ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮತದಾನ ಜಾಗೃತಿ; ಇಲಾಖೆಗಳಿಗೆ ಹೊಣೆ

Rashmi Kasaragodu
Updated On : 21 Mar 2014, 12:49 pm

ವಿಶೇಷ ವರದಿ
ಕ.ಪ್ರ. ವಾರ್ತೆ   ರಾಯಚೂರು   ಮಾ.20
ಚುನಾವಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಹೊಣೆ ಒಂದೆಡೆ, ಮತ್ತೊಂದೆಡೆ ಮತದಾನದ ಪ್ರಮಾಣ ಹೆಚ್ಚಿಸುವ ಒತ್ತಡ ಬೇರೆ. ಮತದಾರರಲ್ಲಿ ಜಾಗೃತಿ ಮೂಡಿಸುವ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಲು ವಿವಿಧ ಇಲಾಖೆಗಳಿಗೆ ಹೆಚ್ಚಿನ ಹೊಣೆ ವಹಿಸಿರುವ ಜಿಲ್ಲಾಡಳಿತವು ಕಳೆದ ಬಾರಿಯ ಕಳಪೆ ಸಾಧನೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗೆ ಚಾಲನೆ ನೀಡಿದೆ.
ರಾಯಚೂರು ಲೋಕಸಭೆ ಕ್ಷೇತ್ರ(ಎಸ್ಟಿ ಮೀಸಲು)ದ 8 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸದ್ಯ ಮತದಾರರ ಜಾಗೃತಿಯ ಕಾರ್ಯಕ್ರಮಗಳದ್ದೇ ಸದ್ದು. ಮತದಾರರ ಜಾಗೃತಿಗೆ ಶಿಕ್ಷಣ, ಸರ್ಕಾರಿ ಕಚೇರಿಗಳು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಗೆ ಅವುಗಳ ಕಾರ್ಯ ನಿರ್ವಹಣೆಯ ವೇಳೆ ಮತದಾರರ ಜಾಗೃತಿಯ ಕಾರ್ಯಕ್ರಮಗಳ ಆಯೋಜನೆಯ ಹೊಣೆ ವಹಿಸಲಾಗಿದೆ.
ಕಡಿಮೆ ಮತದಾನ ಪ್ರಮಾಣ: ಕಳೆದ 2009ರಲ್ಲಿ ನಡೆದ ರಾಯಚೂರು ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಅತೀ ಕಡಿಮೆ ಮತದಾನ ನಡೆದ ಕ್ಷೇತ್ರಗಳ ಪಟ್ಟಿಯಲ್ಲಿ ರಾಯಚೂರು ಎರಡನೇ ಸ್ಥಾನ ಗಳಿಸಿತ್ತು. ಆಗ ಬೆಂಗಳೂರು ನಗರ ಕ್ಷೇತ್ರದ ಮತದಾನದ ಪ್ರಮಾಣ ಶೇ.45.26ರಷ್ಟು ನಡೆದು ಮೊದಲ ಸ್ಥಾನದಲ್ಲಿತ್ತು.
ಆನಂತರದ ಸ್ಥಾನದಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದ ಶೇ.45.91ರಷ್ಟು ಮತದಾರರು ಹಕ್ಕು ಚಲಾಯಿಸಿದ್ದರು. ಆ ಮೂಲಕ ಮತದಾನದೆಡೆಗೆ ನಿರಾಸಕ್ತಿಯನ್ನೂ ಪ್ರದರ್ಶಿಸಿದ್ದರು. ಅದರಲ್ಲೂ ನಗರ ಪ್ರದೇಶದ ಮತದಾರರು ಮತದಾನಕ್ಕೆ ತೀರಾ ಕಡಿಮೆ ಸಂಖ್ಯೆಯಲ್ಲಿ ಹಾಜರಾಗಿದ್ದು ಪ್ರಮಾಣ ಕುಸಿತಕ್ಕೆ ದಾರಿ ಮಾಡಿತ್ತು.
ಎಚ್ಚೆತ್ತ ಆಯೋಗ: ಮತದಾನದ ಪ್ರಮಾಣ ಕುಸಿತದಿಂದ ಆತಂಕಗೊಂಡ ರಾಜ್ಯ ಚುನಾವಣೆ ಆಯೋಗವು 2013ರ ವಿಧಾನಸಭೆ ಚುನಾವಣೆ ವೇಳೆಗೆ ಎಚ್ಚೆತ್ತುಕೊಂಡಿತು. ಕೇಂದ್ರ ಚುನಾವಣೆ ಆಯೋಗದ ಸೂಚನೆಯ ಮೇರೆಗೆ ಮತದಾರರಲ್ಲಿ ಕಡ್ಡಾಯ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿತು.
ಹಾಗೆಯೇ ಬೀದಿ ನಾಟಕ, ಪ್ರತಿಜ್ಞೆ ಸ್ವೀಕಾರ, ಯುವ ಮತದಾರರಲ್ಲಿ ಮತದಾನದ ಮಹತ್ವ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜನೆ ಮೂಲಕ ಜಾಗೃತಿ ಮೂಡಿಸಿದ್ದ ಜಿಲ್ಲಾಡಳಿತ ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಶೇ.66ಕ್ಕೆ ಕೊಂಡೊಯ್ಯಲಾಗಿತ್ತು.
ಸಾಧನೆ ಸುಧಾರಣೆ: ಕಳೆದ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ದಾಖಲಾದ ಶೇ.45.91ರ ಮತದಾನದ ಪ್ರಮಾಣವನ್ನು ಸುಧಾರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿವಿಧ ಇಲಾಖೆಗಳಿಗೆ ಹೊಣೆ ವಹಿಸಿದೆ. ಎಲ್ಲ ಸರ್ಕಾರಿ ನೌಕರರು ಹಾಗೂ ಅರೆ ಸರ್ಕಾರಿ ಇಲಾಖೆಗಳ ಕುಟುಂಬದವರು ಕಡ್ಡಾಯ ಮತದಾನ ಮಾಡಬೇಕು.
ಜಿಲ್ಲಾ ವಾರ್ತಾ ಇಲಾಖೆಯು ಬೀದಿ ನಾಟಕಗಳ ಆಯೋಜನೆ ಮಾಡಬೇಕು. ಶಿಕ್ಷಣ ಇಲಾಖೆಯವರು ಮತದಾನದ ಮಹತ್ವದ ಕುರಿತು ಶಾಲೆಗಳಲ್ಲಿ  ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಕೃಷಿ, ತೋಟಗಾರಿಕೆ, ಅರಣ್ಯ ಹಾಗೂ ರೇಷ್ಮೆ ಇಲಾಖೆಯವರು ರೈತ ಸಂಪರ್ಕ ಕೇಂದ್ರ, ಮಾಹಿತಿ ಕೇಂದ್ರಗಳಲ್ಲಿ ಕಡ್ಡಾಯ ಮತದಾನದ ಮಹತ್ವ ಸಾರುವ ಕಾರ್ಯ ಮಾಡಬೇಕೆಂದು ಸೂಚಿಸಿದೆ.
ಆಹಾರ ಇಲಾಖೆಯವರು ನ್ಯಾಯಬೆಲೆ ಅಂಗಡಿಗಳಲ್ಲಿ ಮತದಾನ ಕಡ್ಡಾಯ ಎಂಬ ಬ್ಯಾನರ್ ಅಳವಡಿಸಬೇಕು. ಪೊಲೀಸ್ ಇಲಾಖೆಯವರು ಬಸ್, ಆಟೋಗಳು, ವಾಹನಗಳಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮದ ಭಿತ್ತಿಚಿತ್ರ ಪ್ರದರ್ಶಿಸಲು ಸೂಚಿಸಲಾಗಿದೆ.
ಎಲ್ಲ ಇಲಾಖೆಗಳನ್ನು ಮತದಾನದ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಮತದಾನದ ಪ್ರಮಾಣ ಸುಧಾರಣೆಗೆ ಜಿಲ್ಲಾಡಳಿತ ಚಿಂತಿಸಿದೆ. ಈಗಾಗಲೇ ಈ ನಿಟ್ಟಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಕುರಿತ ಸಭೆ ನಡೆಸಿದ್ದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಮತದಾನದ ಪ್ರಮಾಣ ಹೆಚ್ಚಳ ಎಲ್ಲ ಅಧಿಕಾರಿಗಳ ಗುರಿಯಾಗಬೇಕೆಂದು ಎಚ್ಚರಿಕೆ ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement