ವ್ಯಕ್ತಿನಿಷ್ಠೆಯುಳ್ಳ ಪಕ್ಷಕ್ಕೆ ಮನ್ನಣೆ ಬೇಡ
ಶಹಾಪುರ: ವ್ಯವಸ್ಥೆಗಿಂತ ವ್ಯಕ್ತಿಯೇ ಮುಖ್ಯವೆನ್ನುವ, ತತ್ವ ಸಿದ್ಧಾಂತಗಳಿಗೆ ಬದ್ಧತೆಯಿಲ್ಲದೆ ಅಧಿಕಾರವೇ ಮುಖ್ಯ ಎನ್ನುವ ಮಂದಿಗೆ ಅವಕಾಶ ನೀಡಬೇಡಿ. ಮೋದಿಯಂತಹ ಬಣ್ಣದ ಮಾತನಾಡುವ ಬಿಜೆಪಿಗೆ ಮನ್ನಣೆ ನೀಡದೆ ಸಾರಾಸಗಟಾಗಿ ತಿರಸ್ಕರಿಸಿ ಎಂದು ಎಐಸಿಸಿ ಕಾರ್ಯದರ್ಶಿ ಮತ್ತು ವೀಕ್ಷಕ ಯು. ಭೂಪತಿ ಕರೆ ನೀಡಿದರು.
ತಾಲೂಕಿನಲ್ಲಿ ನಾಗನಟಿಗಿ ಗ್ರಾಮದಿಂದ ದಿಗ್ಗಿಯವರೆಗೆ 8ಕಿಮಿವರೆಗೆ ಕಾಂಗ್ರೆಸ್ನ ಭಾರತ ನಿರ್ಮಾಣ ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿಗ್ಗಿ ಗ್ರಾಮದ ಹೊರವಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸುಳ್ಳು ಪ್ರಚಾರದ ಮೂಲಕ ಬಿಜೆಪಿ ಜನರನ್ನು ಮೋಸ ಮಾಡುತ್ತಾ ಭ್ರಷ್ಟಾಚಾರ ಎಸಗಿದವರನ್ನೆ ಪಕ್ಕದಲ್ಲಿ ಕೂರಿಸಿಕೊಂಡು ರಾಜಕಾರಣ ಮಾಡುತ್ತಿದೆ. ಜಾತ್ಯಾತೀತ ನಿಲುವಿನ ಆಶಯಗಳನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿದರು.
ಮನ್ನಣೆ ನೀಡಿ: ಕಾಂಗ್ರೆಸ್ ಈ ದೇಶಕ್ಕೆ 6 ಜನ ಧೀಮಂತ ಪ್ರಧಾನ ಮಂತ್ರಿಗಳನ್ನು ಕೊಟ್ಟಿದೆ. ಅತ್ಯಂತ ಬದ್ಧತೆ ಇರುವ ಪಕ್ಷ ಆಗಿದೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತತ್ವ ಸಿದ್ಧಾಂತಗಳಿಗೆ ಮನ್ನಣೆ ನೀಡಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಭಾರತ ನಿರ್ಮಾಣ ಪಾದಯಾತ್ರೆ ಕಾಂಗ್ರೆಸ್ ಕಾರ್ಯಕರ್ತರು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ತಿಳಿಸಿದರು.
ರಾಯಚೂರು ಲೋಕ ಸಭೆಯ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ, ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲ್ಕಲ್, ತಾಲೂಕು ಅಧ್ಯಕ್ಷ ಚಂದ್ರಶೇಖರ ಆರಬೋಳ, ಬಸವರಾಜಪ್ಪಗೌಡ ದರ್ಶನಾಪುರ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.