ಧಾರ್ಮಿಕ ಕಾರ್ಯಕ್ರಮಕ್ಕೂ ನೀತಿಸಂಹಿತೆ ಬಿಸಿ: ಆಕ್ರೋಶ
ಮುದಗಲ್: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ ಎನ್ನುವ ನೆಪದಲ್ಲಿ ರಾಜಕಾರಣಿಗಳು, ಚುನಾಯಿತ ಜನಪ್ರತಿನಿಧಿಗಳನ್ನು ಧಾರ್ಮಿಕ ಕಾರ್ಯಕ್ರಮಗಳಿಂದ ದೂರ ಮಾಡುವ ಮೂಲಕ ಅಸ್ಪ ೃಶ್ಯರಂತೆ ಅಧಿಕಾರಿಗಳು ನೋಡುತ್ತಿದ್ದಾರೆ ಎಂದು ಮಾಜಿ ಸಚಿವ ಅಮರೆಗೌಡ ಪಾಟೀಲ್ ಬಯ್ಯಾಪುರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾತನಾಡಿ, ಚುನಾವಣೆಗೂ ಧಾರ್ಮಿಕ ಕಾರ್ಯಕ್ರಮಗಳಿಗೂ ಏನು ಸಂಬಂಧ. ಜನಪ್ರತಿನಿಧಿಗಳಿಗೆ ಮಠ, ಮಂದಿರಗಳು, ಜಾತ್ರೆಗಳು ನಡೆದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಕರಪತ್ರಗಳಲ್ಲಿ ಹೆಸರುಗಳನ್ನು ಹಾಕದಂತೆ ಆಯೋಜಕರಿಗೆ ಅಧಿಕಾರಿಗಳು ಸೂಚನೆ ನೀಡುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಅವಮಾನ: ಇತ್ತೀಚಿಗೆ ನಡೆದ ಅಮರೇಶ್ವರ ಜಾತ್ರೆಯಲ್ಲಿಯೂ ಚುನಾಯಿತ ಜನಪ್ರತಿನಿಧಿಗಳಿಗೆ ವೇದಿಕೆ ಮೇಲೆ ಅವಕಾಶ ನೀಡದೇ ಸಹಾಯಕ ಆಯುಕ್ತರು ದೇವಸ್ಥಾನ ಕಮಿಟಿ ಅಧ್ಯಕ್ಷರು ಅವಮಾನ ಮಾಡಿದ್ದಾರೆ. ಜನಪ್ರತಿನಿಧಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಯಾವ ಕಾನೂನಲ್ಲಿದೆ ಎಂದು ಪ್ರಶ್ನಿಸಿದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ ಯಾಚನೆ ಮಾಡಬಾರದು ಎನ್ನುವ ನಿಯಮ ಇದೆ. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಇಲ್ಲ. ಆದರೆ ಅಧಿಕಾರಿಗಳು ಎಲ್ಲದಕ್ಕೂ ನೀತಿಸಂಹಿತೆ ನೆಪದಲ್ಲಿ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಬಯ್ಯಾಪೂರರ ಮಾತಿಗೆ ಶಾಸಕ ಪ್ರತಾಪಗೌಡ ಪಾಟೀಲ್ ಬೆಂಬಲಿಸಿದರು.