ಕಂದಗಲ್, ಮೇಟಿ, ರಸೂಲ್ ಕಾಂಗ್ರೆಸ್ಗೆ?
ಮುದಗಲ್: ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ, ಹಾಲುಮತ ಸಮಾಜದ ಮುಖಂಡ ಹನುಮಂತಪ್ಪ ಕಂದಗಲ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮರಗುಂಡಪ್ಪ ಮೇಟಿ, ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್. ರಸೂಲ್ ಕಾಂಗ್ರೆಸ್ಗೆ ಸೇರ್ಪಡೆಯಾಗುವರು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
1994ರಲ್ಲಿ ಲಿಂಗಸ್ಗೂರು ವಿಧಾನಸಭಾ ಕ್ಷೇತ್ರಕ್ಕೆ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ಸ್ಪರ್ಧಿಸಿದಾಗ ಅವರ ಹೆಗಲಿಗೆ ಹೆಗಲು ಕೊಟ್ಟು ಗೆಲುವಿಗೆ ಕಾರಣರಾಗಿದ್ದ ಅಮರಗುಂಡಪ್ಪ ಮೇಟಿ ಅನೇಕ ರಾಜಕೀಯ ಕಾರಣಗಳಿಂದಾಗಿ ಬಯ್ಯಾಪುರಗೆ ವಿರೋಧಿಯಾಗಿದ್ದರು.
2008ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪರಾಭವಗೊಂಡಿರುವ ಮೇಟಿ, ತದನಂತರ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ರಾಜ್ಯ ರಾಜಕೀಯ ದೃವೀಕರಣದಲ್ಲಿ ಯಾರು ಎಲ್ಲಿಯಾದರೂ ಇರಬಹುದು ಎನ್ನುವುದಕ್ಕೆ ಅಮರಗುಂಡಪ್ಪ ಮೇಟಿ ಈಗ ಕಾಂಗ್ರೆಸ್ಗೆ ಸೇರಲು ಸನ್ನದ್ಧರಾಗಿದ್ದಾರೆ.
ಹನುಮಂತಪ್ಪ ಕಂದಗಲ್ ಒಂದು ಕಾಲದಲ್ಲಿ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ಆತ್ಮೀಯರಲ್ಲಿ ಒಬ್ಬರಾಗಿದ್ದರು. ತಾಪಂ ಅಧ್ಯಕ್ಷರಾಗಿ, ಜಿಪಂ ಸದಸ್ಯರಾಗಿ ರಾಜಕೀಯದಲ್ಲಿ ಅಧಿಕಾರ ಅನುಭವಿಸಿದರು. ಕಾರಣಾಂತರದಿಂದಾಗಿ ಕೆಜೆಪಿ ಸೇರಿ ಕಳೆದ ಚುನಾವಣೆಯಲ್ಲಿ ಸಿದ್ದು ಬಂಡಿಗೆ ಬೆಂಬಲಿಸಿದ್ದರು. ರಾಜಕೀಯ ಪಕ್ಷಾಂತರದಲ್ಲಿ ಸೇರಿದ್ದು, ಇವರು ಕಾಂಗ್ರೆಸ್ ಸೇರುವ ಇರಾದೆಯಲ್ಲಿದ್ದಾರೆ.
ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಅವರ ಬಲಗೈ ಬಂಟನೆಂದೇ ಕರೆಸಿಕೊಂಡಿದ್ದ ಎಪಿಎಂಸಿ ಮಾಜಿ ಉಪಾಧ್ಯಕ್ಷ, ಹಾಲಿ ನಿರ್ದೇಶಕ ಎಸ್.ಆರ್. ರಸೂಲ್ ಮಾನಪ್ಪ ವಜ್ಜಲ್ ಅವರು ಬಿಜೆಪಿ ತೊರೆದು ಜೆಡಿಎಸ್ಗೆ ಜಿಗಿದಾಗ ಅವರೊಂದಿಗೆ ಜೆಡಿಎಸ್ಗೆ ಹಾರಿದ್ದರು. ಶಾಸಕರ ಮತ್ತು ಎಸ್.ಆರ್. ನಡುವಿನ ರಾಜಕೀಯ ಸಂಬಂಧ ಹಳಸಿದ್ದರಿಂದ ಎಸ್.ಆರ್. ರಸೂಲ್ ಈಗ ಕಾಂಗ್ರೆಸ್ಗೆ ಜಂಪ್ ಮಾಡಲು ಸಿದ್ಧಗೊಂಡಿದ್ದಾರೆ.
ಹನುಮಂತಪ್ಪ ಕಂದಗಲ್ ಹಾಲುಮತ ಸಮಾಜದವರು, ಅಮರಗುಂಡಪ್ಪ ಮೇಟಿ ಗಾಣಿಗ ಸಮಾಜದವರು, ಎಸ್.ಆರ್. ರಸೂಲ್ ಮುಸ್ಲಿಂ ಸಮುದಾಯದವರು. ಮೂವರು ಬೇರೆ ಬೇರೆ ಜಾತಿಯವರಾಗಿದ್ದು, ಆಯಾ ಜಾತಿಗಳ ಮತ ಲೆಕ್ಕಾಚಾರ ಹಾಕಿರುವ ಕಾಂಗ್ರೆಸ್ ಮುಖಂಡರು ಇವರನ್ನು ಅಧಿಕೃತವಾಗಿ ಕಾಂಗ್ರೆಸ್ಗೆ ಸೇರಿಸಿಕೊಳ್ಳುವ ಸಂಬಂಧ ಅಮದಿಹಾಳ ಗ್ರಾಮದಲ್ಲಿ ಗುಪ್ತ ಸಭೆ ನಡೆಸಿ ಮುಖಂಡರು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾ.22ರಂದು ಲಿಂಗಸ್ಗೂರಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಅಧಿಕೃತ ಸೇರ್ಪಡೆಯಾಗಲು ವೇದಿಕೆ ಸಿದ್ಧಗೊಂಡಿದೆ. ರಾಯಚೂರು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ, ಅಮರೇಗೌಡ ಬಯ್ಯಾಪುರ, ಜಿಲ್ಲಾ, ತಾಲೂಕು ಕಾಂಗ್ರೆಸ್ ಮುಖಂಡರು ಈ ಬಗ್ಗೆ ಚರ್ಚೆ ನಡೆಸಿದ್ದಾರೆ.