ಹಲ್ಲೆ: ಓರ್ವನ ಬಂಧನ
ಚಿತ್ತಾಪುರ: ಮಾ.12 ರಂದು ಚಿತ್ತಾಪುರದ ಶರಣಪ್ಪ ನಾಟೀಕಾರ ಹಾಗೂ ಆತನ ಹೆಂಡತಿಗೆ ಅವರ ಮನೆಗೆ ನುಗ್ಗಿ ಲಾಂಗು, ಮಚ್ಚು ಸೇರಿದಂತೆ ಮಾರಕಸ್ತ್ರಗಳಿಂದ ಹಲ್ಲೆಮಾಡಿದ್ದ ಭಾಗೋಡಿ ಗ್ರಾಮದ ಪುನಿತ ಶರಣಬಸಪ್ಪ ಐನಾಪುರ ಹಾಗೂ ಬಾಡಿಗೆ ಸಹಚರರಲ್ಲಿ ಪುನಿತ್ ಐನಾಪುರನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಡಿವೈಎಸ್‌ಪಿ ಮಹೇಶ ಮೇಘಣ್ಣನವರ ಮಾರ್ಗದರ್ಶನದಲ್ಲಿ ಸಿಪಿಐ ಶಂಕರಗೌಡ ಪಾಟೀಲ್, ಸಿಪಿಐ ಸಂಜುಕುಮಾರ ಹಾಗೂ ಸಿಬ್ಬಂದಿ ಅರೋಪಿಯನ್ನು ಬಂಧಿಸಿದ್ದು, ಇನ್ನುಳಿದವರ ಶೋಧ ನಡೆದಿದೆ ಎಂದು ತಿಳಿಸಿದ್ದಾರೆ.
ಇಂದು ಜನಪದ ಉತ್ಸವ
ಗುಲ್ಬರ್ಗ: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಚಿತ್ತಾಪುರ ತಾಲೂಕಿನ ಆಲಹಳ್ಳಿ ಗ್ರಾಮದ ಮಹಾತ್ಮಪೀಠ ಗದ್ದುಗೆ ಮಠದಲ್ಲಿ ಮಾ.19 ರಂದು ಸಂಜೆ 4ಕ್ಕೆ ಸುಗ್ಗಿ- ಹುಗ್ಗಿ ಎಂಬ ಒಂದು ದಿನದ ಜನಪದ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮದ ಅಂಗವಾಗಿ ಅಂದು ಸಂಜೆ 4ಕ್ಕೆ ವಿವಿಧ ಜಿಲ್ಲೆಯ ಗ್ರಾಮೀಣ ಜನಪದ ಕಲಾ ತಂಡಗಳ ಮೆರವಣಿಗೆಯನ್ನು ಆಲಹಳ್ಳಿ ಅಗಸಿಯಿಂದ ಗದ್ದುಗೆ ಮಠದವರೆಗೆ ಹಮ್ಮಿಕೊಳ್ಳಲಾಗಿದೆ. ಸಂಜೆ 5ಕ್ಕೆ ಆಲಹಳ್ಳಿ ಗ್ರಾಮದ ಗದ್ದುಗೆ ಮಠದ ಆವರಣದಲ್ಲಿ ಸುಗ್ಗಿ-ಹುಗ್ಗಿ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯಪ್ರಶಸ್ತಿ ಪುರಸ್ಕೃತರಾದ ಪುಂಡಲಿಕ ಪೂಜಾರಿ ನೆರವೇರಿಸವರು. ಅಧ್ಯಕ್ಷತೆಯನ್ನು ಗದ್ದುಗೆಮಠದ ಮಹಾಸ್ವಾಮಿಗಳಾದ ನಾಗಪ್ಪಯ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಜನಪದ ತಜ್ಞರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರೊ. ಸೂಗಯ್ಯ ಹಿರೇಮಠ, ಹಿರಿಯ ವಿದ್ವಾಂಸ ಪ್ರೊ. ಗವೀಶ ಹಿರೇಮಠ ಭಾಗವಹಿಸುವರು.
ಪ್ರವಚನಕ್ಕೆ ಉತ್ತಮ ಪ್ರತಿಕ್ರಿಯೆ
ಶಹಾಬಾದ್: ನಗರದ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠದ ಶಾಲಾ ಕಾಲೇಜುಗಳ ಆವರಣದಲ್ಲಿ ಮಾ. 2ರಿಂದ ನಡೆಯುತ್ತಿರುವ ಬಿಜಾಪುರದ ಜ್ಞಾನಯೋಗಾಶ್ರವುದ ಸಿದ್ದೇಶ್ವರ ಮಹಾಸ್ವಾಮಿ ಆಧ್ಯಾತ್ಮ ಪ್ರವಚನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರ ಬ್ರಾಹ್ಮಿ ಮಹೂರ್ತದಲ್ಲಿ ಎದ್ದು ಸಿದ್ದೇಶ್ವರ ವಾಣಿ ಕೇಳಲು ಸಿದ್ಧವಾಗುತ್ತಿದೆ.
ನಗರದ ಜನತೆಯ ಬಹುದಿನಗಳ ನಿರೀಕ್ಷೆಯಂತೆ ಸಿದ್ದೇಶ್ವರಶ್ರೀಗಳ ಪ್ರವಚನ ಪ್ರಾರಂಭವಾಗಿದೆ. ಪ್ರವಚನ ಪ್ರಾರಂಭವಾಗಿದ ದಿನದಿಂದ ನಗರದಲ್ಲಿ ಹಬ್ಬದ ವಾತಾವರಣ ಉಂಟಾಗಿದೆ. ನಗರದ ಬಡಾವಣೆಗಳಲ್ಲಿ ಜನ ಬೆಳಗ್ಗೆ ನಾಲ್ಕು ಗಂಟೆಗೆ ಏಳುತ್ತಿದ್ದು, ತಾಯಂದಿರು ಮನೆಯ ಮುಂದೆ ರಂಗೋಲಿ ಹಾಕಿ, ಸ್ನಾನ ಮಾಡಿ ಸಿದ್ದರಾಗುತ್ತಿದ್ದಾರೆ.
ಚಿತ್ತಾಪುರ, ಹೊನಗುಂಟಾ, ಗೋಳಾ (ಕೆ), ಜೇವರ್ಗಿ, ಗುಲ್ಬರ್ಗ, ಹೊನ್ನಕಿರಣಗಿ, ತೊನಸನಳ್ಳಿ (ಎಸ್) ಅಲ್ಸಟಾ ಕಾಲೋನಿ, ಜೆಪಿ ಕಾಲೋನಿ, ಭಂಕೂರ, ಶಾಂತನಗರದಿಂದ ಸಾವಿರಾರು ಜನ ಬೆಳಗ್ಗೆ 6 ಗಂಟೆಗೆ ಶಾಲೆಯ ಆವರಣಕ್ಕೆ ಬಂದು ಪ್ರವಚನ ಆಲಿಸಲು ಸಿದ್ಧರಾಗುತ್ತಾರೆ.