ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಿ
ಹುಣಸಗಿ: ನಾರಾಯಣಪುರ ಎಡದಂಡೆ ಕಾಲುವೆಯ ನವೀಕರಣ ಸೇರಿದಂತೆ ಕೇಂದ್ರ ಸರ್ಕಾರ ವಿವಿಧ ಯೋಜನೆ ಜಾರಿಗೆ ತಂದಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕೆಂದು ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಮತಯಾಚಿಸಿದರು.
ಪಟ್ಟಣದ ಗಾಂಧಿ ಕಟ್ಟೆಯಲ್ಲಿ ರಾಯಚೂರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಪರ ಮತ ಯಾಚಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸುಮಾರು 4,500 ಕೋಟಿ ಅನುದಾನವನ್ನು ಎಐಬಿಪಿ ಯೋಜನೆ ಅಡಿಯಲ್ಲಿ ನೀಡಿದ್ದು ಅದರಲ್ಲಿ ಪ್ರಸಕ್ತ ಸಾಲಿನಲ್ಲಿ ಸುಮಾರು 3,600 ಕೋಟಿ ಬಿಡುಗಡೆ ಮಾಡಿದೆ. ಈ ಭಾಗದ ಸಮಗ್ರ ಅಭಿವೃದ್ಧಿಗೆ ಅನೇಕ ಸೌಲಭ್ಯ ಕಲ್ಪಿಸಿದೆ ಎಂದರು.
ರಾಜ್ಯದಲ್ಲೂ ನಮ್ಮದೇ ಸರ್ಕಾರವಿದೆ. ಕೇಂದ್ರ ಸರ್ಕಾರವೂ ನಮ್ಮದೇ ಆದರೆ ಎಲ್ಲ ಸೌಲಭ್ಯ ಪಡೆಯಲು ಸಾಧ್ಯ. ಅದಕ್ಕಾಗಿ ಅತೀ ಹೆಚ್ಚು ಕ್ರೀಯಾಶೀಲರಾಗಿ ಕಾರ್ಯಕರ್ತರು ಪಾಲ್ಗೊಂಡು ನಮ್ಮ ಸರ್ಕಾರದ ಸಾಧನೆಯನ್ನು ಮತದಾರರಿಗೆ ತಿಳಿಸಿ ಕಾಂಗ್ರೆಸ್ ಬೆಂಬಲಿಸಿ ಎಂದು ನುಡಿದರು.
ಅಭ್ಯರ್ಥಿ ಬಿ.ವಿ. ನಾಯಕ ಮಾತನಾಡಿ, ಈ ಬಾರಿ ಕೇಂದ್ರ ಸರ್ಕಾರ 371(ಜೆ) ಕಲಂ ತಿದ್ದುಪಡಿ ಮಾಡಿ ನಮ್ಮ ಹೈಕ ಭಾಗದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಿದೆ. ಗುಲ್ಬರ್ಗದಲ್ಲಿ ಇಎಸ್ಐ ಆಸ್ಪತ್ರೆ, ಗದಗ- ವಾಡಿ, ಆಲಮಟ್ಟಿ- ಯಾದಗಿರಿ ರೇಲ್ವೆ ಮಾರ್ಗ, ಯಾದಗಿರಿಯಲ್ಲಿ ರೇಲ್ವೆ ಬೋಗಿ ನಿರ್ಮಾಣ ಘಟಕ ಸೇರಿದಂತೆ ಈ ಭಾಗದ ಅಭಿವೃದ್ಧಿಗೆ ನಮ್ಮ ನಾಯಕರು ಸಾಕಷ್ಟು ಶ್ರಮಿಸಿದ್ದಾರೆ. ಇನ್ನು ಹೆಚ್ಚು ಕ್ರೀಯಾಶೀಲರಾಗಿ ಸೇವೆಸಲ್ಲಿಸಲು ಮತ್ತೆ ಕ್ಷತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ನನಗೆ ಮತ ನೀಡಿ ಎಂದು ಮನವಿ ಮಾಡಿದರು.
ಮಾಜಿ ಎಂಎಲ್ಸಿ ಬಸವರಾಜ ಪಾಟೀಲ ಇಟಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್, ಜಿಪಂ ಉಪಾಧ್ಯಕ್ಷ ಬಸನಗೌಡ ಯಡಿಯಾಪುರ, ರಾಜಶೇಖರಗೌಡ ವಜ್ಜಲ್ ಮಾತನಾಡಿದರು.