ಶ್ರೀಶೈಲ ಪಾದಯಾತ್ರಿಗಳಿಗೆ ಅನ್ನ ದಾಸೋಹ
ಮುದಗಲ್/ಲಿಂಗಸ್ಗೂರು: ಬಿಜಾಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳ 40 ಸಾವಿರಕ್ಕೂ ಅಧಿಕ ಭಕ್ತರು ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ಮುದಗಲ್ ಮಾರ್ಗವಾಗಿ ಸಾಗಿದರು.
ಪಾದಯಾತ್ರಿಗಳಿಗೆ ಪಟ್ಟಣ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಅನ್ನದಾಸೋಹ ಕಾರ್ಯಕ್ರಮ ಅದ್ಧೂರಿಯಿಂದ ಜರುಗಿತು. ಪಟ್ಟಣದ ಅನೇಕ ಭಕ್ತರು ದಾಸೋಹಕ್ಕೆ ಅಕ್ಕಿ, ಬೇಳೆ, ತರಕಾರಿ, ರೊಟ್ಟಿ, ಬೆಲ್ಲ, ಹಾಲು ಸೇರಿದಂತೆ ಅನೇಕ ಧಾನ್ಯಗಳನ್ನು ನೀಡಿ ದಾಸೋಹಕ್ಕೆ ಸಹಕರಿಸಿದರು.
ಸುತ್ತಮುತ್ತಲಿನ ಗ್ರಾಮಗಳ ಭಕ್ತರು ದವಸ, ಧಾನ್ಯಗಳನ್ನು, ಕಾಣಿಕೆಯನ್ನು ನೀಡಿ ಶ್ರೀಶೈಲ ಪಾದಯಾತ್ರಿಗಳಿಗೆ ದಾಸೋಹ ಮಾಡಿದರು. ದಾರಿಯುದ್ದಕ್ಕೂ ನಡೆದು ಬರುವ ಭಕ್ತರ ಕಾಲುಗಳಿಗೆ ಬೊಬ್ಬೆ ಎದ್ದು ತೊಂದರೆಯಾದವರಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ, ವೈದ್ಯರು ಉಚಿತ ಔಷಧಿ, ಮಾತ್ರೆ, ಮುಲಾಮುಗಳನ್ನು ನೀಡಿ ಆರೈಕೆ ಮಾಡಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಸುರೇಶಗೌಡ ಪಾಟೀಲ್, ಮಹಾಂತೇಶ ಪಾಟೀಲ್, ವಿಶ್ವನಾಥ ದೇಸಾಯಿ, ಗುರುಬಸ್ಸಪ್ಪ ಸಜ್ಜನ್, ಚಂದ್ರಣ್ಣ ಗಂಗಾವತಿ, ಶಿವಪ್ಪ ಸುಂಕದ್, ಚನ್ನಬಸನಗೌಡ, ಶಂಕ್ರಗೌಡ ಕಿಡದೂರು, ಮಹೇಶ್ವರ ಸ್ವಾಮಿ, ಉದಯಕುಮಾರ ಕಮ್ಮಾರ, ಅಮರಪ್ಪ, ಅನಿಲಕುಮಾರ, ಡಾ. ಸಂಜೀವ್ ಸೇರಿದಂತೆ ಅನೇಕ ಭಕ್ತರು ತನು, ಮನ, ಧನ ಸಹಾಯ ಮಾಡಿದ ರು.
ಲಿಂಗಸ್ಗೂರಿನ ಲಕ್ಷ್ಮೀ ಡಾಬಾದಲ್ಲಿ ಪ್ರಸಾದ ವ್ಯವಸ್ಥೆ: ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಶ್ರೀಶೈಲ ಪಾದಯಾತ್ರಿಕರಿಗೆ ಪಟ್ಟಣದ ಲಕ್ಷ್ಮೀ ಡಾಬಾದಲ್ಲಿ ಬುಧವಾರ ಒಂದು ದಿನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಢಾಬಾದ ಮಾಲೀಕ ಲಕ್ಷ್ಮೀಪುತ್ರ, ಪ್ರಸಾದ ವ್ಯವಸ್ಥಾಪಕರಾದ ಲಕ್ಷ್ಮಣ ಕೆಂಭಾವಿ, ಪ್ರಭಾಕರರೆಡ್ಡಿ, ಪರಶುರಾಮ ಪೋಳ, ವೆಂಕೋಬ ಆನ್ವರಿ, ಅಮರೇಶ ಭಟ್ಟ, ಲಕ್ಷ್ಮಣ, ಪವನ ಯಾದವ್ ಸೇರಿದಂತೆ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು.
ಡಾಬಾದಲ್ಲಿ ಅಥಣಿ ತಾಲೂಕಿನ ದರೂರ ಗ್ರಾಮದ ಸಿದ್ಧನಗೌಡ ಪಾಟೀಲ್, ಮಧುಗೌಡ ಪಾಟೀಲ್, ಅಮೃತ ಪಾಟೀಲ್, ಲೀಲಾವತಿ ಪಾಟೀಲ್, ಉಜ್ವಲ್ ಪಾಟೀಲ್, ಶೈಲಶ್ರೀ ಪಾಟೀಲ್ ಹಾಗೂ ಕಂಬಿ ಮಲ್ಲಯ್ಯ ಹೊತ್ತ ಭಕ್ತ ಮಲ್ಲಯ್ಯ ಸೇರಿದಂತೆ ಅನೇಕ ಭಾಗಗಳಿಂದ ಆಗಮಿಸಿದ ಪಾದಯಾತ್ರಿಕರು ಪ್ರಸಾದ ಸ್ವೀಕರಿಸಿದರು.