ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಳೆ ಹಾನಿ: 13.70 ಕೋಟಿ ಪರಿಹಾರಕ್ಕೆ ವರದಿ

Lingaraj Badiger
Updated On : 16 Mar 2014, 12:20 pm

ಕ.ಪ್ರ. ವಾರ್ತೆ  ರಾಯಚೂರು  ಮಾ.15
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಕೃಷಿ ಕ್ಷೇತ್ರ ಸೇರಿದಂತೆ ಒಟ್ಟು 13.70 ಕೋಟಿ ಮೌಲ್ಯದ ಆಸ್ತಿಗೆ ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿರುವುದಾಗಿ ತಿಳಿಸಿರುವ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಮಾ.17, 18ರಂದು ಜಿಲ್ಲೆಗೆ ಬೆಳೆ ಹಾನಿ ಪರಿಶೀಲಿಸಲು ಕೇಂದ್ರದ ತಜ್ಞರ ತಂಡ ಆಗಮಿಸುವ ಸಾಧ್ಯತೆಯಿದೆ ಎಂದು ತಿಳಿಸಿದರು.
ನಗರದಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಆಲಿಕಲ್ಲು ಮಳೆಗೆ ಲಿಂಗಸ್ಗೂರು ಮತ್ತು ಸಿಂಧನೂರು ತಾಲೂಕಿನಲ್ಲಿ ತಲಾ ಒಬ್ಬರು ಪ್ರಾಣ ಕಳೆದುಕೊಂಡಿದ್ದು ಅವರ ಕುಟುಂಬದವರಿಗೆ ಜಿಲ್ಲಾಡಳಿತ ಈಗಾಗಲೇ ತಲಾ 1.50 ಲಕ್ಷ ಪರಿಹಾರ ನೀಡಿದೆ ಎಂದು ತಿಳಿಸಿದರು.
ಹಾನಿ ಅಂದಾಜು: ಅದೇ ರೀತಿ ಅಕಾಲಿಕ ಮಳೆಗೆ 86 ಜಾನುವಾರುಗಳು ಸಾವಿಗೀಡಾಗಿದ್ದು, ಅವುಗಳಿಗೆ ಒಟ್ಟು 2.24 ಲಕ್ಷ ಪರಿಹಾರ ವಿತರಿಸಲಾಗಿದೆ.
 ಜಿಲ್ಲೆಯ 1,792.75 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಹಾಗೂ ತೋಟಗಾರಿಕೆ ಬೆಳೆ ಮಳೆಗೆ ಸಿಲುಕಿ ಹಾನಿಗೀಡಾಗಿದ್ದು, ಸುಮಾರು 13.53 ಕೋಟಿಯಷ್ಟು ಬೆಳೆ ಹಾನಿ ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಬೆಳೆ ಹಾನಿ ಪರಿಹಾರ ವಿತರಣೆ ಲೋಕಸಭೆ ಚುನಾವಣೆಯ ನಂತರವಷ್ಟೇ ಸಾಧ್ಯ. ಸದ್ಯ ಜನ ಹಾಗೂ ಜಾನುವಾರು ಪ್ರಾಣ ಹಾನಿಗೆ ಪರಿಹಾರ ನೀಡಲಾಗಿದೆ. ಅಕಾಲಿಕ ಮಳೆಗೆ ಜಿಲ್ಲೆಯಲ್ಲಿ 315 ಮನೆಗಳು ಹಾನಿಗೀಡಾಗಿದ್ದು, 11.59 ಲಕ್ಷ ನಷ್ಟ ಸಂಭವಿಸಿದೆ ಎಂದು ತಿಳಿಸಿದರು.
17, 18ರಂದು ಪರಿಶೀಲನೆ: ಜಿಲ್ಲೆಯಲ್ಲಿ ಒಟ್ಟು 13.70 ಕೋಟಿ ಆಸ್ತಿಗೆ ಹಾನಿಯಾಗಿದೆ. ಹಾನಿಯ ಪರಿಶೀಲನೆಗೆ ಮಾ.17 ಮತ್ತು 18ರಂದು ಕೇಂದ್ರದ ತಜ್ಞರ ತಂಡವೊಂದು ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದ ಅವರು, ಅಕಾಲಿಕ ಮಳೆಯಿಂದಾದ ಹಾನಿಗೆ ಪ್ರತಿಯಾಗಿ ತುರ್ತು ಪರಿಹಾರ ಕಾರ್ಯಕ್ಕೆ ಲಿಂಗಸ್ಗೂರು ಸಹಾಯಕ  ಆಯುಕ್ತರಿಗೆ 50 ಲಕ್ಷ ಹಾಗೂ ರಾಯಚೂರು ತಹಸೀಲ್ದಾರರಿಗೆ 30 ಲಕ್ಷ ಹೀಗೆ ಒಟ್ಟು 80 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಬೇಸಿಗೆ ನೀರು ನಿರ್ವಹಣೆ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಅಗತ್ಯ ಅನುದಾನಕ್ಕೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಒಟ್ಟು 14.52 ಕೋಟಿ ಪರಿಹಾರಕ್ಕೆ ಬೇಡಿಕೆ ಇಡಲಾಗಿದೆ.
   ಟ್ಯಾಂಕರ್ ಮೂಲಕ ಕುಡಿಯುವ ನೀರೊದಗಿಸಲು 35.961 ಲಕ್ಷ, ಕುಡಿವ ನೀರಿನ ಪೈಪ್‌ಲೈನ್ ಕಾಮಗಾರಿಗಳಿಗೆ 6.92 ಕೋಟಿ, ನಗರ ಪ್ರದೇಶದಲ್ಲಿ ಕುಡಿವ ನೀರಿನ ಕಾಮಗಾರಿಗಳಿಗೆ 4.54 ಕೋಟಿ, ಜಾನುವಾರುಗಳಿಗೆ ಮೇವು ಮತ್ತು ಗೋಶಾಲೆ ಹಾಗೂ ಪಶುಸಂರಕ್ಷಣೆ ಕ್ರಮಗಳಿಗೆ 1.65 ಕೋಟಿ ಹಾಗೂ ಬೆಳೆ ಹಾನಿ ಸಂಭವಿಸಿದಲ್ಲಿ ಪರಿಹಾರ ವಿತರಿಸಲು 10.5 ಕೋಟಿ ಒದಗಿಸುವಂತೆ ಕೋರಲಾಗಿದೆ ಎಂದು ತಿಳಿಸಿದರು.
ಪ್ರಕೃತಿ ವಿಕೋಪ ಅನುದಾನ ಬಳಕೆ: ಸರ್ಕಾರವು ಜಿಲ್ಲಾಡಳಿತ ಬಳಿ ಲಭ್ಯವಿರುವ ಪ್ರಕೃತಿ ವಿಕೋಪ ಅನುದಾನದ ಬಳಕೆಗೆ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ರಾಯಚೂರು ನಗರಸಭೆಗೆ 50 ಲಕ್ಷ, ಸಿಂಧನೂರು ನಗರಸಭೆಗೆ 40 ಲಕ್ಷ, ಮಾನವಿ, ದೇವದುರ್ಗ, ಲಿಂಗಸ್ಗೂರು ಪುರಸಭೆಗಳಿಗೆ ತಲಾ 20 ಲಕ್ಷ ಹಾಗೂ ಮುದಗಲ್ ಪಟ್ಟಣ ಪಂಚಾಯಿತಿಗೆ 10 ಲಕ್ಷ ಶೀಘ್ರದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಒದಗಿಸಲಾಗುತ್ತದೆ ಎಂದು ಹೇಳಿದರು.
 ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ. ಅಂಥ ದೂರುಗಳು ಬಂದಲ್ಲಿ ತುರ್ತು ಸ್ಪಂದಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು, ಚುನಾವಣೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
  ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಜಾರಿಯಲ್ಲಿದ್ದು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅವರು ಮನವಿ ಮಾಡಿದರು.

ಸರ್ಕಾರಕ್ಕೆ ಸುಳ್ಳು ವರದಿ ಸಲ್ಲಿಕೆ: ರೈತ ಸಂಘ
ರಾಯಚೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದಾದ ಬೆಳೆ ಹಾನಿಯ ಬಗ್ಗೆ ಅಧಿಕಾರಿಗಳು ಸರ್ಕಾರಕ್ಕೆ ಸುಳ್ಳು ವರದಿ ಸಲ್ಲಿಸಿದ್ದಾರೆಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ ಮತ್ತಿತರರು ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ ವಾರ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಬಿಳಿ ಜೋಳ, ಬತ್ತ, ಹತ್ತಿ, ಮೆಣಸಿನಕಾಯಿ ಸೇರಿದಂತೆ ತೋಟಗಾರಿಕೆ ಬೆಳೆಗಳೂ ಹಾನಿಗೀಡಾಗಿದ್ದು, ಅಧಿಕಾರಿಗಳು ಸಮರ್ಪಕವಾಗಿ ಬೆಳೆ ಹಾನಿ ಅಂದಾಜಿಸಿಲ್ಲ ಎಂದು ಟೀಕಿಸಿದ್ದಾರೆ.
ಕೃಷಿ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿ ಕುರಿತು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಿಲ್ಲ. ಸುಳ್ಳು ಮಾಹಿತಿ ಜಿಲ್ಲಾಡಳಿತಕ್ಕೆ ನೀಡಿದ್ದಾರೆಂದು ಆರೋಪಿಸಿರುವ ಅವರು, ಕಾರಣ ಕೂಡಲೇ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಹಿಂಪಡೆದು ಪುನಾ ಪರಿಶೀಲಿಸಿ ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ನಡೆಸಿ ಪರಿಹಾರ ವಿತರಿಸಬೇಕು.
ತಪ್ಪಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಂಘಟನೆಯ ತಾಲೂಕು ಗೌರವಾಧ್ಯಕ್ಷ ವೀರನಗೌಡ ಹಾಗೂ ತಾಲೂಕು ಕಾರ್ಯಾಧ್ಯಕ್ಷ ಜಯಪ್ಪಸ್ವಾಮಿ ಉಡುಮಗಲ್ ಮತ್ತಿತರರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement