ಕಲುಷಿತ ನೀರು; ಮೀನುಗಳ ಮಾರಣಹೋಮ
ಸಿಂಧನೂರು: ತಾಲೂಕಿನ ಸೋಮಲಾಪುರ ಗ್ರಾಮದ ಮೀನು ಸಾಕಾಣಿಕೆದಾರ ಹುಸೇನಪ್ಪ ತೊಗೆಮನಿ ಅವರ ಕೆರೆಯಲ್ಲಿ ಕಲುಷಿತ ನೀರಿನಿಂದಾಗಿ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದೆ.
ಕಳೆದೆರಡು ವರ್ಷಗಳಿಂದ ಮೀನು ಸಾಕಾಣಿಕೆಯಲ್ಲಿ ತೊಡಗಿರುವ ಹುಸೇನಪ್ಪ ಅವರು ಎಂದಿನಂತೆ ಕೆರೆಗೆ ಆಗಮಿಸಿದಾಗ ಮೀನುಗಳು ಮೃತಪಟ್ಟು ನೀರಿನ ಮೇಲೆ ತೇಲಿರುವುದು ಕಂಡುಬಂದಿದೆ. ಕಲುಷಿತ ನೀರಿನಿಂದಾಗಿ 2,50,000ಕ್ಕೂ ಅಧಿಕ ಮೌಲ್ಯದ ಮೀನುಗಳು ಸಾವನ್ನಪ್ಪಿರುವ ಬಗ್ಗೆ ತಿಳಿದು ಬಂದಿದೆ.
ಪರೀಕ್ಷೆಗೆ ನೀರು ಸಂಗ್ರಹ: ಮೀನುಗಳು ಸತ್ತಿರುವುದರಿಂದ ಕೆರೆಯ ಸುತ್ತಮುತ್ತ ದುರ್ವಾಸನೆ ಹರಡಿದೆ. ದಡೇಸ್ಗೂರಿನಲ್ಲಿರುವ ಮೀನುಗಾರಿಕೆ ಇಲಾಖೆಯ ಸಿಬ್ಬಂದಿ ಕೆರೆಗೆ ಭೇಟಿ ನೀಡಿ ನೀರನ್ನು ಸಂಗ್ರಹಿಸಿಕೊಂಡು ಹೋಗಿದ್ದು, ಪರೀಕ್ಷಿಸಿದ ನಂತರ ಕಾರಣ ತಿಳಿಸುವುದಾಗಿ ಹೇಳಿದ್ದಾರೆ.
ಗೊರೇಬಾಳ ಹಳ್ಳ ಹಾಗೂ ಗದ್ದೆಗೆ ಹರಿಯುವ ಮೋಟುಗಾಲುವೆಯಿಂದ ಎಂದಿನಂತೆ ಕೆರೆಗೆ ನೀರು ಹರಿಸಲಾಗಿದೆ. ಆದರೆ ಏಕಾಏಕಿ ಇಷ್ಟು ದಿನಬಿಟ್ಟು ಈಗ ಮೀನುಗಳು ಮೃತಪಟ್ಟಿವೆ ಎಂದು ಹುಸೇನಪ್ಪ ತೊಗೆಮನಿ ಅವರು ಆಶ್ಚರ್ಯ ವ್ಯಕ್ತಪಡಿಸಿದರು.
ಪರಿಹಾರಕ್ಕೆ ಆಗ್ರಹ: ಲಕ್ಷಾಂತರ ರುಪಾಯಿ ಮೌಲ್ಯದ ಮೀನುಗಳ ಸತ್ತಿರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಹನುಮಂತಪ್ಪ ತೊಗೆಮನಿ ಅವರಿಗೆ ಸರ್ಕಾರದಿಂದ ನಷ್ಟ ಪರಿಹಾರ ಒದಗಿಸುವಂತೆ ರೈತ ಸಂಘಗಳು ಒತ್ತಾಯಿಸಿವೆ.