ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆಯೋಗದ ಉದ್ದೇಶಕ್ಕೆ ಹಿನ್ನಡೆ

Rashmi Kasaragodu
Updated On : 19 Mar 2014, 11:32 am

 ಜಗನ್ನಾಥ ಆರ್. ದೇಸಾಯಿ
ರಾಯಚೂರು: ಚುನಾವಣಾ ಆಯೋಗವು ಒಂದೆಡೆ ಮತದಾರರ ಜಾಗೃತಿಗೆ ಹತ್ತಾರು ಕಾರ್ಯಕ್ರಮಗಳನ್ನು ಜಾರಿಗೆ ತಂದು, ಶೇ.100ರಷ್ಟು ಮತದಾನದಿಂದ ಪ್ರಜಾಪ್ರಭುತ್ವ ಉಳಿಸಿ ಎಂಬ ಘೋಷಣೆ, ಸಿಲೆಬ್ರೆಟಿಗಳ ಭಿತ್ತಿಚಿತ್ರಗಳ ಹಂಚುವಿಕೆಯ ಸರ್ಕಸ್ ಮಾಡುತ್ತಿದೆ. ಇನ್ನೊಂದೆಡೆ ನೋಂದಣಿಗೆ ಅರ್ಜಿ ಸಲ್ಲಿಸಿ ಬೇಡಿದರೂ ಸೂಕ್ತ ರೀತಿಯ ಸ್ಪಂದನೆ ಆಡಳಿತದಿಂದ ದೊರೆಯುತ್ತಿಲ್ಲ ಎಂಬ ಕೂಗು ಅರ್ಹ ಮತದಾರರಿಂದ ಕೇಳಿಬರುತ್ತಿದೆ. ಇದು ಆಯೋಗದ ಉದ್ದೇಶಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ.
ಚುನಾವಣೆ ಹಿನ್ನೆಲೆಯಲ್ಲಿ ಮತ್ತಷ್ಟು ಮತದಾರರಿಗೆ ಮತದಾನಕ್ಕೆ ಅವಕಾಶ ನೀಡಲು ಆಯೋಗ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತೆಗೆದು ಹಾಕಲು, ತಿದ್ದುಪಡಿಗೆ ಮುಂದಾಗುತ್ತಿದ್ದರೂ ಜಿಲ್ಲೆಯಲ್ಲಿ ಕೇವಲ 6,048 ಜನ ಮಾತ್ರ ಹೊಸದಾಗಿ ಸೇರ್ಪಡೆಗೆ ಅರ್ಜಿ ಸಲ್ಲಿಸಿರುವುದು ಇಂಥ ವಾಸ್ತವಾಂಶವನ್ನು ಹೊರಹಾಕಿದೆ.
ವಿವಾದಕ್ಕೆ ತೆರೆ: ಕಳೆದ ವರ್ಷ ನಡೆದ ನಗರಸಭೆಯ ಚುನಾವಣೆಯ ವೇಳೆ ಅಧಿಕಾರಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಮತದಾರರ ಪಟ್ಟಿಯಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಮತದಾನದ ದಿನವೇ ಮತದಾರರ ಪಟ್ಟಿಯಿಂದ ಅನೇಕರ ಹೆಸರು ಸೂಕ್ತ ಕಾರಣವಿಲ್ಲದಿದ್ದರೂ ಕಿತ್ತು ಹಾಕಿರುವುದು ಬಹಿರಂಗಗೊಂಡಿತ್ತು. ಅದರಿಂದಾಗಿ ನಗರಸಭೆಯ ಚುನಾವಣೆ ವೇಳೆ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು.
ಆ ನಂತರದಲ್ಲಿ ಚುನಾವಣೆ ವಿಭಾಗವು ಮತದಾರರ ಪಟ್ಟಿ ಸರಿಪಡಿಸಲು ಹರಸಾಹಸ ಪಟ್ಟಿದ್ದೂ ಆಗಿದೆ. ನಂತರದಲ್ಲಿ ಎದುರಾದ ವಿಧಾನಸಭೆ ಚುನಾವಣೆ ವೇಳೆಗೆ ಮತದಾರರ ಪಟ್ಟಿಯ ಪರಿಷ್ಕರಣೆ ಅಭಿಯಾನದ ರೂಪದಲ್ಲಿ ಕೈಗೊಂಡರೂ, ತಿದ್ದುಪಡಿಗಳನ್ನು ಜಾರಿಗೆ ತರುವಲ್ಲಿ ಇಲಾಖೆಯು ಅಷ್ಟಾಗಿ ಆಸಕ್ತಿ ತೋರದಿರುವುದು ಮತದಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಸೇರ್ಪಡೆಗೆ ನಿರಾಸಕ್ತಿ: ಜಿಲ್ಲೆಯಲ್ಲಿ ಮಸ್ಕಿ, ದೇವದುರ್ಗ ಕ್ಷೇತ್ರದ ನಂತರದಲ್ಲಿ ರಾಯಚೂರು ನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಮತದಾರರ ಸಂಖ್ಯೆ ಕಡಿಮೆಯಿರುವುದು ಸಂಶಯಕ್ಕೆ ದಾರಿ ಮಾಡಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾರರು ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಒಟ್ಟು 21,01,071 ಮತದಾರರಿದ್ದರೆ ಮಾನವಿ ಕ್ಷೇತ್ರ- 2,04,047, ಲಿಂಗಸ್ಗೂರು ಕ್ಷೇತ್ರ- 2,04,019, ಸಿಂಧನೂರು ಕ್ಷೇತ್ರ- 2,02,555 ಮತದಾರರಿದ್ದಾರೆ.
ಆದರೆ ಮಸ್ಕಿ ಕ್ಷೇತ್ರದಲ್ಲಿ ಅತೀ ಕಡಿಮೆ 1,68,338, ದೇವದುರ್ಗ ಕ್ಷೇತ್ರ- 1,89,057 ಹಾಗೂ ರಾಯಚೂರು ನಗರ ಕ್ಷೇತ್ರದಲ್ಲಿ ಒಟ್ಟು 1,92,049 ಮತದಾರರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯ ವೇಳೆ ಹಾಗೂ ಆನಂತರದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೂ ಮತದಾರರು ಮಾತ್ರ ಆಸಕ್ತಿ ತೋರುತ್ತಿಲ್ಲ ಎಂಬುದು ಜಿಲ್ಲಾಡಳಿತದ ವಾದ.
ಅರ್ಹ ಮತದಾರರು ಹೇಳೋದೇನು?: ಇನ್ನೊಂದೆಡೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿ ಮತದಾರರಲ್ಲಿ ಆಡಳಿತದ ಕಾರ್ಯವೈಖರಿ ಬಗ್ಗೆ ಅಸಮಾಧಾನವಿದೆ. ಅನೇಕರು ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದರೂ ಅಂಥವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗುತ್ತಿಲ್ಲ ಎಂದು ಆರೋಪ ವ್ಯಾಪಕವಾಗಿದೆ.
ನಿಗದಿತ ನಮೂನೆಯಲ್ಲಿ ಅರ್ಹ ಮತದಾರರು ಎಲ್ಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೂ ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಾಟ ಮಾಡುವಂತಾಗಿದೆ ಎಂದು ಅನೇಕ ಮತದಾರರು ದೂರುತ್ತಾರೆ. ಸಿಬ್ಬಂದಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಮರ್ಪಕವಾಗಿ ಮಾಡುವುದಿಲ್ಲ. ಹೆಸರು ಮತ್ತು ಕುಟುಂಬದವರ ಹೆಸರುಗಳ ತಿದ್ದುಪಡಿಗೆ ಸಲ್ಲಿಸಿದರೂ ಅವುಗಳು ತಿದ್ದುಪಡಿ ಕಾಣುವುದಿಲ್ಲ ಎಂಬುದೂ ಸಾರ್ವತ್ರಿಕ ಆರೋಪ.
ಮತದಾರರ ನಿರಾಸಕ್ತಿ: ಈ ಬಗ್ಗೆ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಿದಾಗ್ಯೂ ಮತದಾರರು ಆಸಕ್ತಿ ತೋರುತ್ತಿಲ್ಲ. ಚುನಾವಣೆ ಘೋಷಣೆ ನಂತರದಲ್ಲಿ ನೀಡಿದ ಅವಕಾಶಕ್ಕೆ 6,048 ಜನ ಮಾತ್ರ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದಾರೆಂದು ತಿಳಿಸಿದ್ದಾರೆ.
  ಚುನಾವಣೆ ಆಯೋಗವು ಮತದಾರರ ಜಾಗೃತಿಗೆ ಒಂದೆಡೆ ಕೋಟಿ ಕೋಟಿ ರು. ವೆಚ್ಚ ಮಾಡುತ್ತಿದೆ. ಮತ್ತೊಂದೆಡೆ ಮತದಾರರ ಸಂಖ್ಯೆ ಮಾತ್ರ ಏರಿಕೆ ಕಾಣುತ್ತಿಲ್ಲ. ಮತದಾರರ ಸಂಖ್ಯೆಯೇ ಹೆಚ್ಚಳ ಕಾಣದಿದ್ದರೆ ಮತದಾನದ ಪ್ರಮಾಣ ಹೆಚ್ಚಾಗುವುದಾದರೂ ಹೇಗೆ ಎಂಬುದು ಪ್ರಜ್ಞಾವಂತರ ಆತಂಕ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement