ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ನೋಟಾ' ಜಿಲ್ಲಾಡಳಿತ ನೋ ಟಾಕ್!

Mainashree
Updated On : 29 Mar 2014, 10:53 am

ಕ.ಪ್ರ. ವಾರ್ತೆ | ರಾಯಚೂರು | ಮಾ.28
ಕೇಂದ್ರ ಚುನಾವಣಾ ಆಯೋಗವು ಕಡ್ಡಾಯ ಮತದಾರರ ಜಾಗೃತಿ ಕಾರ್ಯಕ್ರಮಗಳಿಗೆ ಕೋಟಿ ಕೋಟಿ ಹಣ ಸುರಿಯುತ್ತಿದೆ. ಕಳೆದ ಕೆಲ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಸಹಕಾರಿಯೂ ಆಗಿದೆ. ಆದರೆ ಮತಯಂತ್ರದಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ 'ನೋಟಾ' ಗುಂಡಿಯ ಬಗ್ಗೆ ತಿಳಿಸಿಕೊಡುವ ಕಾರ್ಯ ಮಾತ್ರ ಜಿಲ್ಲೆಯಲ್ಲಿ ನಡೆಯುತ್ತಿಲ್ಲ.
ಪ್ರಸಕ್ತ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಜಾಗೃತಿ ಕಾರ್ಯಕ್ರಮಗಳಲ್ಲಿ ಮಾಹಿತಿ ನೀಡಿಕೆಯ ಕೊರತೆ ಕಂಡುಬಂದಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ರಾಜಕೀಯ ಪಕ್ಷಗಳ ಒತ್ತಡಕ್ಕೆ ಸಿಲುಕಿದ್ದಾರೆಯೇ ಎಂಬ ಗುಮಾನಿ ಎದ್ದಿದೆ.
ಕಳೆದ ಅನೇಕ ಚುನಾವಣೆಗಳಂತೆ ಏ.17ರಂದು ನಡೆಯಲಿರುವ ಚುನಾವಣೆಯಲ್ಲೂ ಮತ ಯಂತ್ರಗಳ ಬಳಕೆ ಮಾಡಲಾಗುತ್ತದೆ. ಮತದಾರರೂ ಮತಯಂತ್ರಗಳಲ್ಲಿ ಮತದಾನ ಮಾಡುವ ವಿಧಾನ ಅರಿತಿದ್ದಾರೆ. ಹಾಗೆಯೇ ಮತಯಂತ್ರದಲ್ಲಿ ಕಾಲದಿಂದ ಕಾಲಕ್ಕೆ ಆಗಿರುವ ಮಾರ್ಪಾಟುಗಳ ಬಗ್ಗೆ ಅರಿಯುವ ಹಕ್ಕೂ ಅವರಿಗಿದೆ ಎಂಬುದು ಅಷ್ಟೇ ಸತ್ಯ.
ಪ್ರಮಾಣ ಕುಸಿತ: ಚುನಾವಣೆ ವೇಳೆ ಮತದಾರರು ಮತದಾನದಿಂದ ದೂರವುಳಿಯುವುದನ್ನು ತಪ್ಪಿಸಲು ಮತದಾರರ ಜಾಗೃತಿ ಕಾರ್ಯಕ್ರಮಗಳಿಗೆ ಸದ್ಯ ಚಾಲನೆ ನೀಡಲಾಗಿದೆ. ಈಗಾಗಲೇ ಜಿಲ್ಲಾದ್ಯಂತ ಅನೇಕ ಕಾರ್ಯಕ್ರಮಗಳು ಜಾರಿಯಲ್ಲಿವೆ. ಎಲ್ಲೆಡೆ ಜಿಲ್ಲಾಡಳಿತ ಶೇ. 100ರಷ್ಟು ಮತದಾನದ ಬಗ್ಗೆಯೇ ಜಾಗೃತಿ ಮೂಡಿಸುತ್ತಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಶೇ.45.91ರಷ್ಟು ಮತದಾನವಾಗಿತ್ತು. ಈ ಪ್ರಮಾಣ ಹೆಚ್ಚಿಸುವತ್ತಲೇ ಆಡಳಿತ ಹೆಚ್ಚಿನ ಗಮನಹರಿಸಿದೆ. ಆದರೆ ಸುಪ್ರೀಂಕೋರ್ಟಿನ ಆದೇಶದಂತೆ ಮತಯಂತ್ರದಲ್ಲಿ ಹೊಸದಾಗಿ ಸೇರಿಸಿರುವ ನೋಟಾ ಬಟನ್ ಬಗ್ಗೆ ಚಕಾರವೆತ್ತುತ್ತಿಲ್ಲ.
ಈ ಕುರಿತು 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿದ ಹಿರಿಯ ರೈತ ಮುಖಂಡ ಹನುಮನಗೌಡ ಬೆಳಗುರ್ಕಿ, 'ಚುನಾವಣೆಯ ಸುಧಾರಣೆ ಕ್ರಮವಾಗಿ ಮತದಾರರಿಗೆ ನೋಟಾ ಅವಕಾಶ ಕಲ್ಪಿಸಲಾಗಿದೆ. ಆದರೆ ಜಾಗೃತಿ ಮೂಡಿಸದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮತದಾರರಿಗೆ ಚುನಾವಣೆ ವ್ಯವಸ್ಥೆಯಲ್ಲಿ ಆಗುವ ಎಲ್ಲ ಮಾರ್ಪಾಟು, ಸುಧಾರಣೆ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಕಾರ್ಯ ಆಗಬೇಕು' ಎಂದಿದ್ದಾರೆ.
ಒತ್ತಡ ಶಂಕೆ: ಮತಯಂತ್ರದಲ್ಲಿ ಸೇರ್ಪಡೆಗೊಳಿಸಿರುವ ನೋಟಾ ಬಟನ್‌ನ ಬಗ್ಗೆ ಹೆಚ್ಚು ಪ್ರಚಾರ ನಡೆಯುತ್ತಿಲ್ಲ. ಮತದಾರರನ್ನು ಇಂಥ ಅವಕಾಶವಿದೆ ಎಂಬುದರಿಂದಲೇ ದೂರವಿಡುವ ಕಾರ್ಯ ನಡೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮ ನಡೆದರೆ ಪಕ್ಷಗಳು ಮತದಾರರಿಂದ ತಿರಸ್ಕರಿಸಲ್ಪಡಬಹುದು ಎಂಬ ಭೀತಿಯಲ್ಲಿ ವಿವಿಧ ರಾಜಕೀಯ ಪಕ್ಷಗಳಿವೆ. ಹಾಗಾಗಿಯೇ ಅಧಿಕಾರಿಗಳ ಮೇಲೆ ಹೆಚ್ಚು ಪ್ರಚಾರ ಮಾಡದಂತೆ ಒತ್ತಡ ಹೇರಿರುವ ಸಾಧ್ಯತೆಯ ಬಗ್ಗೆಯೇ ಸಂದೇಹ ವ್ಯಕ್ತವಾಗಿದೆ.
ಮತದಾರರಿಗೆ ಮಾಹಿತಿ ನೀಡದೇ ಇಂಥ ಅವಕಾಶವಿದೆ ಎಂಬುದು ಮತದಾರರಿಗೆ ಗೊತ್ತಾಗುವುದಾದರೂ ಹೇಗೆ ಎಂಬುದು ಪ್ರಜ್ಞಾವಂತರ ಪ್ರಶ್ನೆ.
ಏನಿದು ನೋಟಾ?
ಸುಪ್ರೀಂಕೋರ್ಟ್‌ನ ಆದೇಶದಂತೆ ಇತ್ತೀಚೆಗೆ ಮತಯಂತ್ರದಲ್ಲಿ ನೋಟಾ(ಮೇಲಿನವರಾರೂ ಅಲ್ಲ) ಎಂಬ ಬಟನ್ ಸೇರಿಸಲಾಗಿದೆ. ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಯಾರಿಗೂ ಮತದಾನ ಮಾಡಲು ಮತದಾರನಿಗೆ ಆಸಕ್ತಿ ಇಲ್ಲದಿದ್ದಲ್ಲಿ ಅಥವಾ ಕಣದಲ್ಲಿರುವ ಯಾವೊಬ್ಬ ಅಭ್ಯರ್ಥಿಯೂ ಮತದಾರರಿಗೆ ತಮ್ಮ ನಾಯಕನಾಗಲು ಅರ್ಹನಲ್ಲ ಎನಿಸಿದರೆ ಅಂಥ ಮತದಾರ ನೋಟಾ(ನನ್ ಆಫ್ ದಿ ಅಬೋವ್) ಬಟನ್ ಒತ್ತುವ ಮೂಲಕ ಹಕ್ಕು ಚಲಾಯಿಸಬಹುದು.

ಜಗನ್ನಾಥ ಆರ್. ದೇಸಾಯಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement