ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಂಗನವಾಡಿ ಕೇಂದ್ರದಲ್ಲಿ ಕಣಕಿ!

Rashmi Kasaragodu
Updated On : 21 Mar 2014, 12:51 pm

ಕ.ಪ್ರ. ವಾರ್ತೆ   ಚಿತ್ತಾಪುರ   ಮಾ.20
ಅತೀ ಹಿಂದುಳಿದ ತಾಂಡಾಗಳಲ್ಲೊಂದಾದ ತಾಲೂಕಿನ ಹಣ್ಣಿಕೇರಾದ ರಾಮಾನಾಯಕ ತಾಂಡಾ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿದೆ ಎಂದು ಗ್ರಾಮದ ಸ್ತ್ರೀಶಕ್ತಿ ಸ್ವ ಸಹಾಯ ಸಂಘದವರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಂಡಾದಲ್ಲಿ ಅಂಗನವಾಡಿ ಕೇಂದ್ರವಿದ್ದು, ಇದು ಇಲಾಖೆಯ ಲೆಕ್ಕದಲ್ಲಿ ಮಾತ್ರ ಕೆಲಸ ಮಾಡುತ್ತಿದೆ. ಇದರಿಂದ ಗ್ರಾಮಸ್ಥರಿಗೆ ಹಾಗೂ ಮಕ್ಕಳಿಗೆ ಕಿಂಚಿತ್ತೂ ಪ್ರಯೋಜನವಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮದ ಮಕ್ಕಳ, ಗರ್ಭಿಣಿಯರ, ಜನಗಣತಿ, ಮತದಾರ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತಹ ಮಹತ್ವದ ಕೆಲಸ ಕಾರ್ಯಕರ್ತೆಯರ ಮೇಲಿರುತ್ತದೆ.
ಆದರೆ ಗರ್ಭಿಣಿಯರಿಗೆ ನೀಡುವ ಪೌಷ್ಟಿಕ ಆಹಾರ, ಹೆರಿಗೆಯಾದ ನಂತರ ಜನನದ ಬಗ್ಗೆ ದೃಢೀಕರಣ ಮತ್ತು ಮಕ್ಕಳ ಪೌಷ್ಟಿಕ ಆಹಾರ ಯಾವುದೂ ವಿತರಣೆ ಮಾಡುತ್ತಿಲ್ಲ. ಕೇಳಿದರೆ 'ನಾನು ಮಾಡುವುದೇ ಹೀಗೆ, ನೀವು ಯಾರಿಗಾದರೂ ಹೇಳಿಕೊಳ್ಳಿ' ಎಂದು ಕಾರ್ಯಕರ್ತರು ಹೆದರಿಸುತ್ತಾರೆ ಎಂದು ನಾಗರಿಕರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಕಾರ್ಯಕರ್ತೆಯ ಬೇಜವಾಬ್ದಾರಿ ಹೇಳಿಕೆ: ಮಕ್ಕಳ ಪೌಷ್ಟಿಕ ಅಹಾರ, ಹಾಲು, ಮೊಟ್ಟೆ ಸೇರಿದಂತೆ ಸರ್ಕಾರ ಮಕ್ಕಳಿಗೆ ನೀಡುವ ಯಾವುದೇ ಪದಾರ್ಥ ಮಕ್ಕಳಿಗೆ ತಲುಪುವದಿಲ್ಲ. ಈಗ ಲೋಕಸಭೆ ಚುನಾವಣೆ ನಡೆಯಲಿದ್ದು, ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಬಿಎಲ್‌ಒಗಳ ಸಹಿ ಅಗತ್ಯ. ಇಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಇದರ ಬಗ್ಗೆ ಗೊತ್ತೇ ಇಲ್ಲ. ಕೇಳಿದರೆ ಅದರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನೀವೇ ತಹಸೀಲ್ದಾರ್ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಿ ಎಂದು ಬೇಜವಬ್ದಾರಿ ಉತ್ತರ ನೀಡುತ್ತಾರೆ ಎನ್ನಲಾಗಿದೆ.
ಇಲಾಖೆಯ ನಿರ್ಲಕ್ಷ್ಯ: ತಾಂಡಾದ ಖಾಸಗಿಯವರ ಜಾಗದಲ್ಲಿ ಸರ್ಕಾರ ತನ್ನ ಸುಪರ್ದಿಗೆ ಪಡೆಯದೆ ಅಂಗನವಾಡಿ ಕೇಂದ್ರವನ್ನು ನಿರ್ಮಿಸಿದ್ದು, ಈಗ ಆ ಜಾಗದ ಮಾಲೀಕ ಇದು ನನ್ನ ಜಾಗ ಇಲ್ಲಿ ಕೇಂದ್ರ ನಡೆಯಲು ಬಿಡುವುದಿಲ್ಲ ಎಂದು ಹೇಳಿ ಅಂಗನವಾಡಿ ಕೇಂದ್ರದಲ್ಲಿ ಕಣಕಿ, ಹೊಟ್ಟು ಹಾಕಿ ತಮ್ಮ ಅಧೀನದಲ್ಲಿ ಇಟ್ಟುಕೊಂಡಿದ್ದಾನೆ. ಈಗ ಕೇಂದ್ರ ಬಾಡಿಗೆ ಮನೆಯಲ್ಲಿ ನಡೆಯುತ್ತಿದೆ.
ಈ ಬಗ್ಗೆ ಇಲಾಖೆ ವಲಯ ಅಧೀಕ್ಷಕಿಯನ್ನು ದೂರವಾಣಿ ಮೂಲಕ ಕೇಳಲಾಗಿ, ನಮ್ಮ ಕೇಂದ್ರದಲ್ಲಿ ಕಣಕಿ, ಹೊಟ್ಟು ಹಾಕಿರುವುದು ಕಂಡು ಬಂದಿದೆ. ಅದು ಅವರ ಜಾಗದಲ್ಲಿ ಕಟ್ಟಿರುವುದು ತಿಳಿದು ಬಂದಿದೆ. ಅದಕ್ಕಾಗಿ ಮತ್ತೊಂದು ಕಡೆ ಹೊಸದಾಗಿ ಕಟ್ಟಡ ನಿರ್ಮಿಸಲು ಸ್ಥಳ ನೋಡಿದ್ದೇವೆ. ಅಲ್ಲಿ ಹೊಸ ಕಟ್ಟಡ ಕಟ್ಟಲಾಗುತ್ತದೆ ಎಂದು ಹೇಳುತ್ತಾರೆ.
ಹೋರಾಟದ ಎಚ್ಚರಿಕೆ: ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಗರ್ಭಿಣಿಯರಿಗೆ, ಮಕ್ಕಳಿಗೆ ಹಾಗೂ ಜನರಿಗೆ ಇಲಾಖೆಯ ವತಿಯಿಂದ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಕಟ್ಟಡದಲ್ಲಿ ಕಣಕಿ, ಹೊಟ್ಟು ತುಂಬಿರುವ ಕಟ್ಟಡವನ್ನು ತಮ್ಮ ಸುಪರ್ದಿಗೆ ಪಡೆದು ಅಲ್ಲಿ ಅಂಗನವಾಡಿ ಕೇಂದ್ರ ನಡೆಸಬೇಕು. ಹಾಗೂ ಅಂಗನವಾಡಿ ಶಿಕ್ಷಕಿಯರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿಳಂಬ ನೀತಿ ಅನುಸರಿಸಿದಲ್ಲಿ ಉಗ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಲಾಗುವದು ಎಂದು ಗ್ರಾಮಸ್ಥರು ಹಾಗೂ ಸ್ತ್ರೀ ಶಕ್ತಿ ಮಹಿಳಾ ಸ್ವ ಸಹಾಯ ಸಂಘದವರು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement