ಆರು ಕ್ಷೇತ್ರಗಳಲ್ಲಿ ಎಸ್ಯುಸಿಐ ಕಣಕ್ಕೆ
ರಾಯಚೂರು: ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷವು ಪ್ರಸಕ್ತ ಚುನಾವಣೆಯಲ್ಲಿ ದೇಶದ 83 ಹಾಗೂ ರಾಜ್ಯದ ಆರು ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ರಾಧಾಕೃಷ್ಣ ಹೇಳಿದರು.
ಅವರು ನಗರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಎಂ. ಉಮಾದೇವಿ, ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಜಾಹಿದಾ ಶಿರೀನ್, ರಾಯಚೂರು ಎಸ್ಟಿ ಮೀಸಲು ಕ್ಷೇತ್ರದಲ್ಲಿ ಕೆ. ಸೋಮಶೇಖರ್, ಧಾರವಾಡ ಕ್ಷೇತ್ರದಲ್ಲಿ ಗಂಗಾಧರ ಬಡಿಗೇರ್, ಗುಲ್ಬರ್ಗಾ ಎಸ್ಸಿ ಕ್ಷೇತ್ರದಿಂದ ಎಸ್.ಎಂ. ಶರ್ಮಾ ಹಾಗೂ ಬಳ್ಳಾರಿ(ಎಸ್ಟಿ) ಕ್ಷೇತ್ರದಲ್ಲಿ ಎ. ದೇವದಾಸ್ ಸ್ಪರ್ಧಿಸಲಿದ್ದಾರೆಂದರು.
ವಾಸ್ತವಾಂಶ: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಪಕ್ಷಗಳೂ ತಮ್ಮನ್ನು ತಾವು ಅಭಿವೃದ್ಧಿಯ ಹರಿಕಾರ ಎಂದು ಬಿಂಬಿಸುವ ಕಾರ್ಯ ಮಾಡುತ್ತಿವೆ. ಆದರೆ ವಾಸ್ತವಾಂಶ ಅದಕ್ಕೆ ತದ್ವಿರುದ್ಧವಾಗಿದೆ. ಕಾಂಗ್ರೆಸ್, ಬಿಜೆಪಿ ಅಲ್ಲದೇ ಪ್ರಾದೇಶಿಕ ಪಕ್ಷಗಳೂ ಸಹ ಬಂಡವಾಳಶಾಹಿಗಳ ಪರವಾದ ನಿಲುವು ಹೊಂದಿವೆ ಎಂದು ಟೀಕಿಸಿದರು.
ಅಕ್ರಮ ಸಂಪಾದನೆ: ಭಾರತೀಯ ಉದ್ಯಮಿಗಳು, ರಾಜಕೀಯ ನಾಯಕರು ಮತ್ತು ಅಧಿಕಾರಿಶಾಹಿಗಳು ಕೋಟ್ಯಂತರ ರು. ಕಪ್ಪು ಹಣ ವಿದೇಶಿ ಬ್ಯಾಂಕುಗಳಲ್ಲಿರಿಸಿದ್ದಾರೆ. ಜಗತ್ತಿನ ಅತಿ ಹೆಚ್ಚು ಅಕ್ರಮ ಸಂಪಾದನೆ ಭಾರತೀಯರದ್ದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳಶಾಹಿಗಳ ಅಣತಿಯಂತೆಯೇ ಜಾಗತೀಕರಣ, ಉದಾರೀಕರಣ ನೀತಿಗಳನ್ನು ರೂಪಿಸಿ, ಜಾರಿಗೆ ತರುವ ಮೂಲಕ ಬಡವರಿಗೆ ಸಂಕಷ್ಟ ತಂದೊಡ್ಡುತ್ತಿವೆ ಎಂದು ಆರೋಪಿಸಿದರು.
ಖಾಸಗೀಕರಣ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ, ಉದ್ಯೋಗ, ಆರೋಗ್ಯ ಕ್ಷೇತ್ರಗಳ ಅನುದಾನವನ್ನು ಕಡಿತಗೊಳಿಸುತ್ತಿದ್ದು, ಈ ಕ್ಷೇತ್ರಗಳ ಖಾಸಗೀಕರಣಕ್ಕೆ ಹೆಚ್ಚಿನ ಆಸಕ್ತಿ ತೋರುವ ಮೂಲಕ ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಳ್ಳಲು ಅನುಕೂಲ ಕಲ್ಪಿಸುತ್ತಿವೆ ಎಂದು ಆರೋಪಿಸಿದರು.
ಪ್ರಸಕ್ತ ಚುನಾವಣೆಯಲ್ಲಿ ದೇಶದ ಮತದಾರರಿಗೆ ಜಾಗೃತಿಯಿಂದ ಮತದಾನ ಮಾಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು. ಬೆಲೆಯೇರಿಕೆ ನಿಯಂತ್ರಣದಲ್ಲಿ ವೈಫಲ್ಯ, ಭ್ರಷ್ಟಾಚಾರದಲ್ಲಿ ಮುಳುಗಿರುವ ಎಲ್ಲ ಪಕ್ಷಗಳಿಗೆ ಬುದ್ಧಿ ಕಲಿಸಲು ಚುನಾವಣೆಯನ್ನು ಬಳಸಿಕೊಳ್ಳುವಂತೆ ಮನವಿ ಮಾಡಿ, ವ್ಯವಸ್ಥೆಯ ಮೂಲಕ ಈ ಎಲ್ಲವನ್ನೂ ಬದಲಿಸುವಂತೆ ಕರೆ ನೀಡಿದರು. ಪಕ್ಷದ ಪ್ರಮುಖರಾದ ಅಪರ್ಣಾ ಬಿ.ಆರ್., ಡಾ. ಸುನೀತ ಕುಮಾರ್, ವೀರೇಶ್ ಎನ್.ಎಸ್., ಅಭ್ಯರ್ಥಿ ಕೆ. ಸೋಮಶೇಖರ್ ಯಾದಗಿರಿ ಸೇರಿ ಅನೇಕರಿದ್ದರು