ಅಕ್ರಮ ಮದ್ಯ ಜಪ್ತಿ; ಮೂವರ ಬಂಧನ
ರಾಯಚೂರು: ಚುನಾವಣೆಯ ವೇಳೆ ಅಕ್ರಮ ಮದ್ಯ ಸಾಗಣೆ ತಡೆಗೆ ಮುಂದಾಗಿರುವ ಪೊಲೀಸ್ ಇಲಾಖೆಯು ಶುಕ್ರವಾರ ಕಾರ್ಯಾಚರಣೆ ನಡೆಸಿ ಅಕ್ರಮ ಕಲಬೆರಕೆ ಸೇಂದಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಯಚೂರಿನ ಗ್ರಾಮೀಣ ಪೊಲೀಸ್ ಠಾಣೆ ವೃತ್ತ ವ್ಯಾಪ್ತಿಯ ಮಾರ್ಕೆಟ್ ಯಾರ್ಡ್ ಮತ್ತು ಗ್ರಾಮೀಣ ಠಾಣೆ ಪೊಲೀಸರು ವಿವಿಧೆಡೆ ಪ್ರತ್ಯೇಕ ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಣೆ ಮಾಡುತ್ತಿದ್ದ ಮಲ್ಲೇಶಿ, ಶರಣಪ್ಪ ಹಾಗೂ ನವಾಬಗಡ್ಡ ಪ್ರದೇಶದ ತಾಯಪ್ಪ ಎಂದು ಗುರುತಿಸಲಾಗಿದೆ.
ಆಂಧ್ರಪ್ರದೇಶದ ಕೃಷ್ಣಾದಿಂದ 100 ಲೀಟರ್ ಕಲಬೆರಕೆ ಸೇಂದಿಯನ್ನು ಈ ಮೂವರು ಪ್ಲಾಸ್ಟಿಕ್ ಕೊಡ ಮತ್ತು ಕ್ಯಾನ್‌ಗಳಲ್ಲಿ ಸಾಗಿಸುತ್ತಿದ್ದಾಗ ತಾಲೂಕಿನ ಕರೇಕಲ್ ಕ್ರಾಸ್ ಬಳಿ ದಾಳಿ ನಡೆಸಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ನಗರದ ನವಾಬಗಡ್ಡದಲ್ಲಿ ಅಕ್ರಮ ಸೇಂದಿ ಮಾರಾಟದಲ್ಲಿ ನಿರತ ತಾಯಪ್ಪ ಎಂಬಾತನಿಂದ 300 ಬೆಲೆಯ 25 ಲೀಟರ್ ಹೆಂಡ ಜಪ್ತಿ ಮಾಡಿದ್ದಾರೆಂದು ಪೊಲೀಸ್ ಇಲಾಖೆ ತಿಳಿಸಿದೆ.