ಮತದಾನ ಜಾಗೃತಿ ಕಾರ್ಯಕ್ರಮ ಯಶಸ್ವಿ
ರಾಯಚೂರು: ನಗರದ ಟ್ಯಾಗೋರ್ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಮತದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಮಾತನಾಡಿ, 18 ವರ್ಷ ಮೇಲ್ಪಟ್ಟ ಎಲ್ಲರೂ ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯ ಮತದಾನ ಮಾಡಬೇಕು ಎಂದು ಕರೆ ನೀಡಿದರು. ಈ ವೇಳೆ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆಯನ್ನು ಸಹ ಇದೇ ವೇಳೆ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕಿ ಅಜೀಜಾ ಸುಲ್ತಾನ್, ಏಕತಾ ಮಹಿಳಾ ಸಂಘದ ಅಧ್ಯಕ್ಷೆ ಮುನಿಬೇಗಂ, ಸೇವಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸದಾನಂದ ಪೂಜಾರಿ, ವಾರ್ತಾಧಿಕಾರಿ ಟಿ. ಕನುಮಪ್ಪ ಸೇರಿ ಅನೇಕರಿದ್ದರು. ಶಾಲೆಯ ಮುಖ್ಯಸ್ಥರಾದ ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.
ಮತದಾನ ಜಾಗೃತಿಗೆ ಸೈಕಲ್ ಜಾಥಾ ಏ.3ಕ್ಕೆ
ರಾಯಚೂರು: ನಗರದಲ್ಲಿ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಜಾಗೃತಿ ಸೈಕಲ್ ಜಾಥಾ ಏ.3ರಂದು ಆಯೋಜಿಸಲಾಗಿದೆ. ಅಂದು ಬೆಳಗ್ಗೆ 8ಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಸೈಕಲ್ ಜಾಥಾ ನಡೆಯಲಿದ್ದು, ಜಾಥಾಕ್ಕೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಚಾಲನೆ ನೀಡಲಿದ್ದಾರೆ. ಜಿಪಂ ಸಿಇಒ ವಿಜಯ ಜೋತ್ಸ್ನಾ ಪಾಲ್ಗೊಳ್ಳಲಿದ್ದು, ಜಾಥಾ ನಗರದ ನಗರಸಭೆ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಬಸವೇಶ್ವರ ಸರ್ಕಲ್ ಮೂಲಕ ನಿಜಲಿಂಗಪ್ಪ ಕಾಲೋನಿ ತಲುಪಿ, ಎಟಿಎಂ ಸರ್ಕಲ್ನಲ್ಲಿ ಮತದಾನದ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಸಮಾರೋಪಗೊಳ್ಳಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಸೈಕಲ್ ಜಾಥಾದಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿಗಳು, ಎನ್ನೆಸ್ಸೆಸ್ ಮತ್ತು ಎನ್ಇಸಿ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಕರವೇ ಗ್ರಾಮ ಆಟೋ ಘಟಕ ಅಸ್ತಿತ್ವಕ್ಕೆ
ರಾಯಚೂರು: ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ತಾಲೂಕಿನ ಎಲೆಬಿಚ್ಚಾಲಿ ಗ್ರಾಮದ ಆಟೋ ಘಟಕವನ್ನು ಇತ್ತೀಚೆಗೆ ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘಟನೆ ತಿಳಿಸಿದೆ. ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಜೈನ್ ಘಟಕದ ನಾಮಫಲಕ ಹಾಗೂ ಸಂಘಟನೆಯನ್ನು ಉದ್ಘಾಟಿಸಿ ಆಟೋಗಳ ಚಾಲಕರು ಕಡ್ಡಾಯವಾಗಿ ಕಾನೂನು ಪಾಲಿಸಬೇಕು. ವಾಹನಗಳ ದಾಖಲೆಗಳನ್ನು ಹೊಂದುವುದು ಅವಶ್ಯ. ದುಶ್ಚಟಗಳಿಂದ ದೂರವಿದ್ದು, ಶಿಸ್ತುಬದ್ಧ ಬದುಕು ರೂಪಿಸಿಕೊಳ್ಳಲು ಕರೆ ನೀಡಿದರು. ಕೊಪ್ಪಳ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿಪ್ರಿಯಾ ಮಾತನಾಡಿದರು. ನೂತನ ಆಟೋ ಘಟಕದ ಅಧ್ಯಕ್ಷ ಸೀತಾರಾಮ ಬಿಚ್ಚಾಲಿ ಅವರನ್ನು ಈ ವೇಳೆ ಸನ್ಮಾನಿಸಲಾಯಿತು. ಬಿಚ್ಚಾಲಿ ಘಟಕದ ಅಧ್ಯಕ್ಷ ನಾಗೇಶಸ್ವಾಮಿ ಸೇರಿದಂತೆ, ಘಟಕದ ಪದಾಧಿಕಾರಿಗಳು ಹಾಗೂ ವಿವಿಧೆಡೆಯಿಂದ ಆಗಮಿಸಿದ್ದ ಕಾರ್ಯಕರ್ತರಿದ್ದರು.
ಭಾವೈಕ್ಯತಾ ಶಿಬಿರ ಜಾಥಾಕ್ಕೆ ಚಾಲನೆ
ರಾಯಚೂರು: ತಾಲೂಕಿನ ದೇವಸೂಗೂರು ಗ್ರಾಮದಲ್ಲಿ ಇತ್ತೀಚೆಗೆ ನೆಹರು ಯುವ ಕೇಂದ್ರದಿಂದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಜಾಥಾಕ್ಕೆ ಚಾಲನೆ ನೀಡಿ, ದೇಶದ ವಿವಿಧ ರಾಜ್ಯಗಳು ಕಲೆ, ಸಂಸ್ಕೃತಿಯ ತವರೂರಾಗಿದೆ ಎಂದ ಅವರು, ಕಡ್ಡಾಯ ಮತದಾನದ ಮಹತ್ವ ಕುರಿತು ತಿಳಿ ಹೇಳಿದರು. ನೆಹರು ಯುವ ಕೇಂದ್ರದ ಪ್ರಮುಖ ಜಿ.ಎಸ್. ಹಿರೇಮಠ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್. ಇಂದಿರಾ, ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಆರ್.ಎಸ್. ಕಣಬರಗಿ, ಯುನಿಸೆಫ್ ಯೋಜನಾಧಿಕಾರಿ ರಾಘವೇಂದ್ರ ಭಟ್, ರಾಚಯ್ಯ ಸ್ವಾಮಿ, ಸುರೇಶ್ ಗೌಡ ಸೇರಿದಂತೆ ಅನೇಕರಿದ್ದರು. ಯುವಕ ಸಂಘದ ಪದಾಧಿಕಾರಿಗಳಿದ್ದರು. ದೇವಸೂಗೂರು ಗ್ರಾಮದ ಸೂಗೂರೇಶ್ವರ ಯುವಕ ಸಂಘ, ಜಿಲ್ಲಾಡಳಿತ ಮತ್ತು ನೆಹರು ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಂಗ್ರೆಸ್ ಹೆಚ್ಚುವರಿ ಪದಾಧಿಕಾರಿಗಳ ನೇಮಕ
ರಾಯಚೂರು: ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಹೆಚ್ಚುವರಿ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್, ಹೆಚ್ಚುವರಿ ಉಪಾಧ್ಯಕ್ಷರಾಗಿ ಬಾಳಪ್ಪ ನಾಯಕ್, ಅಯ್ಯಾಲಪ್ಪ, ಚುಕ್ಕಿಸೂಗಪ್ಪ, ನಾಗನಗೌಡ ಹರವಿ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗಳಾಗಿ ರಾಜಶೇಖರ್ ರಾಮಸ್ವಾಮಿ, ಎಚ್. ಬಸವರಾಜ್ ಪಂಪಾಪತಿ, ಜಿಂದಪ್ಪ, ಮಲ್ಲೇಶ್ ನೇಮಕಗೊಂಡಿದ್ದಾರೆಂದು ತಿಳಿಸಿದ್ದಾರೆ. ಅದೇ ರೀತಿ ಪಕ್ಷದ ಹೆಚ್ಚುವರಿ ಕಾರ್ಯದರ್ಶಿಗಳಾಗಿ ಹನುಮಂತಪ್ಪ ನಾಯಕ್, ಜೆ. ತಿಮ್ಮಪ್ಪ, ಖಾಲೀದ್ ಜುಮ್ಮಾ, ಲಿಂಗರಾಜು ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ ಅವರ ಅನುಮೋದನೆ ಮೇರೆಗೆ ಹೆಚ್ಚುವರಿ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂತ ಸೇವಾಲಾಲ್ ವೃತ ದೀಕ್ಷಾ ಅಭಿಯಾನ ಇಂದು
ಲಿಂಗಸ್ಗೂರು: ತಾಲೂಕಿನ ಗೋನವಾಟ್ಲ ತಾಂಡಾದಲ್ಲಿ ಡಾ. ರಾಮರಾವ್ ಮಹಾರಾಜರ ಆದೇಶಾನುಸಾರ ಅಫಜಲ್ಪುರ ತಾಲೂಕಿನ ಗೊಬ್ಬುರವಾಡಿಯ ಬಳಿರಾಮ ಮಹಾರಾಜರ ನೇತೃತ್ವದಲ್ಲಿ ಮಾ.29ರಂದು ಸಂತ ಸೇವಾಲಾಲ್ ಮಹಾರಾಜರ ವೃತ ದೀಕ್ಷಾ ಅಭಿಯಾನ ಆಯೋಜಿಸಲಾಗಿದೆ. ಬೆಳಗ್ಗೆ 11ಕ್ಕೆ ಸಂತ ಸೇವಾಲಾಲ್ ಮಹಾರಾಜರ ವೃತ ದೀಕ್ಷಾ ಕಾರ್ಯಕ್ರಮ ಆಯೋಜಿಸಿದ್ದು, ಏ.8ರಂದು ರಾಮನವಮಿ ದಿನ ಬಂಜಾರಾ ಸಮಾಜ ಬಾಂಧವರು ಪೋಹಾರಾದೇವಿಯ ಧಾರ್ಮಿಕ ಭಕ್ತ ಸಮ್ಮೇಳನ ಜರುಗಲಿದೆ ಎಂದು ಅಖಿಲ ಭಾರತೀಯ ಬಂಜಾರಾ ಶಕ್ತಿ ಪೀಠ ಪೋಹರಾದೇವಿ, ಮಹಾರಾಷ್ಟ್ರ ಹಾಗೂ ಸದ್ಗುರು ಸೇವಾಲಾಲ್ ಸಂಸ್ಥಾನ ಮಠ, ಗೊಬ್ಬುರವಾಡಿ ಭಕ್ತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕುರುಬರ ನೌಕರರ ಸಂಘದ ಪದಾಧಿಕಾರಿಗಳು
ರಾಯಚೂರು: ತಾಲೂಕು ಕುರುಬರ ನೌಕರರ ಸಂಘದ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಗುರುಲಿಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕು ಸಂಘಕ್ಕೆ ಅಧ್ಯಕ್ಷರಾಗಿ ಡಿ. ವೆಂಕಟೇಶ ಜಾಲಿಬೆಂಚಿ, ಪ್ರಧಾನ ಕಾರ್ಯದರ್ಶಿಯಾಗಿ ಶಾಮಣ್ಣ ಮಾಚನೂರು, ಖಜಾಂಚಿಯಾಗಿ ರಾಮಣ್ಣ ಪೂಜಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ಈ ವೇಳೆ 2014ರ ಜೂನ್ನಲ್ಲಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶಿಷ್ಯ ವೇತನ ನೀಡಿಕೆ, ಸಮಾಜಕ್ಕೆ ಉತ್ತಮ ಸೇವೆ ನೀಡಿದವರನ್ನು ಸನ್ಮಾನಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಮಾಜದ ಜಾಗೃತಿ ಕುರಿತು ಚಿಂತನಾ ಗೋಷ್ಠಿ, ಹಾಲುಮತದ ದಾರ್ಶನಿಕರ ಜಯಂತಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಭೆ ನಿರ್ಧರಿಸಿತು. ಸಭೆಯಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ್ ದಿನ್ನಿ, ರಾಜ್ಯ ಪ್ರದೇಶ ಕುರುಬರ ಸಂಘದ ನಿರ್ದೇಶಕ ಮಹಾದೇವಪ್ಪ ಮಿರ್ಜಾಪುರ, ಖ್ಯಾತ ದಂತ ವೈದ್ಯ ಶಾಮಣ್ಣ ಮಾಚನೂರು, ರವೀಂದ್ರ ಕುರಿ, ಮಲ್ಲಪ್ಪ ಮಂಚಲಾಪುರ ಸೇರಿ ಅನೇಕರಿದ್ದರು.
ಮತದಾರರ ಜಾಗೃತಿ ಕುರಿತು ಬೈಕ್ ರ್ಯಾಲಿ
ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಏ.17ರಂದು ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ನಗರದ ವೀರಸಾವರ್ಕರ್ ಯೂತ್ ಅಸೋಸಿಯೇಷನ್ ವತಿಯಿಂದ ಮತದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ತೀನ್ ಕಂದೀಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಯೂತ್ ಅಸೋಸಿಯೇಷನ್ ಕಾರ್ಯಕರ್ತರು ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಡ್ಡಾಯ ಮತದಾನದಿಂದಾಗುವ ಪ್ರಯೋಜನಗಳ ಕುರಿತ ಘೋಷಣೆ ಕೂಗುತ್ತಾ ಬೈಕ್ ರ್ಯಾಲಿ ನಡೆಸಿದರು. ಕಾರ್ಯಕ್ರಮದಲ್ಲಿ ಸಂಘದ ಸಂಸ್ಥಾಪಕರಾದ ಎನ್. ವಿನಾಯಕರಾವ್, ಅಧ್ಯಕ್ಷ ಪ್ರಶಾಂತಗೌಡ, ಶಶಿಧರ್ ಮಸ್ಕಿ, ಸಂದೀಪ್ ಸಿಂಗನೋಡಿ, ರವಿಕುಮಾರ ಕಾವಲಿ, ಭರತ್ಕುಮಾರ್ ತೊರಸಿ, ಶ್ರೀಕಾಂತ ಬಾಲಿ, ರಾಘವೇಂದ್ರ ಚಕ್ರವರ್ತಿ, ವಿಠ್ಠಲ್, ಶ್ರೀಕಾಂತ್ ಪಟ್ಟಿ ಸೇರಿದಂತೆ ಅನೇಕರಿದ್ದರು.
ವಿಶೇಷ ಘಟಕ ಯೋಜನೆ ಅನುದಾನಕ್ಕೆ ಆಗ್ರಹ
ಲಿಂಗಸ್ಗೂರು: ತಾಲೂಕಿನ ಗಿರಿಜನ ಉಪ ಯೋಜನೆ ಮತ್ತು ವಿಶೇಷ ಘಟಕ ಯೋಜನೆಯಡಿ ವಿವಿಧ ಇಲಾಖೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುದಾನ ಬಿಡುಗಡೆ ಮಾಡುವಂತೆ ಮುಖಂಡರು ಒತ್ತಾಯಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಫಲಾನುಭವಿಗಳಿಗೆ ನೀರಾವರಿ ವಂಚಿತ ಪ್ರದೇಶಗಳಿಗೆ ನೀರಾವರಿ ಒದಗಿಸುವುದು, ಗ್ರಾಮ, ತಾಂಡಾಗಳಲ್ಲಿ ಹರಿಜನ ಕಾಲೋನಿಗಳಲ್ಲಿ ಉತ್ತಮ ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸುವುದು, ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕಳೆದ ವರ್ಷ ಕೈಗೊಳ್ಳಲಾಗಿತ್ತು. ಅದೇ ರೀತಿಯಲ್ಲಿ ಪ್ರಸಕ್ತ ವರ್ಷವೂ ಸಹ ಕೆಬಿಜೆಎನ್ಎಲ್ಗೆ ಅನುದಾನ ಲಭ್ಯವಿಲ್ಲದ ಕಾರಣ ಹೆಚ್ಚಿನ ನೀರಾವರಿ ವಂಚಿತ ಪ್ರದೇಶಗಳನ್ನು ಗುರುತಿಸಿ ಅವುಗಳಿಗೆ ಸೌಲಭ್ಯ ದೊರಕಿಸಲು ಸಾಧ್ಯವಾಗುತ್ತಿಲ್ಲ. ಕಾರಣ ಇಲಾಖೆಗಳಿಗೆ ಕಾರ್ಯಕ್ರಮಗಳ ಆಧಾರದ ಮೇಲೆ ಅನುದಾನ ಕೂಡಲೇ ಒದಗಿಸುವಂತೆ ಮುಖಂಡರಾದ ರಾಮು ನಾಯಕ ಪಾಳೇಗಾರ, ರಾಜಾ ಸೇತುರಾಮ ನಾಯಕ, ರಾಜಾ ಗುರುರಾಜ ನಾಯಕ, ಅಮರೇಶ ರತ್ನಗಿರಿ, ಆದಪ್ಪ ಪೂಜಾರಿ, ಮಾನಪ್ಪ ಕುಂಬಾರ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಚುನಾವಣೆ ಅಧಿಕಾರಿಗಳಿಗೆ ತರಬೇತಿ
ಲಿಂಗಸ್ಗೂರು: ಪಟ್ಟಣದ ಕೆಕೆಎಸ್ಆರ್ ಚಿತ್ರಮಂದಿರದಲ್ಲಿ ಲೋಕಸಭೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ಹಾಗೂ ನೌಕರರಿಗೆ ಚುನಾವಣಾ ತರಬೇತಿ ಕಾರ್ಯಕ್ರಮ ಶನಿವಾರ ಜರುಗಿತು. ಕಾರ್ಯಕ್ರಮದಲ್ಲಿ ಲಿಂಗಸ್ಗೂರು ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ, ಎಸಿಟಿ ಯೋಗೇಶ್ ಹಾಗೂ ಮಸ್ಕಿ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಎಸ್.ಕುಮಾರಸ್ವಾಮಿ ಅವರು ಚುನಾವಣಾ ಕುರಿತು ಮಾಹಿತಿ ನೀಡಿದರು. ಈ ವೇಳೆ ಉಪತಹಸೀಲ್ದಾರ್ ಖಾಜಾ ಹುಸೇನ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ಬಿರಾದಾರ, ಸರ್ವೆ ಇಲಾಖೆ ಅಧಿಕಾರಿ ಸೃಜಯ್, ಉಪನ್ಯಾಸಕರಾದ ಜಿ.ವಿ. ಕೆಂಚನಗುಡ್ಡ, ಚಂದ್ರಶೇಖರಗೌಡ, ಯಲ್ಲಪ್ಪ ಈಳಿಗೇರ ಸೇರಿದಂತೆ ಇದ್ದರು.
ಪಕ್ಷಾಂತರಿಗಳಿಗೆ ಪಾಠ ಕಲಿಸಲು ಪಾಟೀಲ್ ಕರೆ
ಲಿಂಗಸ್ಗೂರು: ದೇಶದ ರಾಜಕಾರಣದಲ್ಲಿ ಪಕ್ಷಾಂತರ ಪಿಡುಗು ಹೆಚ್ಚುತ್ತಿರುವ ಹಿನ್ನೆಲೆ ಪಕ್ಷಾಂತರಿಗಳಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವಂತೆ ರಾಜ್ಯ ರೈತ ಸಂಘದ ಮುಖಂಡ ಸಿದ್ದಲಿಂಗೇಶ್ವರ ಪಾಟೀಲ್ ಮನವಿ ಮಾಡಿದ್ದಾರೆ. ರಾಜಕೀಯದಲ್ಲಿರುವ ಅವಕಾಶವಾದಿಗಳು ಕುಂಟುನೆಪ ಹೇಳಿ ಪಕ್ಷದಿಂದ ಪಕ್ಷಕ್ಕೆ ವಲಸೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಲೋಕಸಭೆ, ವಿಧಾನಸಭೆ, ಎಂಎಲ್ಸಿ ಚುನಾವಣೆ ಸೇರಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಏನೆಲ್ಲ ಸಬೂಬು ಹೇಳಿ ಪಕ್ಷಾಂತರದಲ್ಲಿ ತೊಡಗುತ್ತಿದ್ದಾರೆ. ಅದರಿಂದ ಪಕ್ಷ ನಿಷ್ಠರಿಗೆ ಬೆಲೆಯಿಲ್ಲದಂತಾಗಿದೆ. ಇಂತಹ ಮೋಸದ ಮಾತುಗಳಿಗೆ ಕಿವಿಗೊಡದೆ ಚುನಾವಣೆಯಲ್ಲಿ ಜನತೆ ಯಾವುದೇ ಆಮಿಷಗಳಿಗೆ ಒಳಗಾಗದೇ ವಲಸೆ ರಾಜಕಾರಣಿಗಳಿಗೆ ಬುದ್ಧಿ ಕಲಿಸಬೇಕೆಂದು ಕರೆ ನೀಡಿದ್ದಾರೆ.
ದಲ್ಲಾಳಿ ಪಕ್ಷಗಳನ್ನು ತಿರಸ್ಕರಿಸಿ: ಪೂಜಾರ
ಸಿಂಧನೂರು: ಬಂಡವಾಳಶಾಹಿಗಳು, ಬಹುರಾಷ್ಟ್ರೀಯ ಕಂಪನಿಗಳು, ಉದ್ದಿಮೆದಾರರ ಹಿತ ಕಾಯುವ ಕಾಂಗ್ರೆಸ್, ಬಿಜೆಪಿಯನ್ನು ಜನರು ತಿರಸ್ಕರಿಸಬೇಕೆಂದು ಸಿಪಿಐನ ಕೊಪ್ಪಳ ಲೋಕಸಭಾ ಅಭ್ಯರ್ಥಿ ಡಿ.ಹೆಚ್.ಪೂಜಾರ ಹೇಳಿದರು. ಖಾಸಗಿ ವಸತಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ನಿರ್ಮಾಣ ಹೆಸರಿನಲ್ಲಿ ಹೊರಟಿರುವ ಕಾಂಗ್ರೆಸ್ ಇಲ್ಲಿಯವರೆಗೆ ಮಾಡಿದ್ದೇನು? ಮುಖೇಶ ಅಂಬಾನಿ, ರಿಲಯನ್ಸ್ ಗ್ರೂಪ್ ನಿರ್ಮಾಣಕ್ಕೆ ಮುಂದಾಗಿದೆ. ಇನ್ನೂ ಬಿಜೆಪಿಯ ನರೇಂದ್ರ ಮೋದಿ ಭಾರತ ಗೆಲ್ಲಿಸಿ ಎಂದು ಹೊರಟಿರುವುದು ಹಾಸ್ಯಾಸ್ಪದ. 10 ವರ್ಷದ ಹಿಂದೆ ವಾಜಪೇಯಿ ಭಾರತ ಪ್ರಕಾಶಿಸುತ್ತದೆ ಎಂದು ಹೇಳಿ ಟಾಟಾ ಹಾಗೂ ಲಕ್ಷ್ಮೀ ಮಿತ್ತಲ್ ಗುಂಪುಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ಮೋದಿ ಗುಜರಾತಿನಲ್ಲಿ ಎಲ್ಲಿ... ಎಷ್ಟು ಭೂಮಿಯನ್ನಾದರೂ ಖರೀದಿ ಮಾಡಬಹುದು ಎನ್ನುವ ಎನ್ನುವ ನೀತಿ ಜಾರಿಗೆ ತಂದಿದ್ದಾರೆ ಇದರಿಂದಾಗಿ ರೈತರು ಭೂಮಿ ಕಳೆದುಕೊಳ್ಳುತ್ತಿದ್ದಾರೆ. ರು. 1ಲಕ್ಷ ಕೋಟಿಯನ್ನು ಸಾಲ ತಂದು ಮೂಲಭೂತ ಸೌಲಭ್ಯ ಒದಗಿಸಲು ಮುಂದಾಗಿರುವದನ್ನು ಅಭಿವೃದ್ಧಿ ಎನ್ನಲು ಸಾಧ್ಯವಿಲ್ಲ. ಇದನ್ನೆಲ್ಲಾ ಮತದಾರರು ಯೋಚಿಸಬೇಕು ಎಂದು ಮನವಿ ಮಾಡಿದರು.
'ದಾಸ ಪರಂಪರೆಯಿಂದ ಸಾಹಿತ್ಯ ಸೌಧ ನಿರ್ಮಾಣ'
ದೇವದುರ್ಗ: ಅನೇಕ ಮಹಾನ್ ದಾಸ ಸಾಹಿತ್ಯ ಪರಂಪರೆಯಲ್ಲಿ ಬಂದ ಎಲ್ಲ ಮಹನೀಯರು ಕಟ್ಟಿಕೊಡುವ ಮೂಲಕ ದಾಸ ಸಾಹಿತ್ಯದ ಸೌಧ ವಿಕಾಸಗೊಂಡಿತೆಂದು ಶಿಕ್ಷಕ ಗೋಪಾಲದಾಸ್ ಅಭಿಪ್ರಾಯಪಟ್ಟರು. ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ದೇವದುರ್ಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾತೋಶ್ರೀ ಎ. ಮಲ್ಲಮ್ಮ ಶರಣಮ್ಮ ಪಾಟೀಲ್ ಮಹಿಳಾ ಪದವಿ ಕಲಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಿವಿಧ ದತ್ತಿ ಕಾರ್ಯಕ್ರಮಗಳಲ್ಲಿ ಮಾತನಾಡಿದರು. ಶರಣ ಸಾಹಿತ್ಯ ಕುರಿತು ನಿವೃತ್ತ ಶಿಕ್ಷಕ ಎಚ್. ದಂಡಪ್ಪ ಮಾತನಾಡಿ, ಬಸವಾದಿ ಶರಣರು ದೇವ ಭಾಷೆಯೆನಿಸಿದ ಸಂಸ್ಕೃತವನ್ನು ಬಿಟ್ಟು, ಜನಸಾಮಾನ್ಯರ ಭಾಷೆಯಾದ ಕನ್ನಡದಲ್ಲಿ ವಚನ ರಚಿಸಿದರು. ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸಿ, ದತ್ತಿದಾರರ ಮಾಹಿತಿಯನ್ನು ನೀಡಿ ಹಾಗೂ ದತ್ತಿ ದಾನಿಗಳಿಗೆ ಅಭಿನಂದಿಸಿದರು. ಅಧ್ಯಕ್ಷತೆಯನ್ನು ಎ. ಮಲ್ಲಿಕಾರ್ಜುನ ಪಾಟೀಲ್ ವಹಿಸಿ ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷ ನರಸಿಂಗರಾವ್ ಸರಕೀಲ್, ಮಹಾದೇವಪ್ಪ ಪಾಟೀಲ್ ಕೊಪ್ಪರ, ಬಿಜೆಪಿ ಮಾಜಿ ಅಧ್ಯಕ್ಷ ಸಿ.ಎಸ್. ಪಾಟೀಲ್, ಆದಿ ಕಮಲಮ್ಮ, ವನಜಾಕ್ಷಮ್ಮ ವಾರದ, ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ರಾಠೋಡ್, ಬಸವರಾಜ ಬಾಗೂರು ಇದ್ದರು.
'ಆಯೋಗದ ಸೂಚನೆಯಂತೆ ಪ್ರಾಮಾಣಿಕವಾಗಿ ಶ್ರಮಿಸಿ'
ದೇವದುರ್ಗ: ಲೋಕಸಭೆ ಚುನಾವಣೆಯ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಚುನಾವಣೆ ಆಯೋಗದ ಸೂಚನೆಯಂತೆ ಪ್ರಾಮಾಣಿಕವಾಗಿ ಶ್ರಮಿಸಲು ಸಹಾಯಕ ಚುನಾವಣಾಧಿಕಾರಿ ಡಾ. ಜಿ. ಉಮೇಶ ಸಲಹೆ ನೀಡಿದರು. ಪಟ್ಟಣದಲ್ಲಿ ಶನಿವಾರ ಚುನಾವಣೆ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಹಿಂದೆಯೇ ಚುನಾವಣೆ ಕಾರ್ಯದಲ್ಲಿ ದುಡಿದ ಅನುಭವವಿದೆ ಎಂದು ತರಬೇತಿಯಿಂದ ದೂರವುಳಿಯುವಂತಿಲ್ಲ. ಮೊದಲ ಬಾರಿಗೆ ಚುನಾವಣೆ ಕೆಲಸಕ್ಕೆ ನಿಯೋಜನೆಗೊಂಡವರು ಯಾವುದೇ ರೀತಿಯ ಗೊಂದಲವಿಲ್ಲದೇ ಕೆಲಸ ನಿರ್ವಹಿಸುವಂತೆ ಸೂಚಿಸಿದರು. ಚುನಾವಣೆ ಕಾರ್ಯಕ್ಕೆ ನೇಮಕಗೊಂಡ ಎಲ್ಲ ಸಿಬ್ಬಂದಿ ಕಾನೂನು ಮತ್ತು ಸರ್ಕಾರದ ಆದೇಶದಂತೆ ಮತ ಎಣಿಕೆ ಕಾರ್ಯ ಮುಗಿಯುವವರೆಗೆ ಪಾಲಿಸಬೇಕು. ಜಿಲ್ಲಾಡಳಿತ ಸಿಬ್ಬಂದಿಗೆ ಎಲ್ಲ ರೀತಿಯ ಮಾರ್ಗದರ್ಶನ ಮತ್ತು ಸಹಕಾರ ನೀಡಲಿದೆ ಎಂದರು. ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಮಾತನಾಡಿದರು. ಉಪನ್ಯಾಸಕ ಅಬ್ದುಲ್ ಅಜೀಜ್ ತರಬೇತಿ ನೀಡಿದರು. ಶಿರಸ್ತೇದಾರ ಹುಸೇನಪ್ಪ, ಶಂಕರ ಸೇರಿ ಅನೇಕರಿದ್ದರು.