ಪ್ರಮುಖ ಪಕ್ಷಗಳ ಹಣಿಯಲು ಸಜ್ಜಾಗಿ: ಸಿಪಿಎಂ
ರಾಯಚೂರು: ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ದೇಶದಲ್ಲಿ ಬಂಡವಾಳ ಶಾಹಿಗಳ ಪರ ನಿಲುವು ಪ್ರದರ್ಶಿಸಿದ್ದರಿಂದ ದೇಶದಲ್ಲಿ ನಿರುದ್ಯೋಗ, ಭ್ರಷ್ಟಾಚಾರ ಹೆಚ್ಚಿದೆ. ಇಂಥ ರಾಜಕೀಯ ಪಕ್ಷಗಳನ್ನು ಸೋಲಿಸಲು ಸಿಪಿಐಎಂಎಲ್ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 8 ಕಡೆ ಸ್ಪರ್ಧಿಸಲಿದೆ.
ನಗರದಲ್ಲಿ ಮಂಗಳವಾರ ಸಿಪಿಐಎಂಎಲ್ ಪಕ್ಷದಿಂದ ಕರೆದಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಾಲಿಟ್ ಬ್ಯೂರೋ ಸದಸ್ಯ ಆರ್. ಮಾನಸಯ್ಯ ಹಾಗೂ ಕಾರ್ಯದರ್ಶಿ ರುದ್ರಯ್ಯ, ರಾಜ್ಯದ ಮೈಸೂರು, ಚಾಮರಾಜನಗರ, ಶಿವಮೊಗ್ಗ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರು, ಬಳ್ಳಾರಿ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಪಕ್ಷ ಕಣಕ್ಕಿಳಿಸಲಿದೆ ಎಂದರು.
ಸಮಾನ ಮನಸ್ಕರಿಗೆ ಬೆಂಬಲ: ರಾಜ್ಯದ ಇನ್ನಿತರೆಡೆ ಸಿಪಿಐಎಂಎಲ್ ಪಕ್ಷವು ಸಮಾನ ಮನಸ್ಕರಿಗೆ ಬೆಂಬಲಿಸಲಿವೆ. ಜಾಗತೀಕರಣ ವಿರೋಧಿಗಳು, ಕೋಮುವಾದದ ವಿರೋಧಿಗಳು, ಎಲ್ಲ ಪ್ರಕಾರದ ಭ್ರಷ್ಟಾಚಾರದ ವಿರೋಧಿಗಳಾಗಿರುವಂಥ ಅಭ್ಯರ್ಥಿಗಳಿಗೆ ಪಕ್ಷವು ಬೆಂಬಲಿಸಲಿದೆ ಎಂದು ಹೇಳಿದರು.
ಸ್ಪರ್ಧೆಗೆ ಅವಕಾಶ ದೊರೆತಿಲ್ಲ: ರಾಯಚೂರು ಲೋಕಸಭೆ ಕ್ಷೇತ್ರವು ಎಸ್ಟಿಗೆ ಮೀಸಲಾಗಿದ್ದರೂ ಇದುವರೆಗೆ ಎಸ್ಟಿ ಜನಾಂಗದ ಬಡವರು ಸ್ಪರ್ಧೆಗೆ ಅವಕಾಶ ದೊರೆತಿಲ್ಲ. ಕೇವಲ ನಾಯಕರು, ರಾಯ- ರಾಜ ಮನೆತನದವರೇ ಕ್ಷೇತ್ರವನ್ನು ಆಳಿದ್ದಾರೆ. ಸರ್ಕಾರದ ಕೋಟ್ಯಂತರ ರು. ಅನುದಾನ ಕೊಳ್ಳೆ ಹೊಡೆಯಲಾಗಿದೆ ಎಂದ ಅವರು, ಕಳೆದ ಕೆಲ ಚುನಾವಣೆಗಳಲ್ಲಿ ಸ್ಪರ್ಧಿಸಿದಂಥವರೇ ಮತ್ತೆ ಲೋಕಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸಲಿದ್ದಾರೆ. ಅವರು ತಮ್ಮ ಆಸ್ತಿ ಬಗ್ಗೆ ಸಲ್ಲಿಸುವ ಪ್ರಮಾಣಪತ್ರಗಳನ್ನು ಪಡೆದುಕೊಂಡು ಮತದಾರರಿಗೆ ಆಸ್ತಿ ಅಕ್ರಮ ಗಳಿಕೆಯ ಬಗ್ಗೆ ಜಾಗೃತಿ ಮೂಡಿಸಿ ಸಿಪಿಐಎಂಎಲ್ಗೆ ಮತ ನೀಡಲು ಮನವಿ ಮಾಡುವುದಾಗಿ ತಿಳಿಸಿದರು.
ಬೆಂಬಲಿಸುವಂತೆ ಮನವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಹೋರಾಟ ಮಾಡಿದ ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಸಿಪಿಐಎಂಎಲ್ ಪಕ್ಷಕ್ಕೆ ಸಂಬಂಧಿಸಿ ತಮ್ಮ ನಿಲುವು ಪ್ರಕಟಿಸಿ ಬೆಂಬಲಿಸುವಂತೆ ಮನವಿ ಮಾಡಿದರು.
ಯುಪಿಎ, ಎನ್ಡಿಎ ಹಾಗೂ ತೃತೀಯ ರಂಗಗಳನ್ನು ಮೂಲೆಗುಂಪು ಮಾಡಬೇಕು. ದೇಶದಲ್ಲಿ ಬಡವರು, ರೈತರು, ಕೃಷಿ ಕಾರ್ಮಿಕರ ಪರವಾದ ಸರ್ಕಾರದ ರಚನೆಗೆ ಮತದಾರರು ಪ್ರಾಮುಖ್ಯತೆ ನೀಡುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಸಿಪಿಐಎಂಎಲ್ ಪಕ್ಷದ ಅಭ್ಯರ್ಥಿ ಎಂ. ನಾಗರಾಜ್, ಎಸ್. ರಾಜಶೇಖರ್, ಚಿನ್ನಪ್ಪ ಕೊಟ್ರಿಕಿ, ಶೇಖರಯ್ಯ, ಮುದುಕಪ್ಪ ನಾಯಕ ಮತ್ತಿತರರಿದ್ದರು.