ಬಿಸಿಲಿನ ಪ್ರತಾಪಕ್ಕೆ ಬಸವಳಿದ ಪಪ್ಪಾಯಿ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಮುದಗಲ್ ಮಾ.17
ಹೈದ್ರಾಬಾದ್ ಕರ್ನಾಟಕ ಪ್ರದೇಶ ಬಿಸಿಲಿಗೆ ಹೆಸರುವಾಸಿ. ಕೇವಲ ಮನುಷ್ಯರಿಗೆ ಮಾತ್ರವಲ್ಲದೆ, ತೋಟಗಾರಿಕೆ ಬೆಳೆಗಳ ಮೇಲೆ ಬೇಸಿಗೆಯ ವಕ್ರದೃಷ್ಟಿ ಬೀರಿದ್ದು ರೈತರು ಬೆಳೆದ ಪಪ್ಪಾಯಿ ಹಾಳಾಗಿ ರೈತರಿಗೆ ಲಕ್ಷಾಂತರ ರು. ನಷ್ಟವುಂಟಾಗಿದೆ.
ಪಟ್ಟಣ ಸಮೀಪದ ಮೂಡಲದಿನ್ನಿ ಸೇರಿದಂತೆ ಸುತ್ತಲಿನ ಗ್ರಾಮೀಣ ಭಾಗಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ನೀರಾವರಿ ಮಾಡಿಕೊಂಡು ಬೆಳೆದ ಪಪ್ಪಾಯಿ ಬೆಳೆಯು ಕಳೆದ ವಾರ ಸುರಿದ ಅಕಾಲಿಕ ಮಳೆಯಿಂದಾಗಿ ಮುಕ್ಕಾಲು ಭಾಗ ಹಾಳಾಗಿತ್ತು. ಈಗ ದಿಢೀರನೆ ಬಿರು ಬಿಸಿಲಿನ ತಾಪಕ್ಕೆ ದಿನೇ ದಿನೇ ಕಮರುತ್ತಿದೆ. ಇದರಿಂದಾಗಿ ಪಪ್ಪಾಯಿ ಬೆಳೆದ ರೈತ ಕಂಗಾಲಾಗಿದ್ದಾನೆ.
ರದ್ದಿ ಪೇಪರ್ಗಳಿಂದ ರಕ್ಷಣೆ: ಕಾಯಿ ಹಣ್ಣಾಗುವ ಸಂದರ್ಭದಲ್ಲಿ ಬೇಸಿಗೆ ಬಿಸಿಲಿನ ಝಳಕ್ಕೆ ಹಣ್ಣಿನ ಮೇಲ್ಪದರು ಕಪ್ಪಾಗಿ ಉದುರಿ ಹಾಳಾಗುತ್ತಿದೆ. ಅದಕ್ಕಾಗಿ ರೈತರು ತೋಟದಲ್ಲಿನ ಪ್ರತಿ ಪಪ್ಪಾಯಿ ಗಿಡದ ಕಾಯಿಗಳಿಗೆ ರದ್ದಿ ಪೇಪರ್ಗಳಿಂದ ಮುಚ್ಚುವ ಮೂಲಕ ಹಣ್ಣಿನ ರಕ್ಷಣೆಗೆ ಮುಂದಾಗಿರುವುದು ವಿಶೇಷ.
ಬಿಸಲಿನ ಝಳಕ್ಕೆ ಜಮೀನಿನಲ್ಲಿ 5ರಿಂದ 7 ಅಡಿ ಅಂತರದಲ್ಲಿ ತೈವಾನ್ ರೆಡ್ ಲೇಡಿ ಹೆಸರಿನ ಪಪ್ಪಾಯಿ ಬೆಳೆಯು ಕಮರುತ್ತಿದೆ ಎಂದು ರೈತರು ಹೇಳುತ್ತಾರೆ. ಹನಿ ನೀರಾವರಿ ತಂತ್ರ ಅಳವಡಿಸಿಕೊಂಡು ಲಕ್ಷಾಂತರ ರು. ಖರ್ಚು ಮಾಡಿ ಬೆಳೆಯಲಾದ ಬೆಳೆಯು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಪಪ್ಪಾಯಿ ಬೆಳೆದ ರೈತ ಹನುಮಪ್ಪ ನೊಂದು ನುಡಿಯುತ್ತಾನೆ.
ಅಲ್ಪ ಸ್ವಲ್ಪ ರಸಾಯನಿಕದ ಜೊತೆಯಲ್ಲಿ ಎರೆಹುಳು ಗೊಬ್ಬರ ಹಾಗೂ ಜೀವಾಮೃತ ಉಪಯೋಗಿಸಲಾಗಿದೆ. ಸುಮಾರು ಒಂದು ವರ್ಷದ ಹಿಂದೆ ನಾಟಿ ಮಾಡಿದ ಪಪ್ಪಾಯಿ ಫಲ ನೀಡಲಾರಂಭಿಸಿದೆ. ಆದರೆ ಬಿಸಲಿನ ಝಳಕ್ಕೆ ಕಾಯಿಗಳು ಉದರಿ ಬೀಳುತ್ತಿವೆ ಎಂದು ರೈತ ತನ್ನ ನೋವು ತೋಡಿಕೊಂಡಿದ್ದಾನೆ.
ಬಿಸಿಲಿನ ತಾಪದಿಂದ ರಕ್ಷಿಸಲು ಪಪ್ಪಾಯಿ ಬೆಳೆಗೆ ರದ್ದಿ ಪೇಪರ್ನಿಂದ ರಕ್ಷಣೆ ನೀಡಲಾಗಿದ್ದು ಕಳೆದ ವಾರದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆಯು ಕಪ್ಪಾಗಿದ್ದು ಒಂದೆಡೆಯಾದರೆ ದಿಢೀರನೆ ಬಿಸಿಲಿನ ತಾಪಮಾನ ಹೆಚ್ಚಿದ್ದರಿಂದ ಪಪ್ಪಾಯಿ ಬೆಳೆ ನಷ್ಟಕ್ಕೀಡಾಗಿದೆ.
ಹನುಮಪ್ಪ
ಪಪ್ಪಾಯಿ ಬೆಳೆಗಾರ