ವಿಶೇಷ ಸ್ಥಾನಮಾನ ಸದ್ಬಳಕೆಗೆ ಮಾಧ್ಯಮಗಳ ಕಣ್ಗಾವಲು ಅವಶ್ಯ
ಕ.ಪ್ರ. ವಾರ್ತೆ ರಾಯಚೂರು ಮಾ.13
ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಕೊಡಮಾಡಿರುವ 371ನೇ ಕಲಂ(ಜೆ)ಅಡಿಯ ವಿಶೇಷ ಸ್ಥಾನಮಾನದ ಸಮರ್ಪಕ ಅನುಷ್ಠಾನದ ಯೋಜನೆಗಳ ಮೇಲೆ ಮಾಧ್ಯಮಗಳು ನಿಗಾ ಇರಿಸಬೇಕಿದೆ. ಆ ಮೂಲಕ ಈ ಪ್ರದೇಶದ ಸಮಗ್ರ ಪ್ರಗತಿಗೆ ಶ್ರಮಿಸಬೇಕೆಂದು ಉದಯವಾಣಿ ಪತ್ರಿಕೆ ಸಂಪಾದಕ ರವಿ ಹೆಗಡೆ ಕರೆ ನೀಡಿದರು.
ಅವರು ನಗರದಲ್ಲಿ ಗುರುವಾರ ಐಎಂಎ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಜನವಾದಿ ದಿನಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ದೂರದೃಷ್ಟಿ, ಯೋಜನಾ ಬದ್ಧ ಕಾರ್ಯನಿರ್ವಹಣೆ, ನೀಲನಕ್ಷೆಯಿಲ್ಲದೇ ಕಾರ್ಯಗತಗೊಳಿಸಲು ತೆರಳಿದ ಅನೇಕ ಯೋಜನೆಗಳು ವಿಫಲವಾಗಿ ಜನತೆ ತೊಂದರೆ ಎದುರಿಸಿದ ಅನೇಕ ಪ್ರಸಂಗಗಳು ನಮ್ಮ ಮುಂದಿವೆ. ಇಂಥ ಪರಿಸ್ಥಿತಿಯಲ್ಲಿ ವಿಶೇಷ ಸ್ಥಾನಮಾನ ದುರ್ಬಳಕೆಯಾಗದಂತೆ ಕಣ್ಗಾವಲಾಗಿ ಪತ್ರಿಕೆಗಳು ಕಾರ್ಯನಿರ್ವಹಿಸಬೇಕಿದೆ ಎಂದರು.
ಓದುಗರಿದ್ದಾರೆ: ವಿದ್ಯುನ್ಮಾನ ಮಾಧ್ಯಮದ ಅಬ್ಬರದಲ್ಲಿ ಮುದ್ರಣ ಮಾಧ್ಯಮಗಳು ಮರೆಯಾಗುವ ಭೀತಿ ಹಿಂದೊಮ್ಮೆ ಕಂಡುಬಂದಿತ್ತು. ಆದರೆ ಇಂದಿಗೂ ಓದುಗರ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ಓದುಗರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಮುದ್ರಣ ಮಾಧ್ಯಮ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಪತ್ರಿಕೆಗಳಲ್ಲಿ ಈಚಿನ ದಿನಗಳಲ್ಲಿ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ. ಜನರ ಅಗತ್ಯತೆ ಗುರುತಿಸಿ ಪ್ರಗತಿ ಪಥದತ್ತ ಸಮಾಜವನ್ನು ಕೊಂಡೊಯ್ಯುವ ಕಾರ್ಯ ಪತ್ರಿಕೆಗಳು ಮಾಡಬೇಕಿದೆ. ಪತ್ರಿಕೆ ದುಡ್ಡು ಮಾಡುವ ವಸ್ತುವಲ್ಲ ಎಂಬುದು ಎಲ್ಲರೂ ಅರಿಯಬೇಕಿದೆ ಎಂದರು.
ಪತ್ರಿಕೆಗಳ ಮಧ್ಯೆ ತಲೆದೋರಿರುವ ಅಂತರಿಕ ಸಂಘರ್ಷವೇ ದಿನಪತ್ರಿಕೆಗಳ ನಾಶಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.
ಮನ್ನಣೆ ನೀಡಿ: ಪತ್ರಕರ್ತ ಬಿ.ವಿ. ಮಲ್ಲಿಕಾರ್ಜುನಯ್ಯ ಸಮಾರಂಭ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನದ ಬಳಕೆಯಿಂದ ಪತ್ರಿಕೋದ್ಯಮ ಮತ್ತಷ್ಟು ಪ್ರಗತಿಯತ್ತ ಹೆಜ್ಜೆಯಿರಿಸಿದೆ. ಹೊಸ ಹೊಸ ಪತ್ರಿಕೆಗಳು ಓದುಗರ ಸಂಖ್ಯೆ ಹೆಚ್ಚುತ್ತದೆ. ಪತ್ರಿಕೆಗಳು ಓದುಗರ ಅಭಿಪ್ರಾಯಕ್ಕೆ ಮನ್ನಣೆ ನೀಡುವ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಾ. ಶಿವರಾಜ ಪಾಟೀಲ್ ವಹಿಸಿ ಮಾತನಾಡಿದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿಕಟಪೂರ್ವ ಅಧ್ಯಕ್ಷ ಎನ್.ಶಂಕ್ರಪ್ಪ, ಶಾಸಕ ಹಂಪನಗೌಡ ಬಾದರ್ಲಿ, ಜನವಾದಿ ಪತ್ರಿಕೆಯ ಸಂಪಾದಕ ಬಸವರಾಜ ಕಳಸ ಮಾತನಾಡಿದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ನಗರಸಭೆ ಪ್ರಭಾರಿ ಅಧ್ಯಕ್ಷೆ ಪದ್ಮಾವತಿ, ಜಿಲ್ಲಾ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಟಿ. ಕನುಮಪ್ಪ ಮತ್ತಿತರರಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಪುರಸ್ಕೃತ ಪತ್ರಕರ್ತರಾದ ಬಿ. ವೆಂಕಟಸಿಂಗ್ ಹಾಗೂ ಎನ್.ನಾಗರಾಜ ಅವರನ್ನು ಈ ವೇಳೆ ಸನ್ಮಾನಿಸಲಾಯಿತು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.