ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಾಲಕಿ 'ಹತ್ಯಾ'ಚಾರ ಕೇಸ್ ಮುಚ್ಚಿ ಹಾಕುವ ಹುನ್ನಾರ

Rashmi Kasaragodu
Updated On : 21 Mar 2014, 12:50 pm

ಕ.ಪ್ರ. ವಾರ್ತೆ   ರಾಯಚೂರು   ಮಾ.20
ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ರಾಯದುರ್ಗದಲ್ಲಿ ಆರು ತಿಂಗಳ ಹಿಂದೆ ನಡೆದ ಬಾಲಕಿಯ 'ಹತ್ಯಾ'ಚಾರ ಪ್ರಕರಣವನ್ನು ಅಸ್ವಾಭಾವಿಕ ಮರಣ ಎಂದು ಕೇಸ್ ದಾಖಲಿಸಿರುವ ಹಟ್ಟಿ ಪೊಲೀಸರು, ಪ್ರಕರಣ ಮುಚ್ಚಿ ಹಾಕಲು ಹುನ್ನಾರ ನಡೆಸಿದ್ದಾರೆ ಎಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಹಾಗೂ ಮೃತ ಬಾಲಕಿಯ ಪಾಲಕ ಹನುಮಂತ ಪಿರಗರ್ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮದ ನಾಗಪ್ಪ ಎಂಬಾತ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ನಂತರ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ಹಟ್ಟಿ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ಸಲ್ಲಿಸಿ ಆರು ತಿಂಗಳಾದರೂ ಪೊಲೀಸರು ಅತ್ಯಾಚಾರ, ಕೊಲೆ ಪ್ರಕರಣ ದಾಖಲಿಸುತ್ತಿಲ್ಲ ಎಂದು ಆರೋಪಿಸಿದರು.
ದೂರಿನಲ್ಲಿ ಹೇಳಿದ್ದೇನು?: 2013ರ ಸೆ.16ರಂದು ರಾಯದುರ್ಗ ಗ್ರಾಮದಲ್ಲಿ ದನ ಮೇಯಿಸಲು ಹೋಗಿದ್ದ ಅಪ್ರಾಪ್ತೆ ಬಸಮ್ಮ(12)ಎಂಬಾಕೆಯ ಮೇಲೆ ಅದೇ ಗ್ರಾಮದ ನಾಗಪ್ಪ ಎಂಬಾತ ಅತ್ಯಾಚಾರ ನಡೆಸಿದ್ದಾನೆ. ನಂತರ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಕುತ್ತಿಗೆಗೆ ಟವೆಲ್ ಬಿಗಿದು ಸಣ್ಣ ಗಿಡಕ್ಕೆ ಕಟ್ಟಿ ಅದೊಂದು ಆತ್ಮಹತ್ಯೆ ಎಂದು ಗೋಚರಿಸುವಂತೆ ಮಾಡಿದ್ದಾನೆಂದು ದೂರಿದರು.
ಬಾಲಕಿ ಮನೆಗೆ ಬಾರದೇ ಹೋದಾಗ ಆಕೆಯನ್ನು ಪಾಲಕರು ಹುಡುಕಿ ಹೋದಾಗ ಆಕೆಯ ಶವ ಮರದಲ್ಲಿ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಸಮ್ಮ ದನ ಮೇಯಿಸುವ ವೇಳೆ ಕೆಲ ಗ್ರಾಮಸ್ಥರು ನಾಗಪ್ಪ ಎಂಬಾತ ಆಕೆಯಿದ್ದ ಸ್ಥಳದ ಬಳಿಯೇ ಅನುಮಾನಾಸ್ಪದ ರೀತಿಯಲ್ಲಿ ಸುಳಿದಾಡುತ್ತಿದ್ದುದನ್ನು ಕಂಡಿದ್ದಾರೆಂದು ಹೇಳಿದರು.
ಪ್ರಕರಣ ಮುಚ್ಚಿ ಹಾಕುವ ಯತ್ನ: ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದಾಗ ಅವರು ರಾತ್ರಿಯೇ ಶವ ಪರೀಕ್ಷೆ ನಡೆಸಿ ಶವವನ್ನು ಸುಡುವಂತೆ ಪಾಲಕರಿಗೆ ಸೂಚಿಸಿ ಪ್ರಕರಣ ಮುಚ್ಚಿ ಹಾಕುವ ತಂತ್ರ ಅನುಸರಿಸಿದ್ದಾರೆ. ಆಗ ಹಟ್ಟಿ ಪೊಲೀಸ್ ಠಾಣೆಯ ಪಿಎಸ್ಸೈ ಆಗಿದ್ದ ಪ್ರಕಾಶ ಮಾಳೆ ಶವವನ್ನು ಸುಡುವಂತೆ ಪಾಲಕರ ಮೇಲೆ ಒತ್ತಡ ಹೇರಿದ್ದಾರೆ. ಆದರೂ ಪಾಲಕರು ತಮ್ಮ ರೀತಿ ರಿವಾಜಿನಂತೆ ಮಣ್ಣಿನಲ್ಲಿ ಹೂತು ಶವಸಂಸ್ಕಾರ ನಡೆಸಿರುವುದಾಗಿ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಲು ಪಾಲಕರು ತೆರಳಿದಾಗ ನಾಗಪ್ಪನ ವಿರುದ್ಧ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದಾರೆ. ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ಸಲ್ಲಿಸಲಾಗಿದ್ದು, ಕಳೆದ ಆರು ತಿಂಗಳಿಂದ ನೊಂದ ಪಾಲಕರನ್ನು ಅಲೆದಾಡಿಸಲಾಗುತ್ತಿದೆ ಎಂದು ಟೀಕಿಸಿದರು.
ಪ್ರಕರಣ ದಾಖಲಿಸುತ್ತಿಲ್ಲ: ರಾಜಕೀಯ ಪ್ರಭಾವ ಹಾಗೂ ಹಟ್ಟಿ ಪೊಲೀಸ್ ಠಾಣೆಯ ಅಧಿಕಾರಿಗಳ ಹುನ್ನಾರಕ್ಕೆ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷ್ಯಾಧಾರ ಒದಗಿಸಿದರೂ ಪಾಲಕರ ಮನವೀಯಂತೆ ಪ್ರಕರಣ ದಾಖಲಿಸುತ್ತಿಲ್ಲ ಎಂದು ಟೀಕಿಸಿದರು.
ಹಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂಥ ನಾಲ್ಕೈದು ಪ್ರಕರಣಗಳು ನಡೆದಿದ್ದು ಎಲ್ಲ ಪ್ರಕರಣಗಳನ್ನು ಮುಚ್ಚಿ ಹಾಕುವ ಕಾರ್ಯವನ್ನು ಪೊಲೀಸರು ಮಾಡಿದ್ದಾರೆ. ಅದರಿಂದಾಗಿ ಆರೋಪಿಗಳು ಪಾಲಕರಿಗೆ ಜೀವಬೆದರಿಕೆಯೊಡ್ಡುತ್ತಿದ್ದಾರೆಂದು ಆರೋಪಿಸಿದರು.
ಕೂಡಲೇ ಈ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪೊಲೀಸ್ ಇಲಾಖೆ ಗಮನಹರಿಸಬೇಕು. ತಪ್ಪಿದಲ್ಲಿ ಸರ್ಕಾರಕ್ಕೆ ದೂರು ಸಲ್ಲಿಸಲಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮೃತ ಬಾಲಕಿಯ ಸಂಬಂಧಿಕರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement