'ಕೈ' ಹುರಿಯಾಳು ತತ್ತರ
ಚ ಜಗನ್ನಾಥ ಆರ್. ದೇಸಾಯಿ
ಕ.ಪ್ರ. ವಾರ್ತೆ ರಾಯಚೂರು ಮಾ.20
ಜಿಲ್ಲಾ ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಹೊಸದೇನಲ್ಲ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಎರಡೂ ಬಣಗಳು ಮೇಲ್ನೋಟಕ್ಕೆ ಒಂದಾಗಿದ್ದವಾದರೂ ಅತೃಪ್ತಿ ಶಮನವಾಗಿಲ್ಲ ಎಂಬುದು ಮತ್ತೆ ಸ್ಪಷ್ಟವಾಗಿದೆ. ಮಾನವಿ ಕ್ಷೇತ್ರದಲ್ಲಿ ಕೆಲ ಪ್ರಮುಖರು ಪಕ್ಷಕ್ಕೆ ರಾಜಿನಾಮೆ ನೀಡಿದ್ದೇ ಇದಕ್ಕೆ ಸಾಕ್ಷಿ.
ಕಾಂಗ್ರೆಸ್ ಅಭ್ಯರ್ಥಿ ತಮ್ಮ ನಾಮಪತ್ರ ಸಲ್ಲಿಕೆಗೂ ಮುನ್ನವೇ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ. ಮಾನವಿ ವಿಧಾನಸಭೆ ಕ್ಷೇತ್ರವು ಎಸ್ಟಿಗೆ ಮೀಸಲಾದ ದಿನದಿಂದ ಇಂಥ ಪರಿಸ್ಥಿತಿಯಿದೆ ಎಂಬ ಆರೋಪ ಸ್ವಪಕ್ಷದವರಿಂದಲೇ ಕೇಳಿಬಂದಿರುವುದು ವಿಶೇಷ.
ರಾಜಿನಾಮೆ: ಮಾನವಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ನಾಯಕರಾದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದೊಡ್ಡಬಸಪ್ಪಗೌಡ, ತಾಪಂ ಸದಸ್ಯ ರಾಜಾ ವಸಂತನಾಯಕ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಾಗರೆಡ್ಡೆಪ್ಪಗೌಡ, ಕೆ. ಬಸವಂತಪ್ಪ, ಜಿಪಂ ಮಾಜಿ ಸದಸ್ಯ ಪ್ರಕಾಶ ಜೇಗರಕಲ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಭಿನ್ನಮತ, ಗುಂಪುಗಾರಿಕೆಯಲ್ಲಿ ಕಳೆದ ಅನೇಕ ವರ್ಷಗಳಿಂದ ನಲುಗುತ್ತಿರುವ ಕಾಂಗ್ರೆಸ್, ಎರಡು ಬಣಗಳ ನಾಯಕರಿಂದ ನಿಯಂತ್ರಿಸಲ್ಪಟ್ಟಿದೆ. ಎರಡು ಬಣಗಳ ನಾಯಕರಾದ ಜಿಲ್ಲಾಧ್ಯಕ್ಷ ವಸಂತಕುಮಾರ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬೋಸರಾಜು ಅವರ ಮಧ್ಯೆಯೇ ಪಕ್ಷದಲ್ಲಿ ಎಲ್ಲ ಹಂತದಲ್ಲಿ ಪೈಪೋಟಿ ಮತ್ತು ಜಿದ್ದಾಜಿದ್ದಿ. ಅನೇಕ ಸಂದರ್ಭದಲ್ಲಿ ರಾಜಕೀಯ ಕಣದಲ್ಲಿ ಈ ಇಬ್ಬರು ನಾಯಕರ ಮಧ್ಯದ ಅತೃಪ್ತಿ ಬಟಾಬಯಲಾಗಿದಂಥ ಪ್ರಸಂಗಗಳೂ ನಡೆದಿವೆ.
ಭಿನ್ನಮತದ ಬೇಗುದಿ: ಹಾಗಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆಗಾಗ್ಗೆ ಒಗ್ಗಟ್ಟಿನ ಮಂತ್ರ ಕೇಳಿಬಂದು ನಂತರದಲ್ಲಿ ಮತ್ತೆ ಎಂದಿನಂತೆಯೇ ಬಣ ರಾಜಕೀಯ ಮುಂದುವರಿಯುತ್ತಿದ್ದದ್ದು ತೀರಾ ಸಾಮಾನ್ಯ ವಿಚಾರ. ಈಗಲೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎರಡೂ ಬಣಗಳ ನಾಯಕರು ಒಟ್ಟಾಗಿಯೇ ವೇದಿಕೆಯನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ.
ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ ಅವರು ಇಬ್ಬರೂ ನಾಯಕರಿಗೆ ಒಂದಾಗಿ ಚುನಾವಣೆ ಎದುರಿಸುವಂತೆ ಸೂಚನೆ ನೀಡಿದ್ದಾರೆಂದು ಹೇಳಲಾಗಿದೆ. ಇಬ್ಬರೂ ನಾಯಕರು ಹಾಗೂ ಬಣಗಳು ಒಂದಾಗುತ್ತಿದ್ದಂತೆಯೇ ಮಾನವಿ ಕ್ಷೇತ್ರದಲ್ಲಿ ಹಿಂದೊಮ್ಮೆ ಬೋಸರಾಜು ಅವರ ಬೆಂಬಲಿಗರಾಗಿದ್ದ ಜಿಪಂ ಮಾಜಿ ಅಧ್ಯಕ್ಷ ದೊಡ್ಡಬಸಪ್ಪಗೌಡ ಮತ್ತಿತರರು ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ತಾರತಮ್ಯದಿಂದ ಬೇಸತ್ತು ಪಕ್ಷ ತೊರೆದಿರುವುದಾಗಿ ಬಹಿರಂಗಗೊಳಿಸಿದ್ದಾರೆ.
ಶಿವನಗೌಡ ನಾಯಕ ಗಾಳ: ಮಾನವಿ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ವಶದಲ್ಲಿದೆ. ಹಾಗಾಗಿ ಮೊದಲಿನಿಂದಲೂ ಬಿಜೆಪಿ ಅಲ್ಲಿ ಹಿಡಿತ ಸಾಧಿಸಲು ಯತ್ನಿಸುತ್ತಿತ್ತು. ಈಗ ಬಿಜೆಪಿಗೆ ಅವಕಾಶ ದೊರೆತಂತಾಗಿದ್ದು, ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಅವರು ಈಗಾಗಲೇ ಕಾಂಗ್ರೆಸ್ ತೊರೆದವರನ್ನು ಸಂಪರ್ಕಿಸಿದ್ದು ಒಂದೆರಡು ದಿನದಲ್ಲಿ ಬಿಜೆಪಿ ಸೇರ್ಪಡೆಗೆ ವೇದಿಕೆ ಸಜ್ಜಾಗಲಿದೆ ಎಂಬ ಮಾತು ಕೇಳಿಬಂದಿದೆ.
ಮಾನವಿ ತಾಲೂಕು ಕೇಂದ್ರದಲ್ಲಿ ಸೂಕ್ತ ಸ್ಥಾನಮಾನ, ಚುನಾವಣೆ ಕೆಲಸದಲ್ಲಿ ಮುಂದಾಳತ್ವ ನೀಡಿಕೆ ಸೇರಿದಂತೆ ಎಲ್ಲ ಹಂತದಲ್ಲಿ ಪ್ರಾಮುಖ್ಯತೆಯ ಬೇಡಿಕೆಯೊಂದಿಗೆ ಕಾಂಗ್ರೆಸ್ ತೊರೆದವರು ಬಿಜೆಪಿ ಸೇರಲು ಸಜ್ಜಾಗಿದ್ದಾರೆಂದು ಹೇಳಲಾಗುತ್ತಿದೆ.
ಕಾಂಗ್ರೆಸ್ಗೆ ಪಾಠ ಕಲಿಸುವ ವಾಗ್ದಾನ: ಮಾನವಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಮತ ತಂದುಕೊಟ್ಟು ಕಾಂಗ್ರೆಸ್ಗೆ ಪಕ್ಷಕ್ಕೆ ಪಾಠ ಕಲಿಸುವ ಭರವಸೆಯನ್ನು ನೀಡಿದ್ದಾರೆಂದು ಹೇಳಲಾಗುತ್ತಿದೆ.
ಒಟ್ಟಾರೆಯಾಗಿ ಜಿಲ್ಲಾ ಕಾಂಗ್ರೆಸ್ನಲ್ಲಿನ ಅತೃಪ್ತಿ ಚುನಾವಣೆಯ ವೇಳೆಯೇ ಹೊರಬೀಳುವ ಮೂಲಕ ಪಕ್ಷವು ಇಕ್ಕಟ್ಟಿಗೆ ಸಿಲುಕಿದೆ. ಪ್ರಮುಖ ಬಣಗಳು ಚುನಾವಣೆಯ ವೇಳೆಗಾದರೂ ಒಂದಾದವು ಎಂದು ನೆಮ್ಮದಿಯಿಂದಿದ್ದ ಕಾರ್ಯಕರ್ತರಿಗೆ ಹೊಸ ಸಮಸ್ಯೆ ಎದ್ದು ನಿಂತಿರುವುದು ಕ್ಷೇತ್ರದಲ್ಲಿ ಆತಂಕ ತಂದಿರುವುದಂತೂ ನಿಜ.