ಅಕ್ರಮ ಮದ್ಯ ಸಾಗಣೆ ತಡೆಗೆ ಕ್ರಮ
ರಾಯಚೂರು: ಪ್ರಸಕ್ತ ಲೋಕಸಭೆ ಚುನಾವಣೆಯ ವೇಳೆ ನೀತಿ ಸಂಹಿತೆ ಪಾಲನೆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರಮುಖ ಒಳಬರುವ ಹಾಗೂ ಹೊರಹೋಗುವ ಸ್ಥಳದಲ್ಲಿ ದಿನದ 24 ಗಂಟೆ ಅಬಕಾರಿ ಸಿಬ್ಬಂದಿ ಕರ್ತವ್ಯ ನಿರ್ವಹಣೆಗೆ ತಂಡ ರಚಿಸಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.
ಜಿಲ್ಲೆಯ ವಿವಿಧೆಡೆ ಒಟ್ಟು 16 ಅಬಕಾರಿ ಚೆಕ್‌ಪೋಸ್ಟ್‌ಗಳನ್ನು ತೆರೆದಿದ್ದು, ಆಂಧ್ರದ ಗಡಿಯಲ್ಲಿ 7 ಚೆಕ್ ಪೋಸ್ಟ್‌ಗಳಿವೆ. ನಗರಕ್ಕೆ ಗಡಿ ಭಾಗದಿಂದ ಕಲುಷಿತ ಸೇಂದಿ ಮತ್ತಿತರೆ ಮದ್ಯ ಸಾಗಣೆಯಾಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ರೇಲ್ವೆ ಸುರಕ್ಷಾ ದಳ, ಕರ್ನಾಟಕ ರಾಜ್ಯ ರೇಲ್ವೆ ಪೊಲೀಸ್, ಸ್ಥಳಿಯ ಪೊಲೀಸರ ನೆರವಿನೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯಾಚರಣೆ ನಡೆಸುವುದು, ಆಂಧ್ರದ ಮಹೆಬೂಬ್‌ನಗರ, ಕರ್ನೂಲ್ ಜಿಲ್ಲೆಗಳ ಅಬಕಾರಿ ಇಲಾಖೆಯೊಂದಿಗೆ ಸತತ ಸಂಪರ್ಕದಲ್ಲಿದ್ದು ಅಕ್ರಮ ತಡೆಯಲು ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ತಿಳಿಸಿದೆ.
ರಾಯಚೂರು ನಗರ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ 24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಸ್ಥಾಪಿಸಿದ್ದು ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.
ರಾಯಚೂರು ಕಂಟ್ರೋಲ್ ರೂಂ ಸಂಖ್ಯೆ- 08532- 221242, 221213, 234234, ಮಾನವಿ-08538- 221001, ಸಿಂಧನೂರು- 08535- 223020 ಹಾಗೂ ಲಿಂಗಸ್ಗೂರು ವಲಯ-08537- 258031ಗೆ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದೆ.
ಸಂಚಾರಿ ದಳ: ಜಿಲ್ಲಾದ್ಯಂತ ಮದ್ಯ ಸಾಗಣೆ ಅಕ್ರಮ ತಡೆಗೆ 10 ಸಂಚಾರಿ ಅಬಕಾರಿ ದಳ ರಚಿಸಿದ್ದು, ಸಾರ್ವಜನಿಕರು ಯಾವುದೇ ಅಬಕಾರಿ ಅಕ್ರಮ ಸಂಬಂಧಿ ಮಾಹಿತಿ ದೊರೆತಲ್ಲಿ ಇಲಾಖೆಗೆ ದೂರು ನೀಡಿ ಸಹಕರಿಸಲು ಕೋರಿದೆ.