ಇಂದು ನಂದಿ ಮೂರ್ತಿ ಪ್ರತಿಷ್ಠಾಪನೆ
ಮುದಗಲ್: ಪಟ್ಟಣದ ಐತಿಹಾಸಿಕ ಎರಡು ಸುತ್ತಿನ ಕೋಟೆಯ ಮಧ್ಯಭಾಗದಲ್ಲಿ ವಿಶಾಲವಾದ ಹಳೆಬೀಡು ಶೈಲಿಯ ಭವ್ಯ ಕಲ್ಲಿನ ಕಟ್ಟಡದ ಪುರಾತ ರಾಮಲಿಂಗೇಶ್ವರ ದೇವಸ್ಥಾನ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.
ಮುದಗಲ್ ಕೋಟೆ ಕಟ್ಟುವುದಕ್ಕಿಂತ ಪೂರ್ವದಲ್ಲಿಯೇ ಈ ಮಹತ್ವದ ದೇವಾಲಯ ನಿರ್ಮಿಸಲಾಗಿದೆ ಎಂದು ಶಿಲಾಶಾಸನಗಳಿಂದ ತಿಳಿದು ಬರುತ್ತದೆ.
ದೇವಾಲಯದ ಮುಂದಿನ ಭಾಗದಲ್ಲಿ ಭವ್ಯವಾದ ದ್ವಾರಬಾಗಿಲು, ವಿಶಾಲವಾದ ಬಯಲಿನಲ್ಲಿ ಮದ್ಯಭಾಗದಲ್ಲಿಯೇ ಕಲ್ಲಿನ ಕಟ್ಟೆಯ ಮೇಲೆ ತಲೆಯೆತ್ತಿ ನಿಂತಿದೆ.
ಕಲ್ಲಿನಿಂದ ಕಟ್ಟಿದ ಸುಂದರ ದೇಗುಲ: ಸಿಮೆಂಟ್, ಗಾರೆಯನ್ನು ಉಪಯೋಗಿಸದೆ ಕಲ್ಲಿನಿಂದಲೇ ಸುಂದರ ದೇವಾಲಯ ಕಟ್ಟಲಾಗಿದೆ.
ಸುತ್ತಲೂ ಸುಂದರವಾದ ಶಿಲ್ಪಕಲೆ, ಕಲಾಕೃತಿಗಳನ್ನು ಕೆತ್ತಿ ದೇವಾಲಯದ ಮೆರಗನ್ನು ಹೆಚ್ಚಿಸಲಾಗಿದೆ. ಆದರೆ ದೇವಾಲಯಕ್ಕೆ ಗೋಪುರವಿಲ್ಲದೆ ಹಳೆಬೀಡು ದೇವಾಲಯಗಳಂತೆ ಕಂಡು ಬರುತ್ತಿದೆ. ದೇವಾಲಯದ ಒಳಗಡೆ ನಾಲ್ಕು ಪ್ರಾಂಗಣಗಳಿವೆ. ಇವಗಳು ಕೂಡಾ ಅಪೂರ್ವ ಕುಸುರಿನೊಂದಿಗೆ ಆಕರ್ಷಿಸುವಂತೆ ಮಧ್ಯ ಗರ್ಭಗುಡಿಯ ಒಳಗೆ ಸುಂದರವಾದ ಕಪ್ಪು ಶಿಲೆಯ ಎತ್ತರವಾದ ಈಶ್ವರ ಲಿಂಗ ಇರುವುದು. ಇದು ರಾಮಮೇಶ್ವರ ಲಿಂಗದಂತೆ ಕಂಡು ಬರುತ್ತದೆ.
ಗರ್ಭಗುಡಿಯ ಮುಂದೆ ಇರುವ ಅಕ್ಕಪಕ್ಕದಲ್ಲಿ ಹನುಮಂತ ಮತ್ತು ಗಣಪತಿ ಚಿಕ್ಕ ಮಂದಿರಗಳು ಇವೆ.
ಹಿನ್ನೆಲೆ: ಒಮ್ಮೆ ಯುದ್ಧ ಕಾಲದಲ್ಲಿ ರಾಮಲಿಂಗೇಶ್ವರ ದೇವಾಲಯದ ಮೂರ್ತಿಗೆ ಬೆಂಕಿ ತಗುಲಿ ಭಿನ್ನವಾಗಿದ್ದರಿಂದ 1959ರಲ್ಲಿ ಪಟ್ಟಣದ ಭಕ್ತರು ಭವ್ಯವಾದ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದರು. ಮೈಸೂರ ವಿಭಾಗದ ಕೊಳ್ಳೇಗಾಲದ ಪಟ್ಟಾಧ್ಯಕ್ಷರಾದ ಬಸವರಾಜ ಸ್ವಾಮೀಜಿ ಅವರು ಈಶ್ವರ ಲಿಂಗವನ್ನು ಪುನರ್ ಪ್ರತಿಷ್ಠಾಪನೆ ಮಾಡಿದರು ಎಂದು ನಿಜಾಮ ಗೆಜೆಟ್‌ನಿಂದ ತಿಳಿದು ಬರುತ್ತದೆ.
ಇಂದು ನಂದಿ ಮೂರ್ತಿ ಪ್ರತಿಷ್ಠಾಪನೆ: ದೇವಸ್ಥಾನದ ಜಿರ್ಣೋದ್ಧಾರವನ್ನು ದೇವಸ್ಥಾನ ಕಮಿಟಿ ಮಾಡುತ್ತಿದೆ.
ಮನಮೋಹಕವಾಗಿ ರಾಮಲಿಂಗೇಶ್ವರನ ಎದುರಿನಲ್ಲಿ ನಂದಿಯ ಕಪ್ಪು ಶಿಲೆಯ ಸುಂದರವಾದ ಮೂರ್ತಿ ಭಗ್ನಗೊಂಡಿದೆ. ಅಲ್ಲದೆ ದೇವಸ್ಥಾನಕ್ಕೆ ಗೋಪುರವಿಲ್ಲದ ಕಾರಣ ದೇವಸ್ಥಾನಕ್ಕೆ ಭೇಟಿ ನೀಡಿದ ಅನೇಕ ಶರಣರು, ಸ್ವಾಮೀಜಿಗಳು ಅಲ್ಲದೆ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಗೋಪುರ ನಿರ್ಮಿಸಿ ಕಳಸಾರೋಹಣ ಮಾಡಬೇಕು.
ಭಗ್ನಗೊಂಡಿರುವ ನಂದಿ ಮೂರ್ತಿಯನ್ನು ಬದಲಿಸಿ ಹೊಸ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆಂದು ಭಕ್ತರಿಗೆ ಹೇಳಿದ್ದರಿಂದ ಮುದಗಲ್‌ನ ಭಕ್ತರು ದೇವಸ್ಥಾನಕ್ಕೆ ಹೊಸ ಗೋಪುರ, ನಂದಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಮಾ.19ರಂದು ಹಮ್ಮಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು, ಸಂತೆಕೆಲ್ಲೂರು ಗುರುಬಸವ ಸ್ವಾಮೀಜಿ ಸೇರಿದಂತೆ ಅನೇಕ ಹರಗುರು ಚರಮೂರ್ತಿಗಳು, ಸ್ವಾಮಿಗಳು ಆಗಮಿಸಲಿದ್ದಾರೆ.