ಸಾಮೂಹಿಕ ವಿವಾಹ 21ರಂದು
ಸಿಂಧನೂರು: ಕನಕದಾಸ, ಕಾಳಿದಾಸ, ನಂಜುಂಡೇಶ್ವರ, ವೀರಸಂಗೊಳ್ಳಿ ರಾಯಣ್ಣ, ಕನಕಗುರುಪೀಠ ಕನಕ ಯುವಸೇನೆ ಸಂಘಗಳ ಸಂಯುಕ್ತಾಶ್ರಯದಲ್ಲಿ ಸುಕಾಲಪೇಟೆಯ ನಂಜುಂಡೇಶ್ವರ ಗರುವಿನ ಮಠದಲ್ಲಿ ಮಾ.21ರಂದು 50ಕ್ಕೂ ಹೆಚ್ಚು ಸಾಮೂಹಿಕ ವಿವಾಹಗಳು ಜರುಗಲಿವೆ. ಮಾ.25ರಂದು ಕುರುಬ ಸಮುದಾಯದ ಯುವಕರ ಸಮಾವೇಶ ಜರುಗುವುದು ಎಂದು ಮಾಜಿ ಸಂಸದ ಹಾಗೂ ಆಚರಣಾ ಸಮಿತಿ ಗೌರವಾಧ್ಯಕ್ಷ ಕೆ.ವಿರೂಪಾಕ್ಷಪ್ಪ ತಿಳಿಸಿದರು. ನಂಜುಂಡೇಶ್ವರ ಗುರವಿನ ಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಉಚಿತ ಸಾಮೂಹಿಕ ವಿವಾಹಗಳನ್ನು ಆಯೋಜಿಸಿದ್ದು ಸಮುದಾಯದ ಬಾಂಧವರು ಸಹಕರಿಸುವಂತೆ ಮನವಿ ಮಾಡಿದರು. ಪ್ರತಿದಿನ ಯಲ್ಲಾಲಿಂಗ ಶರಣ ಪುರಾಣ ಪ್ರವಚನ ಕಾರ್ಯಕ್ರಮ ನಡೆಯುತ್ತಿದ್ದು, ಮಾ.21ರಂದು ಮಹಾಮಂಗಲಗೊಳ್ಳಲಿದೆ ಎಂದರು. ಈ ವೇಳೆ ಹನುಮಂತಯ್ಯ ಗುರುವಿನ್, ಕನಕಗುರುಪೀಠದ ಅಧ್ಯಕ್ಷ ಟಿ.ಹನುಮಂತಪ್ಪ, ಪ್ರವಚನ ರತ್ನ ಮಡಿವಾಳಯ್ಯಸ್ವಾಮಿ, ಬಿ.ಲಿಂಗಪ್ಪ, ಹಂಪಯ್ಯ ಮುಂತಾದವರು ಉಪಸ್ಥಿತರಿದ್ದರು.
ಜಿಐಒನಿಂದ ಮೇಜಿನ ಮಾತುಕತೆ
ಸಿಂಧನೂರು: ನಗರದಲ್ಲಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೆಷ್ನಿಂದ ಮಹಿಳಾ ದಿನಾಚರಣೆ ಅಂಗವಾಗಿ ಮೇಜಿನ ಮಾತುಕತೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಸರಸ್ವತಿ ಪಾಟೀಲ್ ಮಹಿಳೆಯರಿಗೆ ಸುರಕ್ಷತೆಯಿಲ್ಲ. ಫ್ಯಾಕ್ಟರಿ, ಇನ್ನಿತರೆ ರಂಗಗಳಲ್ಲಿ ಮಹಿಳೆ ಕೇವಲ ಕೆಲಸಗಾರ್ತಿಯಾಗಿದ್ದಾಳೆ. ಆಕೆಗೆ ತನ್ನಿಚ್ಛೆಗೆ ಅನುಗುಣವಾಗಿ ಬದುಕಲು ಆಗುತ್ತಿಲ್ಲ. ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹುಸಿ ಪ್ರೀತಿ- ಪ್ರೇಮಕ್ಕೆ ಮನಸೋಲದೆ ಗುರಿ ಸಾಧನೆಗೆ ಹೆಚ್ಚಿನ ಗಮನ ಕೊಡುವಂತೆ ಸಲಹೆ ನೀಡಿದರು. ರಾಷ್ಟ್ರೀಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಎಂ.ಸಿ. ಸೀತಮ್ಮ ಮಾತನಾಡಿ, ಮಹಿಳೆ ಅಬಲೆಯಲ್ಲ, ಆಕೆ ಸಬಲೆ. ಗಂಡು- ಹೆಣ್ಣು ಇಬ್ಬರು ಸಮಾನರು ಎಂದು ಹೇಳಿದರು. ಶಿವಲೀಲಾ ಹಿರೇಮಠ, ಉಪನ್ಯಾಸಕಿ ಅಶ್ವಿನಿ, ಓಯಸಿಸ್ ಶಾಲೆ ಅಧ್ಯಕ್ಷೆ ಆಯಿಶಾ ನಾಸೀರ್ ಮಾತನಾಡಿದರು. ಶಂಕರ ಟ್ರಸ್ಟ್ ಕಾಲೇಜಿನ ಉಪನ್ಯಾಸಕಿಯರಾದ ಅಶ್ವಿನಿ, ಆನಂದಿ ಲಾಗೋಟಿ, ಒಳಬಳ್ಳಾರಿ ಶಾಲೆಯ ರಾಧಾ, ಮಲ್ಲಮ್ಮ ಶಿಕ್ಷಕಿ, ಸಂಗೀತಾ, ಸ್ವಾತಿ ಶರ್ಮಾ, ಡಾ. ಆಯಿಶಾ ತಹಸೀಗ್, ಜಿಐಒ ಕಾರ್ಯದರ್ಶಿ ನಸರೀನ್, ಖುರೇಶಿ ಇನ್ನಿತರರು ಭಾಗವಹಿಸಿದ್ದರು. ಜೈಬುನ್ನಿಸಾ ನಿರೂಪಿಸಿದರು. ರೆಹಾನ್ ಖುರಾನ್ ಪಠಿಸಿದರು. ಬುಶರಾ ಪರ್ವಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು.