ದುಡ್ಡಿಗಿಂತ ಜ್ಞಾನದ ಬೆನ್ನು ಹತ್ತಿ
ಸಿಂಧನೂರು: ವಕೀಲರು ವೃತ್ತಿ ಜೀವನದಲ್ಲಿ ದುಡ್ಡಿನ ಬೆನ್ನು ಹತ್ತುವುದರ ಬದಲಾಗಿ ಜ್ಞಾನದ ಬೆನ್ನು ಹತ್ತುವಂತೆ ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಕರೆ ನೀಡಿದರು.
ನ್ಯಾಯಾಲಯದ ಸಭಾಂಗಣದಲ್ಲಿ ಕರ್ನಾಟಕ ವಕೀಲರ ಪರಿಷತ್, ತಾಲೂಕಾ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಕಾನೂನು ಕಾರ್ಯಾಗಾರದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಅಲ್ಲಮ ಪ್ರಭುವಿನ ವಚನವನ್ನು ಉಲ್ಲೇಖಿಸಿ ತಮ್ಮ ಮಾತುಗಳನ್ನು ಆರಂಭಿಸಿದ ಅರಳಿ ನಾಗರಾಜ, ಎಲ್ಲ ವಕೀಲರಿಗೆ ಜ್ಞಾನದ ಹಸಿವು ಹೆಚ್ಚಾಗಬೇಕು. ಜ್ಞಾನದ ಪೀಪಾಸುಗಳಾಗಬೇಕು. ಅಂದಾಗ ಮಾತ್ರ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದರು.
ವಕೀಲರು ವೃತ್ತಿಯಿಂದ ನ್ಯಾಯಾಧೀಶರ ವೃತ್ತಿಗೆ ಹೋದವರು ತಮ್ಮ ಮೂಲ ವೃತ್ತಿಯ ಕಷ್ಟ ನಷ್ಟಗಳ ಅರಿವಿನಲ್ಲಿಟ್ಟುಕೊಂಡು ನ್ಯಾಯದಾನ ಮಾಡಬೇಕು. ನ್ಯಾಯಾಧೀಶರ ಕುರ್ಚಿ ವಿಕ್ರಮಾದಿತ್ಯನ ಸಿಂಹಾಸನವಲ್ಲ. ತಾವು ತಮ್ಮ ನ್ಯಾಯಾಧೀಶರ ಅವಧಿಯಲ್ಲಿ ಅನೇಕ ನ್ಯಾಯಾಧೀಶರನ್ನು ಅವರ ವರ್ತನೆಯನ್ನು ಕಂಡಿರುವ ಸಂದರ್ಭಗಳನ್ನು ಉಲ್ಲೇಖಿಸಿದ ನಾಗರಾಜ, ವಕೀಲರ ಬಗ್ಗೆ ನ್ಯಾಯಾಧೀಶರು ಯಾವುದೇ ಕಾರಣಕ್ಕೂ ಪೂರ್ವಗ್ರಹ ಪೀಡಿತರಾಗಬಾರದು ಎಂದು ಹೇಳಿದರು.
ಸಿಂಧನೂರು ನ್ಯಾಯಾಲಯದಿಂದ ಈ ಬಾರಿ ನಡೆದ ಪರೀಕ್ಷೆಯಲ್ಲಿ ಚನ್ನಪ್ಪ ಬಂಗಾರ ಶೆಟ್ಟಿ, ಮರಿಯಪ್ಪ ತುರ್ವಿಹಾಳ ಎಂಬ ಇಬ್ಬರು ವಕೀಲರು ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿರುವುದು ಸಂತಸದ ವಿಷಯ. ಅವರಿಬ್ಬರು ಸಿಂಧನೂರು ನ್ಯಾಯಾಲಯದ ಹೆಸರನ್ನು ಉಳಿಸುವ ಕೆಲಸ ಮಾಡಬೇಕು. ಕಕ್ಷಿದಾರರ ಸಮಸ್ಯೆಗಳಿಗೆ ನ್ಯಾಯಯುತವಾಗಿ ಸ್ಪಂದಿಸಬೇಕೆಂದು ಸೂಚಿಸಿದರು.