ಜಿಲ್ಲೆಯಲ್ಲಿ ರಂಗಿನೋಕುಳಿ
ರಾಯಚೂರು: ನಗರದ ಸೇರಿದಂತೆ ಜಿಲ್ಲಾದ್ಯಂತ ವಿವಿಧೆಡೆ ಸೋಮವಾರ ಬಣ್ಣದ ಹಬ್ಬ ಹೋಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ನಗರದಲ್ಲಿ ಭಾನುವಾರ ಆರಂಭಗೊಂಡಿದ್ದ ಬಣ್ಣದ ಹಬ್ಬದಾಚರಣೆ ಸೋಮವಾರವೂ ಮುಂದುವರಿಯಿತು. ಭಾನುವಾರ ರಾತ್ರಿ ಕಾಮದಹನದ ನಂತರ ಸೋಮವಾರ ಬೆಳಗ್ಗೆಯೇ ಜನತೆ ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡರು. ಪರಸ್ಪರ ಬಣ್ಣ ಹಚ್ಚಿ ಕುಣಿದು ಸಂಭ್ರಮಿಸಿದರು.
ನಗರದಲ್ಲಿ ಸೋಮವಾರ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಗಳು ನಡೆದಿದ್ದರಿಂದ ಪರೀಕ್ಷಾರ್ಥಿಗಳು ಹೋಳಿ ಆಚರಣೆಯಿಂದ ದೂರವೇ ಉಳಿದರು. ಇನ್ನೂ ಕೆಲವರು ಭಾನುವಾರವೇ ಹೋಳಿ ಆಚರಿಸಿ ಸಂಭ್ರಮಿಸಿದ್ದು ಕಂಡುಬಂದಿತು.
ಹೋಳಿ ಆಚರಣೆಯ ಹಿನ್ನೆಲೆಯಲ್ಲಿ ನಗರದ ಬಹುತೇಕ ಎಲ್ಲ ಕಡೆ ಯುವಕರು ಗುಂಪುಗೂಡಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.
ನಗರದ ಪ್ರಮುಖ ಸ್ಥಳಗಳಲ್ಲಿ ಜಮಾಯಿಸಿದ ಯುವಕರು ಪ್ರಸಿದ್ಧ ಚಿತ್ರಗೀತೆಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಬಣ್ಣ ತುಂಬಿದ್ದ ಮಡಿಕೆಗಳನ್ನು ಒಡೆಯುವ ಸ್ಪರ್ಧೆಯೂ ಯುವಕರ ಮಧ್ಯೆ ನಡೆಯಿತು. ಚುನಾವಣೆ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಗರದ ತೀನ್ ಕಂದೀಲ್, ಬಿಆರ್‌ಬಿ ವೃತ್ತದ ಬಳಿ ಸೇರಿದಂತೆ ಆಯಕಟ್ಟಿನ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.