ಬಿಸಿಯೂಟದಲ್ಲಿ ಹುಳು: ಕರವೇ ಆಕ್ರೋಶ
ಚಿತ್ತಾಪುರ: ತಾಲೂಕಿನ ರಾಜೋಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟದ ಅನ್ನದಲ್ಲಿನ ಹುಳಗಳನ್ನು ತಿಂದ ಮಕ್ಕಳ ಆರೋಗ್ಯ ಹಾಳಾಗುತ್ತಿದೆ ಎಂದು ಕರವೇ ಗ್ರಾಮ ಘಟಕ ಅಧ್ಯಕ್ಷ ರಜಾಕ್ ಜಮಾದಾರ್ ಆರೋಪಿಸಿದ್ದಾರೆ.
ಸರ್ಕಾರವು ಮಕ್ಕಳ ಅರೋಗ್ಯದ ಹಿತದೃಷ್ಟಿಯಿಂದ ಒಳ್ಳೆ ಗುಣಮಟ್ಟದ ಆಹಾರ ನೀಡಲು ಶಾಲೆಗಳಿಗೆ ಸೂಚಿಸಿದ್ದರೂ ಶಾಲೆಯ ಬಿಸಿಯೂಟದ ಸಿಬ್ಬಂದಿ ಅದಕ್ಕೆ ಕ್ಯಾರೆ ಎನ್ನದೆ ಅಕ್ಕಿ ಸ್ವಚ್ಛಗೊಳಿಸದೆ ತೊಳೆಯದೇ ಅನ್ನ ಮಾಡುತ್ತಾರೆ. ಈ ಬಗ್ಗೆ ಅನೇಕ ಬಾರಿ ಶಾಲೆಯ ಮುಖ್ಯ ಗುರುಗಳು ಹಾಗೂ ಎಸ್‌ಡಿಎಂಸಿಯವರಿಗೆ ತಿಳಿಸಿದರೂ ಈ ಬಗ್ಗೆ ಗಮನಹರಿಸಿಲ್ಲ. ಸರ್ಕಾರ ಮಹತ್ವಕಾಂಕ್ಷಿ ಯೋಜನೆಗೆ ಇಂತಹ ಬಿಸಿಯೂಟ ನೌಕರರು, ಸಿಬ್ಬಂದಿಯಿಂದ ಕೆಟ್ಟ ಹೆಸರು ಬರುವಂತಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಮುಖ್ಯ ಗುರುಗಳು ಹಾಗೂ ಬಿಸಿಯೂಟದ ಸಿಬ್ಬಂದಿಯನ್ನು ಬದಲಾಯಿಸಬೇಕು. ಒಂದು ವೇಳೆ ವಿಳಂಬ ನೀತಿ ಅನುಸರಿಸಿದಲ್ಲಿ ಇದರ ವಿರುದ್ಧ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ರಜಾಕ್ ಜಮಾದಾರ್ ಎಚ್ಚರಿಕೆ ನೀಡಿದ್ದಾರೆ. ಕರವೇ ಕಾರ್ಯಕರ್ತರಾದ ಮಲ್ಲಿಕಾರ್ಜುನ ಅಲ್ಲೂರಕರ್, ಮಹಾದೇವ ತೆಲಗರ, ಚಂದ್ರಕಾಂತ, ಶರಣಕುಮಾರ, ರವಿಕುಮಾರ ದೋರೆ, ಸೋನು, ಸುನಿಲಕುಮಾರ, ಅಲ್ಲಾವುದ್ದಿನ್ ದಸ್ತಗೀರ ಇದ್ದರು.