ಉದ್ಯೋಗ ಖಾತ್ರಿ ಕೂಲಿ ಪಾವತಿಗೆ ಆಗ್ರಹ
ಲಿಂಗಸ್ಗೂರು: ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಗ್ರಾಮಗಳ ಕೂಲಿಕಾರರಿಗೆ ಕೂಲಿ ಪಾವತಿಗೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ವತಿಯಿಂದ ತಾಪಂ ಕಚೇರಿ ಆವರಣದಲ್ಲಿ ಮಂಗಳವಾರ ಅನಿರ್ದಿಷ್ಟ ಧರಣಿ ನಡೆಸಲಾಗುತ್ತಿದೆ.
ತಾಲೂಕಿನ ಮಟ್ಟೂರು, ಮಲ್ಲಪೂರ (ರೋಡಲಬಂಡಾ ತವಗ) ಗ್ರಾಮಗಳ ಕೂಲಿ ಕಾರ್ಮಿಕರಿಗೆ ಮಾರ್ಚ್ ಅಂತ್ಯದೊಳಗೆ ಕೂಲಿ ಪಾವತಿಸಬೇಕು. ಆದರೆ ಕಳೆದ 6 ತಿಂಗಳಿಂದ ಕೂಲಿ ಪಾವತಿಸದ ಕಾರಣ ಕೂಲಿ ಪಾವತಿ ಅಧಿನಿಯಮದ ಪ್ರಕಾರ ಕೂಲಿ ವಿಳಂಬದ ಭತ್ತೆ ನೀಡಬೇಕು. ಹೊನ್ನಳ್ಳಿ, ಕನ್ನಾಳ, ಗೌಡೂರು, ಕೋಠಾ, ಮಾವಿನಬಾವಿ, ಬಯ್ಯಾಪುರ, ಆಮದಿಹಾಳ, ಸಂತೆಕೆಲ್ಲೂರ, ಗೊರೇಬಾಳ ಗ್ರಾಪಂ.ಗಳ ವ್ಯಾಪ್ತಿಯ ಬರುವ 12 ಗ್ರಾಮಗಳ ಜನರು ಕೆಲಸ ಮಾಡಿ 9 ತಿಂಗಳ ಕಳೆದರೂ ಬ್ಯಾಂಕ್ ಖಾತೆ ತಪ್ಪಾಗಿದ್ದು, ಇದುವರೆಗೆ ಸರಿಪಡಿಸಿ ಕಾರ್ಮಿಕರಿಗೆ ಕೂಲಿ ಪಾವತಿಸಬೇಕೆಂದು ಒತ್ತಾಯಿಸಿದರು.
ಒಟ್ಟು ಮೊತ್ತ 47,76,304: ಅಲ್ಲದೆ ಹೊನ್ನಳ್ಳಿ, ಮಟ್ಟೂರು, ಬನ್ನಿಗೋಳ, ಮಾವಿನಬಾವಿ, ರೋಡಲಬಂಡಾ ತವಗಾ, ಗೌಡೂರು, ಬಯ್ಯಾಪುರ, ಕಾಚಾಪುರ, ಮೆದಿಕಿನಾಳ, ಕನ್ನಾಳ, ಅಂಕುಶದೊಡ್ಡಿ, ಈಚನಾಳ, ಕೋಠಾ, ಮಸ್ಕಿ, ನಾಗರಹಾಳ, ಹೂನೂರು, ಗೊರೇಬಾಳ, ಸಂತೆಕೆಲ್ಲೂರ ಗ್ರಾಪಂ.ಗಳ ವ್ಯಾಪ್ತಿಯಲ್ಲಿ ಬರುವ 32 ಗ್ರಾಮಗಳಲ್ಲಿನ ಕೂಲಿ ಕಾರ್ಮಿಕರು 27402 ಮಾನವ ದಿನಗಳ ಕೆಲಸ ಮಾಡಿದ್ದು, ರು. 47,76,304 ಕೂಲಿ ಮೊತ್ತ ತಕ್ಷಣ ಪಾವತಿಸಬೇಕೆಂದು ಆಗ್ರಹಿಸಿದರು.
ಇಒ ಸ್ಪಷ್ಟನೆ: ಧರಣಿ ಸ್ಥಳಕ್ಕೆ ಭೇಟಿ ನೀಡಿದ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಶರಣಬಸಪ್ಪ ಧರಣಿ ನಿರತರಿಗೆ, ಮಟ್ಟೂರು ಗ್ರಾಪಂನಲ್ಲಿ 2013-14ನೇ ಸಾಲಿನಲ್ಲಿ ಕೂಲಿ ಕಾರ್ಮಿಕರು ನಿರ್ವಹಿಸಿದ ಎಲ್ಲ ಕಾಮಗಾರಿ ಜ.28 ರಂದು ಭೌತಿಕವಾಗಿ ಪರಿಶೀಲಿಸಿದಾಗ ಎಲ್ಲ ಕಾಮಗಾರಿಗಳು ಹೆಚ್ಚುವರಿ ಕ್ರಿಯಾ ಯೋಜನೆಯಲ್ಲಿದ್ದು, ಗ್ರಾಮಸಭೆ, ಗ್ರಾಪಂ ಸಾಮಾನ್ಯ ಸಭೆ ಅಥವಾ ಕಾಮಗಾರಿ ಗುಚ್ಚದಲ್ಲಾಗಲಿ ಇರುವುದಿಲ್ಲ. ಕಾಮಗಾರಿಗಳ ಗುಣಮಟ್ಟ ಅಂದಾಜು ಮೊತ್ತಕ್ಕೆ ತಕ್ಕಂತೆ ಕೆಲಸ, ರಸ್ತೆಗಳಿಗೆ ಮೆಟಲಿಂಗ್ ಹಾಕಿರದೆ ಹಾಗೂ ಬಹುತೇಕ ಕಾಮಗಾರಿಗಳಿಗೆ ಎಂ.ಬಿ. ರೆಕಾರ್ಡ್ ಮತ್ತು ಬಿಲ್ ಮಾಡಿರುವುದಿಲ್ಲ. ಈ ಕುರಿತು ತಾಂತ್ರಿಕವಾಗಿ ಕಾಮಗಾರಿ ಗುಣಮಟ್ಟದ ಬಗ್ಗೆ ಬೇರೆ ನುರಿತ ಅಧಿಕಾರಿಗಳನ್ನು ನಿಯೋಜಿಸಲು ಹಾಗೂ ಕ್ರಿಯಾ ಯೋಜನೆಗಳ ಬಗ್ಗೆ ಮತ್ತು ಈಗ ನಿರ್ಮಿಸಿದ ಕಾಮಗಾರಿಗೆ ಪಾವತಿ ಮಾಡುವ ಕೂಲಿ, ಸಾಮಗ್ರಿ ಮೊತ್ತಕ್ಕೆ ಮಾರ್ಗದರ್ಶನ ನೀಡುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕೋರಲಾಗಿತ್ತು.
ನಿಯಮಾನುಸಾರ ಕ್ರಮಕ್ಕೆ ಸೂಚನೆ: ಅದರಂತೆ ಮೇಲಾಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದು, ಈಗಾಗಲೇ ನಿರ್ವಹಿಸಿದ ಕಾಮಗಾರಿಗಳನ್ನು ಗ್ರಾಮಸಭೆ ಮುಂದೆ ಮಂಡಿಸಿ ಗ್ರಾಮಸಭೆಯ ಅನುಮೋದನೆ ಪಡೆಯಬೇಕು. ಕಾಮಗಾರಿ ಹಣ ಪಾವತಿಗೆ ಪೂರ್ವದಲ್ಲಿ ಎನ್ಎಂಆರ್ನಲ್ಲಿ ಇರುವ ಕೂಲಿಕಾರರು ನೈಜ ಕೂಲಿಕಾರರೆಂಬ ಬಗ್ಗೆ ವಿಶೇಷ ಸೋಶಿಯಲ್ ಅಡಿಟ್ ಮಾಡಿ ಕೂಲಿಕಾರರನ್ನು ಖಚಿತ ಪಡಿಸಿಕೊಳ್ಳಬೇಕು. ಸದರಿ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಕಾರಣ ಮೇಲಾಧಿಕಾರಿಗಳ ಸೂಚನೆ ಪಾಲನೆ ಮಾಡುವುದು ಅಗತ್ಯವಾಗಿದ್ದು, ಪ್ರಸ್ತುತ ಚುನಾವಣೆ ಮುಗಿದ ನಂತರ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು. ಇದಕ್ಕೆ ಒಪ್ಪದ ಕೂಲಿಕಾರರ ಸಂಘಟನೆ ಮುಖಂಡರು ಧರಣಿ ಮುಂದುವರಿಸಿದರು. ಈ ವೇಳೆ ಸಂಘಟನೆ ಮುಖಂಡರಾದ ಗುಂಡಪ್ಪ ಯರಡೋಣ, ತಾರಕೇಶ್ವರಿ, ಶರಣೇಗೌಡ, ಆನಂದ ಮಾವಿನಬಾವಿ, ಕೂಡ್ಲೆಪ್ಪ ಕಳ್ಳಿಲಿಂಗಸ್ಗೂರು, ದೇವಪ್ಪ ಸಂತೆಕೆಲ್ಲೂರ, ನರಸಪ್ಪ, ರುದ್ರಪ್ಪ ಹೊನ್ನಳ್ಳಿ, ದೇವೇಂದ್ರಪ್ಪ, ದುರುಗಮ್ಮ ಕೋಠಾ, ಅಕ್ಕಮ್ಮ, ಲಕ್ಷ್ಮಮ್ಮ ಸಂತೆಕೆಲ್ಲೂರು ಇತರರು ಇದ್ದರು.