ತುರ್ವಿಹಾಳ: ಕುಡಿವ ನೀರಿಗೂ ತತ್ವಾರ
ಕ.ಪ್ರ. ವಾರ್ತೆ ಸಿಂಧನೂರು ಮೇ 1
ಸಿಂಧನೂರು ತಾಲೂಕು ಎಂದರೆ ಸಂಪದ್ಭರಿತ ನಾಡು, ಬತ್ತದ ಕಣಜ, ಬಂಗಾರ ಬೆಳೆಯುವ ಪ್ರದೇಶ.. ಹೀಗೆ ಹಲವು ವಿಶೇಷಣೆಗಳಿಂದ ಕರೆಯುವುದು ವಾಡಿಕೆ. ಆದರೆ ದೀಪದ ಕೆಳಗೆ ಕತ್ತಲು ಇರುವಂತೆ ತಾಲೂಕಿನ ಟೇಲ್ಯಾಂಡ್ ಪ್ರದೇಶಗಳಲ್ಲಿ ಬೇಸಿಗೆ ಬಂದರೆ ಕುಡಿವ ನೀರಿಗೆ ಪರಿತಪಿಸುವುದು ತಪ್ಪೋದಿಲ್ಲ.
ವಿಶೇಷವಾಗಿ ತುರ್ವಿಹಾಳ ಹೋಬಳಿ ಭೌಗೋಳಿಕವಾಗಿ ಸಿಂಧನೂರು ತಾಲೂಕಿನಲ್ಲಿ ಇದ್ದರೂ ಅದು ಕುಷ್ಟಗಿ ಮತ್ತು ಲಿಂಗಸ್ಗೂರು ತಾಲೂಕಿನ ಖುಷ್ಕಿ ಪ್ರದೇಶದ ಹಳ್ಳಿಗಳಿಗಿಂತ ಭಿನ್ನವಾಗಿಲ್ಲ. ಪ್ರತಿವರ್ಷ ಬೇಸಿಗೆಯಲ್ಲಿ ಈ ಹೋಬಳಿಯ ಹತ್ತಾರು ಗ್ರಾಮಗಳ ಜನ ಬೆಂಗಳೂರಿಗೆ ಗುಳೆ ಹೋಗುವುದು ಸಾಮಾನ್ಯ.
ಗುಳೆ ಏಕೆ?: ಬೇಸಿಗೆಯಲ್ಲಿ ಮನುಷ್ಯರಿಗೆ ಮತ್ತು ದನಕರುಗಳಿಗೆ ಕುಡಿಯಲು ನೀರಿನ ಅಭಾವ ಉಂಟಾಗಿ ಬೋರ್‌ವೆಲ್‌ಗಳನ್ನು ಹುಡುಕಿಕೊಂಡು ನೀರಿಗಾಗಿ ಪರಿತಪಿಸುವ ಬದಲು ಒಂದೆರಡು ತಿಂಗಳು ಬೆಂಗಳೂರಿನಲ್ಲಿ ದುಡಿದು ಬರುವುದೇ ವಾಸಿ ಎಂದು ತಾವು ವಲಸೆ ಹೋಗುವುದಾಗಿ ಭೋಗಾಪುರದ ಲಿಂಗಪ್ಪ ನೋವಿನಿಂದ ಹೇಳುತ್ತಾನೆ.
ತುರ್ವಿಹಾಳ ಹೋಬಳಿ ವ್ಯಾಪ್ತಿಯ ಕಲಮಂಗಿ, ಉಮಲೂಟಿ, ಬೇರಿಗಿ, ರತ್ನಾಪುರ, ಮಾಂಪುರ, ಗುಂಡಾ, ವಗರನಾಳ, ಭೋಗಾಪುರ ಮತ್ತಿತರ ಗ್ರಾಮಗಳಲ್ಲಿ ಈಗ ಕುಡಿವ ನೀರಿಗೆ 15 ದಿನಗಳಿಂದ ಬರ ಪ್ರಾರಂಭವಾಗಿದೆ. ಇದ್ದ ಬೋರ್‌ವೆಲ್‌ಗಳು ಸಹ ಅಲ್ಲಲ್ಲಿ ದುರಸ್ತಿಗೊಳಗಾಗಿವೆ. ಕೆಲ ಗ್ರಾಮಗಳಲ್ಲಿ ಬೋರ್‌ವೆಲ್ ಹಾಕಿ ನೀರನ್ನು ಪೂರೈಸಲಾಗುತ್ತಿದೆ. ಮೇಲಿಂದ ಮೇಲೆ ವಿದ್ಯುತ್ ಕಡಿತಗೊಳ್ಳುವುದರಿಂದ ಗ್ರಾಮಸ್ಥರು ವಿದ್ಯುತ್ ಬರುವ ದಾರಿಯನ್ನೇ ಕಾಯ್ದು ಕುಳಿತು ಕೊಳ್ಳಬೇಕಾಗಿದೆ.
ಫ್ಲೋರೈಡ್ ಮಿಶ್ರಿತ ನೀರು: ಕಳೆದ ಏಳೆಂಟು ವರ್ಷಗಳಿಂದ ಬೋರ್‌ವೆಲ್‌ಗಳಲ್ಲಿ ಫ್ಲೋರೈಡ್ ಮಿಶ್ರಿತ ನೀರು ಇರುವುದರಿಂದ ಮೊಳಕಾಲು, ಮೊಳಕೈ, ಸಂಧಿವಾತ ಕಾಣಿಸಿಕೊಳ್ಳುತ್ತದೆ ಎಂದು ಪತ್ತೆಹಚ್ಚಲಾಗಿದೆ. ಪ್ರತಿ ಹಳ್ಳಿಯಲ್ಲಿ 30- 40 ವರ್ಷದ ವ್ಯಕ್ತಿಗಳು ಸಹ ಮೊಳಕಾಲು ನೋವಿನಿಂದ ಬಳಲುತ್ತಿದ್ದಾರೆ. ಈ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗದೆ 2004ರಲ್ಲಿ ಆಗಿನ ಶಾಸಕ ಹಂಪನಗೌಡ ಬಾದರ್ಲಿ, ಆಗ ಸಂಸದರಾಗಿದ್ದ ಕೆ.ವಿರೂಪಾಕ್ಷಪ್ಪ ಸೇರಿ ಸರ್ಕಾರದ ಮೇಲೆ ಒತ್ತಡ ತಂದು ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯನ್ನು ಸಿಂಧನೂರು ತಾಲೂಕಿನಲ್ಲಿ ಜಾರಿಗೆ ತಂದಿದ್ದರು.
ಪಂಚಾಯತ್‌ರಾಜ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್ ಬಿ.ಆರ್. ಗೌಡೂರು ಈಗಾಗಲೇ ಈ ಯೋಜನೆಯ ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ ಎಂದು ವರ್ಷದಿಂದ ಹೇಳುತ್ತಲೇ ಇದ್ದಾರೆ. ಆದರೆ ಇಲ್ಲಿಯವರೆಗೆ ಯೋಜನೆ ಪೂರ್ಣಗೊಂಡಿಲ್ಲ ಎಂದು ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರಿಗಿ ಆಪಾದಿಸಿದ್ದಾರೆ.
ಏನೇ ಆದರೂ ಮಹತ್ವಕಾಂಕ್ಷಿಯ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆ ಆದಷ್ಟು ಶೀಘ್ರ ಪೂರ್ಣಗೊಳ್ಳಲಿ ಎಂಬುದೇ ತುರ್ವಿಹಾಳ ಹೋಬಳಿಯ ಪ್ರತಿಯೊಂದು ಗ್ರಾಮದ ಜನರ ಒತ್ತಾಸೆಯಾಗಿದೆ.