ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಂತಿಮವಾಗಿ ತೊಡೆ ತಟ್ಟಿದ 11 ಕಲಿಗಳು

Vishwanath S
Updated On : 30 Mar 2014, 12:28 pm

ರಾಯಚೂರು ಎಸ್‌ಟಿ ಮೀಸಲು ಲೋಕಸಭೆ ಕ್ಷೇತ್ರಕ್ಕೆ ಏ.17ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕಡೆಯ ದಿನವಾದ ಶನಿವಾರ, ಪಕ್ಷೇತರ ಅಭ್ಯರ್ಥಿ ಬಸವಂತಪ್ಪ ಎಂಬುವವರು ಮಾತ್ರ ಸ್ಪರ್ಧೆಯಿಂದ ಹಿಂದೆ ಸರಿಯುವ ಮೂಲಕ 11 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಂತಾಗಿದೆ. ರಾಯಚೂರು ಕ್ಷೇತ್ರದ ಚುನಾವಣೆಗೆ ಒಟ್ಟು 13 ಅಭ್ಯರ್ಥಿಗಳು 22 ನಾಮಪತ್ರ ಸಲ್ಲಿಸಿದ್ದರು. ಆ ಪೈಕಿ ನಾಮಪತ್ರ ಪರಿಶೀಲನೆ ವೇಳೆ ಪಕ್ಷೇತರ ಯಲ್ಲಯ್ಯ ಪಾಟೀಲ್ ನಾಮಪತ್ರ ತಿರಸ್ಕೃತಗೊಂಡಿತ್ತು. ನಾಮಪತ್ರ ವಾಪಸ್ ಪಡೆಯುವ ಅವಧಿ ಶನಿವಾರ ಮುಗಿದಿದ್ದು, ಅಖಾಡದಲ್ಲಿ 11 ಜನ ಸ್ಪರ್ಧೆಯಲ್ಲಿದ್ದಾರೆ.

ಕಣದಲ್ಲಿ ಉಳಿದವರು
ಕಾಂಗ್ರೆಸ್‌ನ ಬಿ.ವಿ. ನಾಯಕ, ಬಿಜೆಪಿಯ ಶಿವನಗೌಡ ನಾಯಕ, ಜೆಡಿಎಸ್‌ನ ಡಿ.ಬಿ. ನಾಯಕ, ಆಮ್ ಆದ್ಮಿ ಪಾರ್ಟಿಯ ಭೀಮರಾಯ, ಬಿಎಸ್ಪಿಯ ರಾಜಾ ತಿಮ್ಮಪ್ಪ ನಾಯಕ, ಎಸ್ ಯುಸಿಐ-ಸಿ ಪಕ್ಷದ ಕೆ.ಸೋಮಶೇಖರ್ ಯಾದಗಿರಿ, ಸಿಪಿಎಂಎಲ್ ರೆಡ್‌ಸ್ಟಾರ್ ಪಕ್ಷದ ನಾಗರಾಜ್, ಲೋಕಸತ್ತಾ ಪಾರ್ಟಿಯ ಭಗವಂತಪ್ಪ, ಪಕ್ಷೇತರ ಚಿನ್ನಯ್ಯ ನಾಯಕ, ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾದ ರಂಗನಾಯಕ ಹಾಗೂ ನ್ಯಾಷನಲ್ ಡೆವಲಪ್ ಮೆಂಟ್ ಪಾರ್ಟಿಯ ಮಾರುತಿ ಸದ್ಯ ಕಣದಲ್ಲಿ ಉಳಿದಿದ್ದಾರೆ.

ಒಟ್ಟು ಕ್ಷೇತ್ರಗಳು
ಈ ಕ್ಷೇತ್ರವು ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಒಟ್ಟು 8 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. ರಾಯಚೂರು ನಗರ, ರಾಯಚೂರು ಗ್ರಾಮೀಣ(ಎಸ್ಟಿ), ಮಾನವಿ(ಎಸ್ಟಿ) ಲಿಂಗಸ್ಗೂರು(ಎಸ್ಸಿ), ದೇವದುರ್ಗ(ಎಸ್ಟಿ) ಕ್ಷೇತ್ರಗಳಿವೆ. ಹಾಗೆಯೇ ಯಾದಗಿರಿ ಜಿಲ್ಲೆಯ ಯಾದಗಿರಿ, ಸುರಪುರ(ಎಸ್ಟಿ), ಶಹಾಪುರ ಕ್ಷೇತ್ರಗಳು ಈ ಲೋಕಸಭೆ ವ್ಯಾಪ್ತಿಗೆ ಸೇರಿವೆ. ಲೋಕಸಭೆ ಕ್ಷೇತ್ರದ ಒಟ್ಟು 8 ವಿಧಾನಸಭೆ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಎರಡರಲ್ಲಿ ಜೆಡಿಎಸ್, ಒಂದರಲ್ಲಿ ಬಿಜೆಪಿ ಮತ್ತು ಒಂದರಲ್ಲಿ ಕೆಜೆಪಿ ಶಾಸಕರಿದ್ದಾರೆ.

ಮತದಾರರ ವಿವರ
ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 16,10,427 ಮತದಾರರಿದ್ದು, ಇವರಲ್ಲಿ 8,10,026 ಪುರುಷರು ಹಾಗೂ 8,00,121 ಮಹಿಳಾ ಮತದಾರರಿದ್ದಾರೆ. 280 ಜನ ಲೈಂಗಿಕ ಅಲ್ಪಸಂಖ್ಯಾತರೂ ಸೇರ್ಪಡೆಗೊಂಡಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಒಟ್ಟು ಮತದಾರರ ಸಂಖ್ಯೆಯಲ್ಲಿ 1,24,307 ಜನ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ರಾಯಚೂರು ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 9,90,007 ಮತದಾರರಿದ್ದಾರೆ. ಅದರಲ್ಲಿ 4,97,037 ಪುರುಷ, 4,92,970 ಮಹಿಳಾ ಮತದಾರರಿದ್ದಾರೆ. 236 ಜನ ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ. ಇನ್ನು ಯಾದಗಿರಿ ಜಿಲ್ಲೆಯ ವ್ಯಾಪ್ತಿಯ ಮೂರು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 6,20,140 ಮತದಾರರಿದ್ದು ಅವರಲ್ಲಿ 3,12,989 ಪುರುಷ, 3,07,151 ಮಹಿಳಾ ಮತದಾರರಿದ್ದಾರೆ. 44 ಜನ ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ.

ಜಾತಿವಾರು ಲೆಕ್ಕಾಚಾರ
ಒಟ್ಟಾರೆ ಕ್ಷೇತ್ರದಲ್ಲಿ ಅಂದಾಜಿನಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ತಲಾ ಸುಮಾರು 3 ಲಕ್ಷ, ಕುರುಬ ಸಮಾಜದ 2.50 ಲಕ್ಷ, ಮುಸ್ಲಿಂ- 2.50 ಲಕ್ಷ, ಲಿಂಗಾಯತ- 2.50 ಲಕ್ಷ, ಗಂಗಾಮತಸ್ಥರು- 1.80 ಲಕ್ಷ, ಇತರೆ ಸುಮಾರು ಮೂರು ಲಕ್ಷ ಮತದಾರರಿದ್ದಾರೆಂದು ಹೇಳಲಾಗುತ್ತಿದೆ. ಎಸ್ಟಿಗೆ ಕ್ಷೇತ್ರ ಮೀಸಲಾಗಿದ್ದು, ಎಲ್ಲರೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳೇ ಕಣದಲ್ಲಿರುವುದರಿಂದ ಅನ್ಯ ಸಮುದಾಯಗಳ ಓಲೈಕೆ ಅಭ್ಯರ್ಥಿಗಳಿಗಿಲ್ಲಿ ಅನಿವಾರ್ಯ. ಹಾಗೆಯೇ ಮತ ವಿಭಜನೆಯೇ ಫಲಿತಾಂಶದ ಪ್ರಮುಖಾಂಶವಾಗುವುದರಲ್ಲಿ ಸಂದೇಹವಿಲ್ಲ.

ರಾಜಕೀಯ ಚುರುಕು
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಇನ್ನು ಮುಂದೆ ರಾಜಕೀಯ ಚಟುವಟಿಕೆ ಚುರುಕುಗೊಳ್ಳಲಿದ್ದು ಚುನಾವಣೆ ಕಣ ರಂಗೇರಲಿದೆ. ಅಬ್ಬರದ ಪ್ರಚಾರ, ಆರೋಪ- ಪ್ರತ್ಯಾರೋಪಗಳಿಗೆ ಲೋಕಸಭೆ ಕ್ಷೇತ್ರವು ಸಾಕ್ಷಿಯಾಗಲಿದೆ.
- ಪಕ್ಷೇತರನಾಗಿದ್ದ ಕೆ. ಬಸವಂತಪ್ಪ ಮಾತ್ರ ನಾಮಪತ್ರ ಹಿಂತೆಗೆತ, ಇನ್ನೊಬ್ಬನ ನಾಮಪತ್ರ ತಿರಸ್ಕೃತ
-  ರಾಯಚೂರು ಎಸ್ಟಿ ಮೀಸಲು ಕ್ಷೇತ್ರ ೤ ಒಟ್ಟು 13 ಉಮೇದುವಾರರ ಪೈಕಿ 11 ಜನರ ಮಧ್ಯೆ ಸ್ಪರ್ಧೆ
-  ಒಟ್ಟು ಮತದಾರರು- 16,10,427, ಪುರುಷರು- 8,10,026, ಮಹಿಳೆಯರು- 8,00,121
-  ರಾಯಚೂರು ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳಲ್ಲಿ 9,90,007 ಮತದಾರರು
-  ಯಾದಗಿರಿ ಜಿಲ್ಲೆ ವ್ಯಾಪ್ತಿಯ 3 ವಿಧಾನಸಭಾ ಕ್ಷೇತ್ರಗಳಲ್ಲಿ 6,20,140 ಮತಗಳು
-  ಎಸ್ಟಿಗೆ ಸೇರಿದ ಅಭ್ಯರ್ಥಿಗಳೇ ಕಣದಲ್ಲಿದ್ದು ಅನ್ಯ ಸಮುದಾಯಗಳ ಓಲೈಕೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement