ಕೇಂದ್ರ-ರಾಜ್ಯ ಸರ್ಕಾರಗಳ ಸಾಧನೆ ಗೆಲವಿಗೆ ಶ್ರೀರಕ್ಷೆ: ಬಿ.ವಿ.ನಾಯಕ
ಲಿಂಗಸ್ಗೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಅಭಿವೃದ್ಧಿ ಯೋಜನೆಗಳೇ ನನ್ನ ಗೆಲವಿಗೆ ಶ್ರೀರಕ್ಷೆಯಾಗಲಿದೆ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಬಿ.ವಿ. ನಾಯಕ ಹೇಳಿದರು. ಪಟ್ಟಣದ ಪಕ್ಷದ ಹಿರಿಯ ಮುಖಂಡ ಲಾಲ್‌ಅಹ್ಮದ್ ಸಾಬ್ ಅವರ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಹೈಕಮಾಂಡ್ ನನ್ನನ್ನು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದು ಸಂತಸ ತಂದಿದೆ. ಕೇಂದ್ರ ಸರ್ಕಾರದ ದಶಕದ ಆಡಳಿತಾವಧಿಯಲ್ಲಿ ಕೈಗೊಂಡ ಸಂವಿಧಾನ ಬದ್ಧ ಹಕ್ಕುಗಳು ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ 371(ಜೆ) ಕಲಂ ತಿದ್ದುಪಡಿ ಜಾರಿ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಬಡ, ದೀನ, ದಲಿತರ ಏಳಿಗೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ನೀರಾವರಿ ಯೋಜನೆಗೆ ಒತ್ತು ನೀಡಿದೆ. ಇಂತಹ ಹಲವು ಕಾರ್ಯಕ್ರಮಗಳು ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ವರವಾಗಲಿವೆ ಎಂದರು. ಈ ವೇಳೆ ಮುಖಂಡರಾದ ಲಾಲ್‌ಅಹ್ಮದ್ ಸಾಬ್, ಖಾದರಪಾಶಾ, ಡಿ.ಎಸ್. ಹೂಲಗೇರಿ, ಮಲ್ಲಣ್ಣ ವಾರದ ಇದ್ದರು.