ಶರಣರ ಚಿಂತನೆಗಳನ್ನು ಅಳವಡಿಸಿಕೊಳ್ಳಿ: ನಾಗಪ್ಪ
ಸಿಂಧನೂರು: ವಿದ್ಯಾರ್ಥಿ ಜೀವನದಲ್ಲಿ ಶರಣರ ಚಿಂತನೆಗಳನ್ನು ಅಳವಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಗೌಡನಭಾವಿ ಮಠದ ನಾಗಪ್ಪ ತಾತನವರು ಸಲಹೆ ನೀಡಿದರು. ತಾಲೂಕಿನ ಬಳಗಾನೂರು ಗ್ರಾಮದ ಶ್ರೀದೇವಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಲ್ಲಿ ಸೃಜನಶೀಲತೆ ಬೆಳವಣಿಗೆಗೆ ಪೂರಕವಾಗಿವೆ. ಶಾಲೆ ಶಿಕ್ಷಕರು ಹಾಗೂ ಸಂಸ್ಥೆಯವರು ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಹೊಸ ವಾತಾವರಣಕ್ಕೆ ಅಡಿಪಾಯ ಹಾಕಬೇಕು. ಈ ಶಾಲೆಯ ಹಲವಾರು ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ತಂದೆ-ತಾಯಿಗಳ, ಶಿಕ್ಷಕರ ಕನಸನ್ನು ಸಾಕಾರಗೊಳಿಸಲು ವಿದ್ಯಾರ್ಥಿಗಳು ಹಗಲಿರುಳು ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ತಮ್ಮದಾಗಿಸಿಕೊಳ್ಳಬೇಕು ಎಂದರು. ಸಾಹಿತಿ ಸಿ.ದಾನಪ್ಪ, ಶಾರದ ಮಹಿಳಾ ಕಾಲೇಜು ಪ್ರಾಚಾರ್ಯ ಬಸವರಾಜ ಬಾದರ್ಲಿ, ಸಂಸ್ಥೆ ಅಧ್ಯಕ್ಷ ಬಸವರಾಜ ಗೌಡನಬಾವಿ ಇನ್ನಿತರರು ಉಪಸ್ಥಿತರಿದ್ದರು.