ಹೋಮಿಯೋಪತಿ ಪರಿಷತ್‌ಗೆ ಡಾ. ಪಾಟೀಲ್
ಗುಲ್ಬರ್ಗ: ಉತ್ತರ ಕರ್ನಾಟಕದ ಬಾಗಲಕೋಟೆ ಮೂಲದ, ಸದ್ಯ ಬೆಂಗಳೂರಲ್ಲಿರುವ ಸರ್ಕಾರಿ ಹೋಮಿಯೋಪತಿ ಮೆಡಿಕಲ್ ಕಾಲೇಜಲ್ಲಿ ಪ್ರಾರ್ಯರಾಗಿರುವ ಡಾ. ಎ.ಎಲ್.ಪಾಟೀಲರು ಮುಂದಿನ 5 ವರ್ಷಗಳ ಅವಧಿಗೆ ಪ್ರತಿಷ್ಠತ ಕೇಂದ್ರೀಯ ಹೋಮಿಯೋಪತಿ ಪರಿಷತ್‌ಗೆ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ಬಾಗಲಕೋಟೆ ಮೂಲವಾದರೂ ಇವರು ಬೆಳಗಾವಿ, ಗುಲ್ಬರ್ಗ, ರಾಯಚೂರು ಜಿಲ್ಲೆಗಳಲ್ಲಿಯೂ ಹೋಮಿಯೋಪತಿ ರಂಗದಲ್ಲಿ ಸೇವೆ ಸಲ್ಲಿಸಿ ಚಿರಪರಿಚಿತರು. ಹೀಗಾಗಿ ಇವರ ಈ ನೇಮಕಾತಿ ಉ- ಕ ಭಾಗದಲ್ಲಿನ ಹೋಮಿಯೋಪತಿ ಶಿಕ್ಷಣ ಹಾಗೂ ವೈದ್ಯ ಕ್ಷೇತ್ರದಲ್ಲಿ ಸಂತಸ ಮೂಡಿಸಿದೆ. ಕಳೆದ ಫೆಬ್ರವರಿ ತಿಂಗಳ 28 ರಿಂದಲೇ ಈ ನೇಮಕಾತಿ ಜಾರಿಗೊಂಡಿದ್ದು ಮುಂದಿನ 5 ವರ್ಷಗಳ ಅವಧಿವರೆಗೂ ಇದು ಮುಂದುವರಿಯಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ (ಆಯುಷ್ ಇಲಾಖೆ), ಭಾರತ ಸರ್ಕಾರ, ನವದೆಹಲಿ ಇವರ ಗೆಜೆಟ್ ಅಧಿಸೂಚನೆಯಲ್ಲಿ ಈ ನೇಮಕಾತಿ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಚುನಾವಣೆ ಮುಂದೂಡಿಕೆ
ಗುಲ್ಬರ್ಗ: ಮಹಾನಗರ ಪಾಲಿಕೆಯ ಮಹಾಪೌರರ, ಉಪಮಹಾಪೌರರ ಹಾಗೂ ಸ್ಥಾಯಿ ಸಮಿತಿಗಳ ಚುನಾವಣೆಯನ್ನು ಮುಂದೂಡಲಾಗಿದೆ. ಈ ಚುನಾವಣೆಯನ್ನು ಮಾ.18 ರಂದು ಮಧ್ಯಾಹ್ನ 3ಕ್ಕೆ ಗುಲ್ಬರ್ಗ ಜಿಲ್ಲಾ ಪಂಚಾಯ್ತಿಯ ಹಳೆ ಸಭಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು ಎಂದು ಅಪರ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ. ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯ ನಿಮಿತ್ತ ಸದರಿ ದಿನದಂದು ರಾಜ್ಯ ಎಲ್ಲ ಜಿಲ್ಲಾಧಿಕಾರಿ ತುರ್ತು ಸಭೆಯನ್ನು ನಿಗದಿಪಡಿಸಿರುವುದಾಗಿ ತಿಳಿಸಿರುವ ಪ್ರಯುಕ್ತ ಪ್ರಾದೇಶಿಕ ಆಯುಕ್ತರು ಹಾಗೂ ಬಳ್ಳಾರಿ ಜಿಲ್ಲಾಧಿಕಾರಿ ಸದರಿ ಸಭೆಗೆ ಅವಶ್ಯಕವಾಗಿ ಹಾಜರಿರಬೇಕಾಗಿರುವುದರಿಂದ ಗುಲ್ಬರ್ಗ ಮಹಾನಗರ ಪಾಲಿಕೆಯ ಮಹಾಪೌರರ, ಉಪಮಹಾಪೌರರ ಹಾಗೂ ಸ್ಥಾಯಿ ಸಮಿತಿಗಳ ಸ್ಥಾನಕ್ಕೆ ಚುನಾವಣೆಯನ್ನು ಮುಂದೂಡಲಾಗಿದೆ. ಚುನಾವಣೆಯ ಮುಂದಿನ ದಿನಾಂಕವನ್ನು ಶೀಘ್ರದಲ್ಲಿಯೇ ತಿಳಿಸಲಾಗುವುದು. ಸದರಿ ವಿಷಯವನ್ನು ಸಂಬಂಧಿಸಿದ ಶಾಸಕರು, ಸಂಸದರು ಹಾಗೂ ಮಹಾನಗರ ಪಾಲಿಕೆ ಎಲ್ಲ ಮುಖಂಡರ ಗಮನಕ್ಕೆ ತರಲಾಗಿದೆ.
ರೇಪ್: ಬಂಧನ
ಚಿತ್ತಾಪುರ: ತಾಲೂಕಿನ ದಿಗ್ಗಾಂವ ಗ್ರಾಮದ ವಿವಾಹಿತ ಮಹಿಳೆಯೊಬ್ಬಳ ಮೇಲೆ ಅದೇ ಗ್ರಾಮದ ಯುವಕನೊಬ್ಬ ಅತ್ಯಾಚಾರ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಒಂಟಿ ಮಹಿಳೆ ಸ್ನಾನ ಮಾಡುತ್ತಿರುವಾಗ ಗ್ರಾಮದ ಪಕ್ಕದ ಮನೆಯ ಶಿವರಾಜಕುಮಾರ್ ಶಂಕ್ರಪ್ಪ ಬೇಡರ ಮಹಿಳೆ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಹಿಳೆ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಮಾಡಿದ್ದಾನೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುಲ್ಬರ್ಗ ಆಸ್ಪತ್ರೆಗೆ ಸೇರಿಸಲಾಗಿದೆ. ಮಹಿಳೆ ನೀಡಿದ ದೂರಿನನ್ವಯ ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ಶಿವರಾಜಕುಮಾರ್ ಶಂಕ್ರಪ್ಪ ಬೇಡರ ವಿರುದ್ಧ ಕೇಸು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.