರುವುದು ಎಷ್ಟು ಸರಿ. ಹಾಗಾದರೆ ಇಲ್ಲಿವರೆಗೆ ಭಾರತ ನಿರ್ಮಾಣ ಆಗಿಲ್ಲವೇ ಎಂದು ಸಿಪಿಐ(ಎಂ) ತಾಲೂಕು ಸಮಿತಿ ಕಾರ್ಯದರ್ಶಿ ನರಸಿಂಹಪ್ಪ ಪ್ರಶ್ನಿಸಿದ್ದಾರೆ. ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾವು ನಿಂತಿರುವ ನೆಲ, ಜಲ, ಓಡಾಡುವ ರಸ್ತೆ, ಕುಡಿವ ನೀರು, ಉಸಿರಾಡುವ ಗಾಳಿ ಯಾವ ದೇಶದ್ದು. ಮಹಾತ್ಮ ಗಾಂಧೀಜಿ ಸಮಕಾಲೀನ ನಾಯಕರು ತಮ್ಮ ಉಸಿರಾಟವನ್ನೇ ರಾಷ್ಟ್ರ ನಿರ್ಮಾಣಕ್ಕಾಗಿ ಮೀಸಲಿಟ್ಟು ಶ್ರಮಿಸಿದರು. ಆಗ ಅವರು ಭಾರತವನ್ನು ಅವರು ನಿರ್ಮಿಸಲಿಲ್ಲವೇ 50 ವರ್ಷಗಳಿಗೂ ಹೆಚ್ಚು ವರ್ಷ ಕಾಂಗ್ರೆಸ್ ಪಕ್ಷ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರ ನಡೆಸಿದ್ದು, ಯಾವ ದೇಶದಲ್ಲಿ ಎಂದು ಅವರು ಕಿಡಿಕಾರಿದ್ದಾರೆ.
ಕನಿಷ್ಠ ಕಾಳಜಿ ಇಲ್ಲ: ದೇಶದಲ್ಲಿ ವಿಪರೀತ ಭ್ರಷ್ಟಾಚಾರ, ಬಡತನ, ನಿರುದ್ಯೋಗ, ಅನ್ನಕ್ಕಾಗಿ ಹಾಹಾಕಾರ ಉಂಟಾಗಿ ಜನತೆ ನೆಮ್ಮದಿಯನ್ನೇ ಕಳೆದುಕೊಂಡು ಪರಿತಪಿಸುತ್ತಿದ್ದರೂ ಕನಿಷ್ಠ ಕಾಳಜಿ ವಹಿಸದ ಕಾಂಗ್ರೆಸ್ ಈಗ ಏಕೆ ಭಾರತ ನಿರ್ಮಾಣ ಮಾಡಲು ಮುಂದಾಗಿದೆ. ಇಷ್ಟು ದಿನ ಜನ ಕಷ್ಟಕೋಟಲೆಗಳನ್ನು ಅನುಭವಿಸುತ್ತಿದ್ದಾಗ ಭಾರತ ನರಳುತ್ತಿರುವುದು ಇವರಿಗೆ ಅರ್ಥವಾಗಲಿಲ್ಲವೇ ಎಂದು ನರಸಿಂಹಪ್ಪ ಪ್ರಶ್ನಿಸಿದ್ದಾರೆ.