'ಕಿರಿಯ ನ್ಯಾಯವಾದಿಗಳು ವ್ಯಾಕರಣಬದ್ಧ್ದ ಇಂಗ್ಲಿಷ್ ಕಲಿಯಲಿ'
ಸಿಂಧನೂರು: ಕಿರಿಯ ನ್ಯಾಯವಾದಿಗಳು ನ್ಯಾಯಾಲಯದ ಕಾರ್ಯಕಲಾಪಗಳನ್ನು ಚಾಚು ತಪ್ಪದೇ ವೀಕ್ಷಿಸಬೇಕು. ಅಲ್ಲಿ ಹಿರಿಯ ವಕೀಲರ ವಾದ- ವಿವಾದಗಳನ್ನು ಪ್ರತಿ ಹಂತದಲ್ಲಿ ಗಮನಿಸಬೇಕು. ಮುಖ್ಯವಾಗಿ ಇಂಗ್ಲಿಷ್ ಭಾಷೆ ವ್ಯಾಕರಣ ಬದ್ಧವಾಗಿ ಕಲಿಯಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಭಾರತಿ ಎಸ್.ರಾಯಣ್ಣವರ್ ಸಲಹೆ ನೀಡಿದರು.
ನ್ಯಾಯಾಲಯದ ಸಭಾಂಗಣದಲ್ಲಿ ಕರ್ನಾಟಕ ವಕೀಲರ ಪರಿಷತ್, ತಾಲೂಕಾ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಕಾನೂನು ಕಾರ್ಯಾಗಾರದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು. ನ್ಯಾಯಾಂಗ ಕ್ಷೇತ್ರದಲ್ಲಿ ಎಷ್ಟು ಕಲಿತರೂ ಕಡಿಮೆ. ದಿನೆದಿನೇ ಹೊಸ- ಹೊಸ ತೀರ್ಪುಗಳು ವಿವಿಧ ವಿಷಯಗಳ ಕುರಿತು ಕೆಳ ಹಂತದ ನ್ಯಾಯಾಲಯದಿಂದ ಸರ್ವೋಚ್ಛ ನ್ಯಾಯಾಲಯದವರೆಗೆ ಹೊರ ಬರುತ್ತವೆ. ವಿಶೇಷವಾಗಿ ಎಐಆರ್, ಐಎಲ್ಆರ್ಗಳನ್ನು ಕಿರಿಯ ವಕೀಲರು ಓದಿ ಜ್ಞಾನ ಸಂಪಾದಿಸಿಕೊಳ್ಳುಬೇಕೆಂದು ಹೇಳಿದರು.
ಮಹತ್ವದ ವಿಷಯಗಳು: ಸಹಾಯಕ ಸರ್ಕಾರಿ ಅಭಿಯೋಜಕ ಶೇಖರಪ್ಪ ಶಾಲಿಗನೂರು ಮಾತನಾಡಿ, ಮೂರು ದಿನಗಳ ಕಾನೂನು ಕಾರ್ಯಾಗಾರದಿಂದ ಅನೇಕ ಮಹತ್ವದ ವಿಷಯಗಳನ್ನು ತಿಳಿದುಕೊಳ್ಳಲು ಎಲ್ಲರಿಗೂ ಸಹಾಯಕವಾಯಿತು. ಅನೇಕ ಕಾನೂನು ತಜ್ಞರು, ವಿಶ್ವವಿದ್ಯಾಲಯಗಳ ಕಾನೂನು ಪ್ರಾಧ್ಯಾಪಕರು ವಿವಿಧ ವಿಷಯಗಳ ಕುರಿತು ಪಾಂಡಿತ್ಯ ಪೂರ್ಣ ಉಪನ್ಯಾಸ ಮಂಡಿಸಿದರು. ಇದರ ಸದುಪಯೋಗವನ್ನು ಬಹುತೇಕ ನ್ಯಾಯವಾದಿಗಳು ಪಡೆದುಕೊಂಡಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾನ್ವಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಸವರಾಜ ಗುಮ್ಮ, ಲಿಂಗಸ್ಗೂರು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಮುದುಕಪ್ಪ, ನ್ಯಾಯವಾದಿ ಹನುಮಂತಪ್ಪ ಗುಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಲಿಂಗಸ್ಗೂರು ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಮಹಾಲಿಂಗಪ್ಪ, ಸಿಂಧನೂರು ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಹನುಮೇಶ ಕೊಡ್ಲಿ, ಖಜಾಂಚಿ ಸುರೇಶ ರೆಡ್ಡಿ ಚನ್ನಳ್ಳಿ ಉಪಸ್ಥಿತರಿದ್ದರು. ಲಕ್ಷ್ಮೀಕಾಂತ ರೆಡ್ಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಾಗಾರದಲ್ಲಿ ಲಿಂಗಸ್ಗೂರು, ಮಾನ್ವಿ, ಸಿರಗುಪ್ಪಾ, ರಾಯಚೂರು ನ್ಯಾಯವಾದಿಗಳು ಪಾಲ್ಗೊಂಡಿದ್ದರು.