ಚಿತ್ರಕಲಾ ಪ್ರದರ್ಶನ ನಾಳೆಯಿಂದ
ರಾಯಚೂರು: ಹೈ-ಕ ಭಾಗದ 22 ಜನ ಚಿತ್ರಕಲಾ ಕಲಾವಿದರ ಕಲಾಕೃತಿಗಳ ಪ್ರದರ್ಶನವನ್ನು ಏ. ರಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಬೆಂಗಳೂರಿನ ಚಿತ್ರಕಲಾ ಪರಿಷತ್ ಏ.1ರಿಂದ ಏ.6 ರವರೆಗೆ ನಡೆಯಲಿರುವ ಚಿತ್ರಕಲಾ ಪ್ರದರ್ಶನವನ್ನು ಏ.1ರಂದು ಸಂಜೆ 5.30ಕ್ಕೆ ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ವಿ.ಜಿ. ಅಂದಾನಿ ನೆರವೇರಿಸಲಿದ್ದಾರೆ. ಕಲಾವಿದರಾದ ಅಮೀನ್ ರೆಡ್ಡಿ, ಎ.ಎಸ್. ಕುಮಾರ್ ಅಲಬನೂರು, ಮಲ್ಲಿಕಾರ್ಜುನ ಕಲ್ಮಲ್ಕರ್ ಮತ್ತು ಯಲ್ಲಪ್ಪ ಕಲ್ಮಲ್ಕರ್ ಅವರು ಬಿಡಿಸಿದ ಚಿತ್ರಗಳ ಪ್ರದರ್ಶನ ನಡೆಯಲಿದೆ.
ಆಯ್ಕೆ ಹಿನ್ನೆಲೆ ವೈದ್ಯರಿಗೆ ಸನ್ಮಾನ
ರಾಯಚೂರು: ನಗರದ ಖ್ಯಾತ ವೈದ್ಯ ಡಾ. ಮಹಾಲಿಂಗ ಅವರು ಕೇಂದ್ರ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಡಾ. ಅಂಬೇಡ್ಕರ್ ಫೌಂಡೇಷನ್ ಮಿನಿಸ್ಟರಿ ಫಾರ್ ಸೋಷಿಯಲ್ ಜಸ್ಟೀಸ್ ಮತ್ತು ಇಂಪ್ರೂವ್‌ಮೆಂಟ್ ಸಂಸ್ಥೆಗೆ ಸದಸ್ಯರಾಗಿ ನೇಮಕಗೊಂಡಿದ್ದಕ್ಕೆ ನವ ಕರ್ನಾಟಕ ಜಾಗೃತಿ ಸಮಿತಿ ಸಂತಸ ವ್ಯಕ್ತಪಡಿಸಿದೆ. ಈ ಕುರಿತು ಇತ್ತೀಚೆಗೆ ಡಾ. ಮಹಾಲಿಂಗ ಅವರನ್ನು ಸನ್ಮಾನಿಸಿದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ಪಟ್ಟಿ ಮತ್ತಿತರರು, ಸಂಸ್ಥೆಯ ಸದಸ್ಯರಾಗಿ ಡಾ. ಮಹಾಲಿಂಗ ಅವರು ಸಮಾಜದ ಹಿತಕ್ಕೆ ಪೂರಕವಾಗಿ ಮತ್ತಷ್ಟು ಕಾರ್ಯನಿರ್ವಹಿಸಲೆಂದು ಹಾರೈಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ವಾಸುದೇವ, ಮಹೇಶ ಕುಮಾರ್, ವೆಂಕಟೇಶ ದಿನ್ನಿ, ಹುಸೇನ್ ಬಾಷಾ, ನರಸಿಂಹಲು, ಮಹಾದೇವ ಇದ್ದರು.
ಮಹಿಳಾ ದೌರ್ಜನ್ಯ ವಿರುದ್ಧ ಜಾಗೃತಿ
ಮಸ್ಕಿ: ಮಹಿಳೆಯರು ಮತ್ತು ಮಕ್ಕಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಸಮಾಜದ ಸಹಕಾರ ಅವಶ್ಯ. ಇಂಥ ಪ್ರಕರಣಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲು ನೆರವಾಗುವಂತೆ ಪಿಎಸ್‌ಐ ಗುರುರಾಜ್ ಕಟ್ಟೀಮನಿ ಮನವಿ ಮಾಡಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಈಚೆಗೆ ಆಯೋಜಿಸಿದ್ದ ತೆರೆದ ಮನೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾರ್ಷಿಕೋತ್ಸವ
ರಾಯಚೂರು: ನಗರದ ಮಾಣಿಕ ಪ್ರಭುಮಂದಿರದ ಆವರಣದಲ್ಲಿ ಇತ್ತೀಚೆಗೆ ಮಾಣಿಕಪ್ರಭು ಅಂಧ ಮಕ್ಕಳ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸುಧಾರಣೆ ಸಮಿತಿ ಅಧ್ಯಕ್ಷ ಕಿಶನ್ ಗೋಪಾಲ್ ಝವರ್ ವಹಿಸಿದ್ದರು. ಅತಿಥಿಗಳಾಗಿ ಬ್ಯಾಂಕ್ ವ್ಯವಸ್ಥಾಪಕ ಕೆ.ಎಸ್. ಕಲಶೆಟ್ಟಿ, ಆರ್‌ಟಿಪಿಎಸ್ ನೌಕರರ ಸಹಕಾರ ಸಂಘದ ನಿರ್ದೇಶಕ ಅಮರೇಶ, ಸಾಕ್ಷಾತ್ಕಾರ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೀರೇಶ್, ಅಂಧ ಮಕ್ಕಳ ಶಾಲೆಯ ಶಿಕ್ಷಣ ಸಮಿತಿಯ ವ್ಯವಸ್ಥಾಪಕ ಪ್ರಭು ಪಾಂಚಾಳ್, ಪ್ರಧಾನ ಅರ್ಚಕ ವೆಂಕಟೇಶ ಪೂಜಾರಿ ಸೇರಿ ಅನೇಕರಿದ್ದರು. ಈ ವೇಳೆ ಶಾಲೆಯ ಅಂಧ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ವಿವಿಧೆಡೆಯಿಂದ ನಾಗರಿಕರು ಪಾಲ್ಗೊಂಡಿದ್ದರು.