ನಾಳೆಯಿಂದ ವಿವಿಧ ಮೂರ್ತಿಗಳ ಪ್ರತಿಷ್ಠಾಪನೆ
ರಾಯಚೂರು: ನಗರದ ಗಾಜಗಾರಪೇಟೆಯ ಶಂಕರ ಮಠದಲ್ಲಿ ಮಾ. 21ರಿಂದ ಮಾ. 23ರವರೆಗೆ ಮೂರ್ತಿಗಳ ಪುನಾ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಶ್ರೀಶೃಂಗೇರಿ ಶಾರದಾಪೀಠದ ಶ್ರೀಜಗದ್ಗುರು ಶಂಕರಾಚಾರ್ಯ ಭಾರತೀ ತೀರ್ಥ ಮಹಾಸ್ವಾಮೀಜಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾ.21ರಂದು ನಗರಕ್ಕೆ ಆಗಮಿಸಲಿದ್ದಾರೆಂದು ನಗರದ ಶಂಕರ ಮಠದ ಶಾಖೆಯ ಅಧ್ಯಕ್ಷ ಸುಬ್ರಹ್ಮಣ್ಯ ತಿಳಿಸಿದರು.
ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಗಾಜಗಾರಪೇಟೆಯಲ್ಲಿ ಸ್ಥಾಪಿಸಿರುವ ಶಂಕರ ಮಠದಲ್ಲಿ ಮಾ. 21ರಿಂದ 23ರವರೆಗೆ ಶ್ರೀಆನಂದೇಶ್ವರ ಸ್ವಾಮಿಯ ಮೂರ್ತಿ ಪುನಾ ಪ್ರತಿಷ್ಠಾಪನೆ ಹಾಗೂ ಶ್ರೀಶಾರದಾಂಬಾ ಮತ್ತು ಶ್ರೀಶಂಕರಾಚಾರ್ಯರ ನೂತನ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ವಿವಿಧ ಹೋಮಗಳು: ಮಾ. 21ರಂದು ಬೆಳಗ್ಗೆ 9ಕ್ಕೆ ಗುರುಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಹ ವಾಚನ, ಮಹಾಸಂಕಲ್ಪ ಜಲಾಧಿವಾಸ ನಡೆಯಲಿದೆ. ನಂತರ ಅದೇ ದಿನ ಸಂಜೆ 5.30ಕ್ಕೆ ಕಲಶಸ್ಥಾಪನೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ಶಯ್ಯಾಧಿವಾಸ ನೆರವೇರಲಿದೆ ಎಂದು ತಿಳಿಸಿದರು.ಮಾ. 21ರಂದು ಸಂಜೆ 6ಕ್ಕೆ ಶೃಂಗೇರಿ ಶಾರದಾ ಪೀಠದ ಶಂಕರಾಚಾರ್ಯ ಭಾರತೀ ತೀರ್ಥ ಮಹಾಸ್ವಾಮಿ ನಗರಕ್ಕೆ ಆಗಮಿಸಲಿದ್ದು, ಅವರನ್ನು ಗಂಜ್ ವೃತ್ತದಿಂದ ಬರ ಮಾಡಿಕೊಳ್ಳಲಾಗುತ್ತದೆ. ನಂತರ ನಗರದ ಎಲ್ ವಿಡಿ ಕಾಲೇಜಿನ ಬಳಿಯಿರುವ ಯಾದವ ಸಂಘದ ಮೈದಾನದಿಂದ ಶೋಭಾಯಾತ್ರೆ ಗಾಜಗಾರಪೇಟೆಯ ಆನಂದೇಶ್ವರ ದೇವಸ್ಥಾನ ದವರೆಗೆ ನಡೆಯಲಿದೆ ಎಂದು ತಿಳಿಸಿದರು.
ಧಾರ್ಮಿಕ ಸಭೆ: ಮಾ.21ರಂದು ರಾತ್ರಿ 8ಕ್ಕೆ ಶ್ರೀಗಳಿಂದ ಶ್ರೀಶಾರದಾ ಚಂದ್ರಮೌಳೇಶ್ವರರ ಪೂಜೆ ನಡೆಯಲಿದೆ. ಮಾ.22ರಂದು ಬೆಳಗ್ಗೆ 8.30ಕ್ಕೆ ನವಗ್ರಹ ಹೋಮ, ಅಧಿವಾಸ ಹೋಮ, ದೇವತಾಮಂತ್ರ ಹೋಮ ನಡೆಯಲಿದ್ದು, ಬೆಳಗ್ಗೆ 9ಕ್ಕೆ ಶ್ರೀಗಳ ಪಾದಪೂಜೆ, ವಸ್ತ್ರಸಮರ್ಪಣೆ, ಮಾ.23ರಂದು 10ಕ್ಕೆ ಶ್ರೀಗಳು ಆನಂದೇಶ್ವರ ಸ್ವಾಮಿ ಮೂರ್ತಿ ಪುನಾ ಪ್ರತಿಷ್ಠಾಪನೆ, ಶ್ರೀಶಾರದಾಂಬಾ ಮತ್ತು ಶ್ರೀ ಶಂಕರಾಚಾರ್ಯರ ನೂತನ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯ ನಡೆಸಿಕೊಡಲಿದ್ದಾರೆಂದು ತಿಳಿಸಿದರು. ಈಗಾಗಲೇ ಶೃಂಗೇರಿ ಶ್ರೀಶಾರದಾ ಪೀಠದ ಶಾಖಾ ಮಠವನ್ನು ನಗಢಿರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಂತರ ರು. ವೆಚ್ಚ ಮಾಡಲಾಗುತ್ತಿದೆ.